ಒಳ ಮೀಸಲು ಜಾರಿಗೆ ಕಾಂಗ್ರೆಸ್ ಸರ್ಕಾರ ಮೀನಮೇಷ: ಮುನಿಯಪ್ಪ

| Published : Nov 09 2024, 01:04 AM IST

ಒಳ ಮೀಸಲು ಜಾರಿಗೆ ಕಾಂಗ್ರೆಸ್ ಸರ್ಕಾರ ಮೀನಮೇಷ: ಮುನಿಯಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ೧೮೦ ಕೋಟಿ ರು. ವೆಚ್ಚದಲ್ಲಿ ಕಾಂತರಾಜು ಆಯೋಗ ಜಾತಿ ಜನಗಣತಿ ನಡೆಸಿ ವರದಿ ಪಡೆದರೂ ಸರ್ಕಾರ ಕೆಲವರ ಒತ್ತಡಕ್ಕೆ ಮಣಿದು ಅನುಷ್ಠಾನಗೊಳಿಸದೆ ನಿರ್ಲಕ್ಷ್ಯವಹಿಸಿದೆ. ಒಳ ಮೀಸಲಾತಿ ಜಾರಿಯಾದರೆ ಎಲ್ಲರಿಗೂ ಅನುಕೂಲವಾಗುತ್ತದೆ. ತಕ್ಷಣವೇ ಅದನ್ನು ಅನುಷ್ಠಾನಗೊಳಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಒಳ ಮೀಸಲಾತಿ ಜಾರಿಗೆ ಸಂಪುಟದಲ್ಲಿ ಒಪ್ಪಿಗೆ ಪಡೆದರೂ ಇನ್ನೂ ರಾಜ್ಯ ಸರ್ಕಾರ ಅನುಷ್ಠಾನಗೊಳಿಸುವಲ್ಲಿ ಮೀನಾಮೇಷ ಎಣಿಸುತ್ತಿದೆ ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಆರೋಪಿಸಿದರು.

೧೯೭೫ರಲ್ಲಿ ಹರಿಯಾಣ- ಪಂಜಾಬ್‌ನಲ್ಲಿ ಹೋರಾಟ ಪ್ರಾರಂಭವಾಯಿತು. ೧೯೯೬ರಲ್ಲಿ ತಮಿಳುನಾಡಿನಲ್ಲೂ ಪ್ರಸ್ತಾಪವಾಯಿತು. ನಂತರ ಆಂಧ್ರ, ಕರ್ನಾಟಕದಲ್ಲೂ ೩೫ ವರ್ಷಗಳಿಂದ ಹೋರಾಟ ನಡೆಯುತ್ತಲೇ ಇದೆ. ಆದರೂ ಒಳ ಮೀಸಲಾತಿ ಜಾರಿಯಾಗಲೇ ಇಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ೧೮೦ ಕೋಟಿ ರು. ವೆಚ್ಚದಲ್ಲಿ ಕಾಂತರಾಜು ಆಯೋಗ ಜಾತಿ ಜನಗಣತಿ ನಡೆಸಿ ವರದಿ ಪಡೆದರೂ ಸರ್ಕಾರ ಕೆಲವರ ಒತ್ತಡಕ್ಕೆ ಮಣಿದು ಅನುಷ್ಠಾನಗೊಳಿಸದೆ ನಿರ್ಲಕ್ಷ್ಯವಹಿಸಿದೆ. ಒಳ ಮೀಸಲಾತಿ ಜಾರಿಯಾದರೆ ಎಲ್ಲರಿಗೂ ಅನುಕೂಲವಾಗುತ್ತದೆ. ತಕ್ಷಣವೇ ಅದನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟ ಮೀಸಲಾತಿಯನ್ನು ವರದಿಯಂತೆ ಜಾರಿ ಮಾಡದೆ ದತ್ತಾಂಶ ಸಂಗ್ರಹಣೆ ನೆಪ ಒಡ್ಡಿ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಮತ್ತೊಂದು ಆಯೋಗ ರಚಿಸಿರುವುದು ಅನವಶ್ಯಕ ಮತ್ತು ಕಾಲಹರಣದ ತಂತ್ರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಾವನೂರು ಆಯೋಗದಿಂದ ಮೊದಲ್ಗೊಂಡು ನ್ಯಾಯಮೂರ್ತಿ ಸದಾಶಿವ ಆಯೋಗ, ಕಾಂತರಾಜ ಆಯೋಗ ಹಾಗೂ ಜೆ.ಸಿ. ಮಾದುಸ್ವಾಮಿ ಸಮಿತಿಗಳು ನೀಡಿರುವ ವರದಿಗಳಲ್ಲಿ ಪರಿಶಿಷ್ಟ ಜಾತಿಯ ವಿವಿಧ ಜಾತಿಗಳ ಜನಸಂಖ್ಯೆಗೆ ಸಂಬಂಧಿಸಿದ ಮಾಹಿತಿ ಲಭ್ಯವಿದ್ದು, ಇದನ್ನು ಪರಿಗಣಿಸಿ ಒಳ ಮೀಸಲಾತಿಯನ್ನು ವಿಳಂಬ ಮಾಡದೆ ಕೂಡಲೇ ಜಾರಿಗೆ ತರಬೇಕೆಂದು ಒತ್ತಾಯಿಸಿದರು.

ಪರಿಶಿಷ್ಟ ಜಾತಿ-ಪಂಗಡದಂತೆ ಅತಿ ಹಿಂದುಳಿದ ವರ್ಗಗಳಿಗೆ ಕರ್ನಾಟಕದಲ್ಲಿ ಮೀಸಲಾತಿ ಪ್ರಮಾಣದಲ್ಲಿ ಅನ್ಯಾಯವಾಗಿದೆ. ಆದ ಕಾರಣ ಮೇಲ್ಜಾತಿಗಳ ಒತ್ತಡಕ್ಕೆ ಮಣಿಯದ ರಾಜ್ಯ ಸರ್ಕಾರ ಕಾಂತರಾಜ ವರದಿಯನ್ನು ತಕ್ಷಣದಿಂದ ಜಾರಿಗೆ ತರಬೇಕೆಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ವೆಂಕಟಗಿರಿಯಯ್ಯ, ರಾಜ್ಯ ಸಂಯೋಜಕ ಆರ್.ಮುನಿಯಪ್ಪ , ಅಂದಾನಪ್ಪ, ಎಂ.ಜಿ. ಹೇಮಾವತಿ, ಆನಂದ, ಅನಿಲ್ ಕುಮಾರ್ ಗೋಷ್ಟಿಯಲ್ಲಿದ್ದರು.