79 ಕೆರೆಗಳಿಗೆ ನೀರು ತುಂಬಿಸಲು ಅನುದಾನ ನೀಡಿದ್ದೆ ಕಾಂಗ್ರೆಸ್

| Published : Mar 16 2025, 01:47 AM IST

79 ಕೆರೆಗಳಿಗೆ ನೀರು ತುಂಬಿಸಲು ಅನುದಾನ ನೀಡಿದ್ದೆ ಕಾಂಗ್ರೆಸ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಭದ್ರಾ ಮೇಲ್ದಂಡೆ ಯೋಜನೆಯಿಂದ ತಾಲೂಕಿನ 79 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಅನುದಾನ ನೀಡಿದ್ದೆ ಕಾಂಗ್ರೆಸ್ ಸರ್ಕಾರ, ಈ ವಿಚಾರದಲ್ಲಿ ಬಿಜೆಪಿ ಆರೋಪ ಶುದ್ಧ ಸುಳ್ಳು, ಅದನ್ನು ನಾವು ಖಂಡಿಸುತ್ತೇವೆ ಎಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಗೋವಿಂದೇಗೌಡ ಹೇಳಿದ್ದಾರೆ.

ಬಿಜೆಪಿಯಿಂದ ಸುಳ್ಳು ಆರೋಪ: ರಮೇಶ್ ಗೋವಿಂದೇಗೌಡ

ಕನ್ನಡಪ್ರಭವಾರ್ತೆ, ತರೀಕೆರೆ

ಭದ್ರಾ ಮೇಲ್ದಂಡೆ ಯೋಜನೆಯಿಂದ ತಾಲೂಕಿನ 79 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಅನುದಾನ ನೀಡಿದ್ದೆ ಕಾಂಗ್ರೆಸ್ ಸರ್ಕಾರ, ಈ ವಿಚಾರದಲ್ಲಿ ಬಿಜೆಪಿ ಆರೋಪ ಶುದ್ಧ ಸುಳ್ಳು, ಅದನ್ನು ನಾವು ಖಂಡಿಸುತ್ತೇವೆ ಎಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಗೋವಿಂದೇಗೌಡ ಹೇಳಿದ್ದಾರೆ.ಶನಿವಾರ ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2017-18ನೇ ಸಾಲಿನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ 2018 ಜನವರಿ 5ರಂದು ಗುದ್ದಲಿ ಪೂಜೆ ನೆರವೇರಿಸಿ ತರೀಕೆರೆ ಏತ ನೀರಾವರಿ ಯೋಜನೆಯನ್ನು ಎರಡು ಪ್ಯಾಕೇಜ್ ಗಳಾಗಿ ವಿಂಗಡಿಸಿ ಕಾಮಗಾರಿ ಕೈಗತ್ತಿಕೊಳ್ಳಲಾಯಿತು. ಕಾಂಗ್ರೆಸ್ ಸರ್ಕಾರ ಶಾಸಕ ಜಿ.ಎಚ್.ಶ್ರೀನಿವಾಸ್ ನೇತೃತ್ವದಲ್ಲಿಯೇ ಅನುದಾನ ನೀಡಿದ್ದು, ಅಜ್ಜಂಪುರದಲ್ಲಿಯೇ ಈ ಕಾಮಗಾರಿಗೆ ಗುದ್ದಲಿಪೂಜೆ ನಡೆಯಿತು ಎಂದು ವಿವರಿಸಿದರು.

ತರೀಕೆರೆ ಏತ ನೀರಾವರಿ ಯೋಜನೆ ಪ್ಯಾಕೇಜ್-02 ಕಾಮಗಾರಿಗೆ 2017ರ ಆಗಸ್ಟ್‌ 24ರಂದು ಟೆಂಡರ್ ಆಹ್ವಾನಿಸಿ, ಟರ್ನ್ ಕೀ ಆಧಾರದ ಮೇಲೆ ಟೆಂಡರ್‌ ಮೊತ್ತ ₹481.06 ಕೋಟಿಗೆ ಶೇ.9 ರಷ್ಟು ಹೆಚ್ಚು ಅಂದರೆ ₹524.36 ಕೋಟಿಗೆ ಬೆಂಗಳೂರಿನ ಮೆಗಾ ಇಂಜಿನಿಯರಿಂಗ್-ನೆಟಾಫೀಮ್ ಇರಿಗೇಶನ್ ಅವರಿಗೆ 2018 ಮಾರ್ಚ 15 ರಂದು ಕಾಮಗಾರಿ ವಹಿಸಲಾಗಿದೆ ಎಂದು ವಿವರ ನೀಡಿದರು.

ತರೀಕೆರೆ ಏತ ನೀರಾವರಿ ಯೋಜನೆಯಡಿ 79 ಕೆರೆಗಳಿಗೆ ನೀರು ತುಂಬಿಸುವ ಮೂಲಕ 49.790 ಎಕರೆ ಸೂಕ್ಷ್ಮ ನೀರಾವರಿ ಸಾಮರ್ಥ್ಯ ಕಲ್ಪಿಸಲಾಗಿದೆ. ಬಿಜೆಪಿ ಸರ್ಕಾರ ಒಂದೇ ಒಂದು ಪೈಸೆ ಹಣ ನೀಡಿಲ್ಲ ಎಂದು ಆರೋಪಿಸಿದರು.

