ನುಡಿದಂತೆ ನಡೆದ ಕಾಂಗ್ರೆಸ್ ಸರ್ಕಾರ: ಶಾಸಕ ತುಕಾರಾಂ

| Published : Feb 21 2024, 02:03 AM IST

ನುಡಿದಂತೆ ನಡೆದ ಕಾಂಗ್ರೆಸ್ ಸರ್ಕಾರ: ಶಾಸಕ ತುಕಾರಾಂ
Share this Article
  • FB
  • TW
  • Linkdin
  • Email

ಸಾರಾಂಶ

೨೦೨೩ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ೫ ಗ್ಯಾರಂಟಿ ಯೋಜನೆ ಸೇರಿ ಎಸ್‌ಇಪಿ, ಟಿಎಸ್‌ಪಿಗೆ ರಾಜ್ಯ ಸರ್ಕಾರ ₹೮೬ ಸಾವಿರ ಕೋಟಿ ಖರ್ಚು ಮಾಡಿದೆ

ಸಂಡೂರು: ಪ್ರಧಾನಿಯಾಗಿದ್ದ ಮನಮೋಹನಸಿಂಗ್ ಹಾಗೂ ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರಗಳು ನುಡಿದಂತೆ ನಡೆದಿವೆ ಎಂದು ಶಾಸಕ ಈ. ತುಕಾರಾಂ ತಿಳಿಸಿದರು.

ತಾಲೂಕು ಕಚೇರಿ ಆವರಣದಲ್ಲಿ ಸೋಮವಾರ ನಡೆದ ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಮೌಲ್ಯಮಾಪನ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಅನ್ನ, ನೀರು ಹಾಗೂ ಹಣವನ್ನು ಮಿತವಾಗಿ ಬಳಸಬೇಕು. ಆಗಮಾತ್ರ ಜೀವನ ಸುಧಾರಿಸಲು ಸಾಧ್ಯ. ೨೦೨೩ರಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ೫ ಗ್ಯಾರಂಟಿ ಯೋಜನೆ ಸೇರಿ ಎಸ್‌ಇಪಿ, ಟಿಎಸ್‌ಪಿಗೆ ರಾಜ್ಯ ಸರ್ಕಾರ ₹೮೬ ಸಾವಿರ ಕೋಟಿ ಖರ್ಚು ಮಾಡಿದೆ ಎಂದರು.

ಅಚ್ಚೆ ದಿನ್ ಯಾರಿಗೆ ಬಂತು ಎಂದು ಪ್ರಶ್ನೆ ಮಾಡಿದ ಶಾಸಕರು, ಕೇಂದ್ರ ಸರ್ಕಾರ ಅಂಬಾನಿ, ಅದಾನಿಗಳ ₹೧೨ ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ. ಅದರ ಬದಲಿಗೆ ರೈತರ ಸಾಲ ಮನ್ನಾ ಮಾಡಿದ್ದರೆ ಅಗುತ್ತಿರಲಿಲ್ಲವೇ? ಗ್ಯಾಸ್ ಬೆಲೆ ಕಡಿಮೆ ಮಾಡಿದ್ದರೆ ಆಗುತ್ತಿರಲಿಲ್ಲವೇ ಎಂದು ಪ್ರಶ್ನಿಸಿದರು.

