ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಬಿಟ್ಟಿ ಗ್ಯಾರಂಟಿಗಳನ್ನು ಘೋಷಿಸಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಅಭಿವೃದ್ಧಿ ಮರೆತು ವಸೂಲಿಗೆ ಇಳಿದಿದೆ ಎಂದು ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಆರೋಪಿಸಿದರು.ಭಾರತೀಯ ಜನತಾಪಾರ್ಟಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ನಗರ ಮತ್ತು ಗ್ರಾಮಾಂತರ ಮಂಡಲದ ವತಿಯಿಂದ ರೆಡ್ಡಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರಮೋದಿರವರು 80 ಕೋಟಿ ಜನರಿಗೆ ಉಚಿತ ಅಕ್ಕಿ ಕೊಡುತ್ತಿದ್ದಾರೆ. ಪುಕ್ಕಟೆ ಆಸೆಗಳನ್ನು ಹುಟ್ಟಿಸಿ ವೋಟು ತೆಗೆದುಕೊಳ್ಳುವುದು ಕಾಂಗ್ರೆಸ್ ಜಾಯಮಾನವೆಂದರು.
ಬ್ರಿಟೀಷರ ವಿರುದ್ದ ಹೋರಾಡಲು ಸಂಘಟನೆಯಾಗಿ ಹುಟ್ಟಿಕೊಂಡ ಕಾಂಗ್ರೆಸ್ ನಂತರ ರಾಜಕೀಯ ಪಕ್ಷವಾಗಿ ಬೆಳೆಯಿತು. ಸ್ವಾತಂತ್ರ್ಯದ ನಂತರ ಕಾಂಗ್ರೆಸ್‍ನ್ನು ವಿಸರ್ಜಿಸು ವಂತೆ ಗಾಂಧಿ ಹೇಳಿದ್ದರು. ಆದರೆ ನೆಹರು ರಾಜಕೀಯ ಪಕ್ಷವಾಗಿ ಕಟ್ಟಿಕೊಂಡರು. ಆರ್ಥಿಕ ವ್ಯವಸ್ಥೆಯಲ್ಲಿ ಭಾರತ ಐದನೇ ಸ್ಥಾನದಲ್ಲಿರುವುದನ್ನು ಕಂಡು ನಮ್ಮ ದೇಶ ಗಟ್ಟಿಯಾಗಿದೆ ಎಂದು ವಿರೋಧಿ ಚೈನಾ ಹೇಳುತ್ತಿದೆ. ಮತ ಕೇಳಲು ಹಿಂಜರಿಕೆ ಬೇಡ ಎಂದು ತಿಪ್ಪಾರೆಡ್ಡಿ ಹೇಳಿದರು.ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಉಸ್ತುವಾರಿ ಎಸ್.ಲಿಂಗಮೂರ್ತಿ ಮಾತನಾಡಿ, ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅಯೋಧ್ಯೆಯಲ್ಲಿ ರಾಮಮಂದಿರವನ್ನು ಉದ್ಘಾಟಿಸಿರುವ ಪ್ರಧಾನಿ ಮೋದಿರವರು ಐದು ನೂರು ವರ್ಷಗಳ ಭಾರತೀಯರ ಕನಸನ್ನು ನನಸುಗೊಳಿಸಿ ಸನಾತನ ಧರ್ಮ ಎತ್ತಿ ಹಿಡಿದಿದ್ದಾರೆ. ಸಾಮಾಜಿಕ, ಭೌಗೋಳಿಕ, ಆಹಾರಭದ್ರತೆ, ಮಹಿಳಾ ಸಬಲೀಕರಣದ ಕುರಿತು ಕೇಂದ್ರ ಸರ್ಕಾರ ಹಾಕಿಕೊಂಡಿರುವ ಕಾರ್ಯಕ್ರಮಗಳನ್ನು ಜನತೆಗೆ ತಿಳಿಸಿ. ಚುನಾವಣೆಯ ಸೋಲು-ಗೆಲುವಿನ ನಡುವೆ ದೇಶ ಗೆಲ್ಲಬೇಕು ಎಂದರು.