ತರೀಕೆರೆ ಪಟ್ಟಣದಲ್ಲಿ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣ ಮರು ನಿರ್ಮಾಣಕ್ಕೆ 9 ಕೋಟಿ, ನೂತನ ಪುರಸಭೆ ಕಟ್ಟಡಕ್ಕೆ ₹10 ಕೋಟಿ, ತರೀಕೆರೆ ಪಟ್ಟಣದಲ್ಲಿ ಅಭಿವೃದ್ಧಿ ಕಾಮಗಾರಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ₹5 ಕೋಟಿ ಅಲ್ಪಸಂಖ್ಯಾತರ ಕಾಲೋನಿಗಳಲ್ಲಿನ ಅಭಿವೃದ್ದಿ ಕಾಮಗಾರಿಗಳಿಗೆ ₹3 ಕೋಟಿ ಎಂಎಡಿಬಿ ಅನುದಾನ ₹60 ಲಕ್ಷ ಅನುದಾನವನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ತಂದಿದ್ದಾರೆ ಎಂದು ಹೇಳಿದರು.

ಶಾಸಕ ಜಿ.ಎಚ್.ಶ್ರೀನಿವಾಸ್ ಅವರ ಪತ್ನಿ ವಾಣಿ ಶ್ರೀನಿವಾಸ್, ಮಗಳು ರಚನಾ ಸಾಮಾಜ ಸೇವೆಯಲ್ಲಿ ತೊಡಗಿದ್ದು ಅವರ ಬಗ್ಗೆ ತಾಲೂಕಿನ ಸಾರ್ವಜನಿಕರಿಂದ ಇಲ್ಲಿವರೆಗೆ ಒಂದೇ ಒಂದು ಅಪಸ್ವರ ಕೂಡ ಬಂದಿಲ್ಲ. ವಾಣಿ ಶ್ರೀನಿವಾಸ್ ಧಾರ್ಮಿಕ ಮತ್ತು ಸಾಮಾಜಿಕ ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ರಚನಾ ಶ್ರೀನಿವಾಸ್ ಶಾಲಾ ಕಾಲೇಜುಗಳ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದು ವಿದ್ಯಾರ್ಥಿನಿಯರ ಸುರಕ್ಷತೆಗೆ ಪೊಲೀಸ್ ಸಿಬ್ಬಂದಿ ನೇಮಕ, ಕಾಲೇಜು ಶೌಚಾಲಯ ನಿರ್ಮಿಸಲು ಶ್ರಮಿಸಿದ್ದಾರೆ ಎಂದು ಹೇಳಿದರು.

₹51.64 ಕೋಟಿ ಗಳಲ್ಲಿ ರಸ್ತೆ ಅಭಿವೃದ್ಧಿ: ಶಾಸಕ ಜಿ.ಎಚ್.ಶ್ರೀನಿವಾಸ್ ಚುನಾವಣೆಯಲ್ಲಿ ನೀಡಿದ ಎಲ್ಲ ಭರವಸೆ ಈಡೇರಿಸುತ್ತಿದ್ದಾರೆ. ತಾಲೂಕಿಗೆ ಕೆಪಿಎಸ್ ಶಾಲೆ ಮಂಜೂರು ಮಾಡಿಸಿದ್ದಾರೆ. ತರೀಕೆರೆ ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 206ಯನ್ನು ಚತುಷ್ಪದ ರಸ್ತೆಯಾಗಿ ಅಭಿವೃದ್ಧಿ ಪಡಿಸಲು ₹51.64 ಕೋಟಿ ಸರ್ಕಾರದಿಂದ ಮಂಜೂರು ಮಾಡಿಸಿದ್ದು ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ಬಿಜೆಪಿ ನೇತೃತ್ವದಲ್ಲಿ ಅದ ದೋರನಾಳು ರಸ್ತೆ ಕಾಮಗಾರಿ ಕಳಪೆ ಯಾಗಿದ್ದು ರಸ್ತೆ ಗುಂಡಿ ಬಿದ್ದು ಅಪಘಾತಗಳು ಸಂಭವಿಸುತ್ತಿದೆ ಎಂದು ಆರೋಪಿಸಿದರು.ಶಾಸಕ ಜಿ.ಎಚ್.ಶ್ರೀನಿವಾಸ್ ಜನರ ನೋವನ್ನು ಅರ್ಥ ಮಾಡಿಕೊಂಡು ಸ್ಪಂದಿಸುವುದಲ್ಲದೆ ಅತಿ ಶೀಘ್ರ ಎಲ್ಲಾ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಲಿದ್ದಾರೆ ಎಂದರು.ಕೆಡಿಪಿ ಸದಸ್ಯ ಮೆಹಬೂಬ್ ಮಾತನಾಡಿ ಹಿಂದಿನ ಬಿಜೆಪಿ ಶಾಸಕರು ಕೆರೆಗಳಿಗೆ ನೀರು ತುಂಬಿಸಿಲ್ಲ. ಅನುದಾನ ತಂದಿಲ್ಲ ಎಂದು ಆರೋಪಿಸಿದರು.ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಲಕ್ಷ್ಮಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯೆ ಲಕ್ಷ್ಮೀಬಾಯಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.15ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಗೋವಿಂದೇಗೌಡ ಮಾತನಾಡಿದರು. ಕೆಡಿಪಿ ಸದಸ್ಯರು ಮೆಹಬೂಬ್, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಲಕ್ಷ್ಮಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯೆ ಲಕ್ಷ್ಮೀಬಾಯಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರು ಮತ್ತಿತರರು ಇದ್ದರು.