ಮೋದಿಯಿಂದ ಕಾಂಗ್ರೆಸ್‌ ಗ್ಯಾರಂಟಿ ಹೈಜಾಕ್‌

| Published : Apr 30 2024, 02:05 AM IST

ಸಾರಾಂಶ

ನಮ್ಮ ಗ್ಯಾರಂಟಿಗಳನ್ನು ಪ್ರಧಾನಿ ನರೇಂದ್ರ ಮೋದಿ ಹೈಜಾಕ್ ಮಾಡಿದ್ದಾರೆ. ದೇಶದಲ್ಲಿ ಬೇರೆ ಬೇರೆ ಪಕ್ಷದ 141 ಶಾಸಕರನ್ನು ಹೈಜಾಕ್ ಮಾಡಿ ತಮ್ಮ ಪಕ್ಷದ ಸರ್ಕಾರ ಮಾಡಿಕೊಂಡಿದ್ದಾರೆ.

ಹುಬ್ಬಳ್ಳಿ:

ಕಾಂಗ್ರೆಸ್ಸಿನವರು ಜನರಿಗಾಗಿ ಯೋಜನೆ ಕೊಟ್ಟರೆ ಅವುಗಳನ್ನು ಬಿಜೆಪಿ ಕಿತ್ತುಕೊಳ್ಳುತ್ತಿದೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಎಚ್.ಎಂ. ರೇವಣ್ಣ ಆರೋಪಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ನಾವು ರಾಜ್ಯದ ಜನತೆಗೆ ನೀಡಿರುವ ಗ್ಯಾರಂಟಿ ಯೋಜನೆ ಯಾವುದೇ ಒಂದು ಪಕ್ಷ, ಜಾತಿಗೆ ಸೀಮಿತವಾಗಿಲ್ಲ. ಎಲ್ಲ ವರ್ಗದ ಜನರಿಗೆ ಸೇರಿದ್ದಾಗಿದೆ ಎಂದರು.

ನಮ್ಮ ಗ್ಯಾರಂಟಿಗಳನ್ನು ಪ್ರಧಾನಿ ನರೇಂದ್ರ ಮೋದಿ ಹೈಜಾಕ್ ಮಾಡಿದ್ದಾರೆ. ದೇಶದಲ್ಲಿ ಬೇರೆ ಬೇರೆ ಪಕ್ಷದ 141 ಶಾಸಕರನ್ನು ಹೈಜಾಕ್ ಮಾಡಿ ತಮ್ಮ ಪಕ್ಷದ ಸರ್ಕಾರ ಮಾಡಿಕೊಂಡಿದ್ದಾರೆ. ಗ್ಯಾರಂಟಿಗಳ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡಿದವರು ಈಗ ಮೋದಿ ಗ್ಯಾರಂಟಿ ಎಂದು ಪ್ರಚಾರ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಮಹಿಳಾ ದೌರ್ಜನ್ಯದ ಬಗ್ಗೆ ಮಾತನಾಡುವ ನರೇಂದ್ರ ಮೋದಿ ಅವರು ಮಹಿಳಾ ಕುಸ್ತಿಪಟುಗಳು ಪ್ರತಿಭಟನೆ ಮಾಡುವಾಗ ಏನ್ ಮಾಡುತ್ತಿದ್ದರು? ಮೋದಿ ಸರ್ಕಾರದಲ್ಲಿಯೇ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚಾಗಿವೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್ ಪ್ರಕರಣ. ಭ್ರಷ್ಟಾಚಾರದಲ್ಲಿಯೂ ಮೋದಿ ಸರ್ಕಾರ ಮುಂದಿದೆ. ಎಲೆಕ್ಷನ್ ಬಾಂಡ್ ಹಗರಣವೇ ಇದಕ್ಕೆ ಸಾಕ್ಷಿ ಎಂದು ರೇವಣ್ಣ ದೂರಿದರು.

ರಾಜ್ಯದ ಬಗ್ಗೆ ಒಂದೇ ಒಂದು ಮಾತನ್ನು ಜೋಶಿ ಅವರು ಈ ವರೆಗೂ ಸಂಸತ್‌ನಲ್ಲಿ ಮಾತನಾಡಿಲ್ಲ. ಬರ ಪರಿಹಾರವನ್ನು ಕೇಳಿದ್ದಷ್ಟು ಕೊಡದೆ, ಕನ್ನಡಿಗರಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ. ನಮ್ಮದು ಸಾಧನೆ ಪಟ್ಟಿ ಮೇಲೆ ಚುನಾವಣೆ ಎದುರುಸುತ್ತಿದ್ದರೆ, ಬಿಜೆಪಿ ದ್ರೋಹದ ಪಟ್ಟಿಯ ಮೇಲೆ ಚುನಾವಣೆ ಮಾಡುತ್ತಿದೆ ಎಂದು ಆರೋಪಿಸಿದರು.

ಹು-ಧಾ ಮಹಾನಗರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ, ಗ್ರಾಮೀಣ ಅಧ್ಯಕ್ಷ ಅನಿಲಕುಮಾರ ಪಾಟೀಲ, ರಾಬರ್ಟ್ ದದ್ದಾಪುರಿ, ಬಸವರಾಜ ಗುರಿಕಾರ, ವೆಂಕಟೇಶ, ರಾಮಚಂದ್ರಪ್ಪ ಸೇರಿದಂತೆ ಹಲವರಿದ್ದರು.