ಪ್ರಧಾನಿ ಮನಮೋಹನಸಿಂಗ್ ಪ್ರಧಾನಿಯಾಗಿದ್ದಾಗ ₹೫೪ ಲಕ್ಷ ಕೋಟಿಗಳಿದ್ದ ಭಾರತೀಯರ ಸಾಲ ಇದೀಗ ಪ್ರಧಾನಿ ನರೇಂದ್ರ ಮೋದಿಯವರಿಂದಾಗಿ ₹೨೦೬ ಲಕ್ಷ ಕೋಟಿಗಳಿಗೇರಿದೆ. ಸಂಡೂರು ತಾಲೂಕಿನಾದ್ಯಂತ ೫ ಗ್ಯಾರಂಟಿ ಯೋಜನೆಗಳಿಗೆ ₹೪೭.೧೫ ಕೋಟಿಗೂ ಹೆಚ್ಚು ಹಣ ಖರ್ಚಾಗಿದೆ. ರಾಜ್ಯ ಬಜೆಟ್‌ನಲ್ಲಿ ತಾಲೂಕಿನ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಸ್ಕಿಲ್ ಡೆವಲೆಪ್‌ಮೆಂಟ್ ಕೇಂದ್ರಕ್ಕಾಗಿ ₹೩೦೦ ಕೊಟಿ ಮಂಜೂರು ಮಾಡಿಸಿಕೊಂಡು ಬಂದಿರುವೆ. ಧರ್ಮಾಪುರ ಬಳಿ ೧೧ ಎಕರೆಯಲ್ಲಿ ₹೨೨೦ ಕೋಟಿ ವೆಚ್ಚದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಸದ್ಯದಲ್ಲೆ ಭೂಮಿಪೂಜೆ ನೆರವೇರಿಸಲಾಗುವುದು ಎಂದರು.

ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ನಾಗರತ್ನಮ್ಮ ಮಾತನಾಡಿ, ಶಾಸಕ ಈ. ತುಕಾರಾಂ ಅವರು ಅಂಗನವಾಡಿ ಕೇಂದ್ರಗಳಿಗೆ ಫ್ರಿಜ್‌ಗಳನ್ನು ಕೊಟ್ಟಿರುವ ರಾಜ್ಯದ ಏಕೈಕ ಶಾಸಕರಾಗಿದ್ದಾರೆ. ಯುಪಿಎಸ್(ಬ್ಯಾಟರಿ)ಗಳನ್ನು ಕೊಟ್ಟಿದ್ದಾರೆ. ಬರುವ ಯುಗಾದಿಗೆಲ್ಲಾ ಕುಕ್ಕರ್ ನೀಡುವುದಾಗಿ ಹೇಳಿದ್ದಾರೆ. ಗ್ಯಾರಂಟಿಗಳಿಂದ ಶೇ. ೯೫ ಜನರಿಗೆ ಉಪಯೋಗವಾಗಿದೆ. ೬ನೇ ಗ್ಯಾರಂಟಿ ಅಂಗನವಾಡಿ ನೌಕರರದ್ದಾಗಬೇಕು ಎಂದರು.

ಎಡಿಸಿ ಮಹಮ್ಮದ್ ಜುಬೇರ್, ತಾಪಂ ಇಒ ಎಸ್. ಷಡಾಕ್ಷರಯ್ಯ ಮಾತನಾಡಿದರು. ಸಿಡಿಪಿಒ ಎಳೆನಾಗಪ್ಪ, ಇಸಿಒ ಬಸವರಾಜ ಅವರು ಕಾರ್ಯಕ್ರಮ ನಿರ್ವಹಿಸಿದರು.

ತಹಸೀಲ್ದಾರ್ ಜಿ. ಅನಿಲ್ ಕುಮಾರ್, ಮುಖಂಡರಾದ ಕೆ. ಸತ್ಯಪ್ಪ, ಆಶಾಲತಾ ಸೋಮಪ್ಪ, ವಸಂತಕುಮಾರ್, ಪುರಸಭೆ ಸದಸ್ಯರಾದ ಈರೇಶ್ ಶಿಂಧೆ, ಎಲ್.ಎಚ್. ಶಿವಕುಮಾರ್, ಕೆ.ವಿ. ಸುರೇಶ್, ಸಿ. ಅಶೋಕ್, ಬ್ರಹ್ಮಯ್ಯ, ಮುಖ್ಯಾಧಿಕಾರಿ ಜಯಣ್ಣ ಇದ್ದರು.