ಗ್ರಾಮ ಚಲೋ ಅಭಿಯಾನದ ಜಿಲ್ಲಾ ಸಂಚಾಲಕ ಡಾ.ಸಿದ್ದಾರ್ಥ ಮಾತನಾಡಿ, ಲೋಕಸಭೆ ಚುನಾವಣೆಯನ್ನು ಎದುರಿಸಬೇಕಾಗಿರುವುದರಿಂದ ಕಾರ್ಯಕರ್ತರು ಪ್ರತಿ ಮನೆ ಮನೆಗೆ ಹೋಗಿ ಪ್ರಧಾನಿ ಮೋದಿರವರು ಹತ್ತು ವರ್ಷಗಳಲ್ಲಿ ಮಾಡಿರುವ ಸಾಧನೆಯನ್ನು ತಿಳಿಸಬೇಕು. ವಿರೋಧ ಪಕ್ಷದವರ ಸುಳ್ಳು ಭರವಸೆಗಳನ್ನು ಜನತೆಗೆ ಮುಟ್ಟಿಸಿ, ಬಿಜೆಪಿ ಸಾಧನೆಗಳನ್ನು ಹೇಳಬೇಕಿದೆ ಎಂದು ತಿಳಿಸಿದರು.ಅಭಿಯಾನದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ, ನರೇಂದ್ರಮೋದಿರವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕಾಗಿರುವುದರಿಂದ ಕಾರ್ಯ ಕರ್ತರು ಏಕಚಿತ್ತದಿಂದ ಕೆಲಸ ಮಾಡಬೇಕು. ಅಟಲ್ ಬಿಹಾರಿ ವಾಜಪೇಯಿರವರು ದೇಶದ ಪ್ರಧಾನಿಯಾಗಿದ್ದಾಗ ಪ್ರತಿ ಗ್ರಾಮದ ರಸ್ತೆಗಳು ಮುಖ್ಯರಸ್ತೆಗೆ ಕೂಡುವಂತಾಗಲಿ ಎನ್ನುವ ಉದ್ದೇಶದಿಂದ ಗ್ರಾಮ ಸಡಕ್ ಯೋಜನೆಯನ್ನು ಜಾರಿಗೆ ತಂದರು. ಸರ್ವ ಶಿಕ್ಷ ಅಭಿಯಾನ, ಚತುಷ್ಪಥ ರಸ್ತೆ ಅವರ ಕಾಲದ್ದು, ಐದು ನೂರು ವರ್ಷಗಳ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. ಮಂಡ್ಯ ಜಿಲ್ಲೆಯ ಕೆರಗೋಡಿನಲ್ಲಿ ಹನುಮ ಧ್ವಜ ತೆರವು ಹಾಗೂ ಹುಬ್ಬಳ್ಳಿಯಲ್ಲಿ ಶ್ರೀಕಾಂತ ಪೂಜಾರಿ ಬಂಧನ ಇವುಗಳೆಲ್ಲವನ್ನು ಜನತೆಯ ಮುಂದಿಡಬೇಕು. ದೇಶ ಕಟ್ಟುವ ಕೆಲಸ ಮಾಡಿದಾಗ ಸಮೃದ್ಧ ಭಾರತ ನಿರ್ಮಾಣವಾಗಲಿದೆ ಎಂದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ನವೀನ್ ಚಾಲುಕ್ಯ, ಗ್ರಾಮಾಂತರ ಮಂಡಲ ಅಧ್ಯಕ್ಷ ಕಲ್ಲೇಶಯ್ಯ, ಗ್ರಾಮ ಚಲೋ ಅಭಿಯಾನದ ಸಹ ಸಂಚಾಲಕ ಶಿವಣ್ಣ, ನಗರಸಭೆ ಸದಸ್ಯರುಗಳಾದ ಶ್ರೀನಿವಾಸ್, ಸುರೇಶ್, ಬಿಜೆಪಿ. ಮಹಿಳಾಧ್ಯಕ್ಷೆ ಶೈಲಜಾರೆಡ್ಡಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಆನಂದ್, ವೀಣ, ಶೀಲ, ಭಾರ್ಗವಿ ದ್ರಾವಿಡ್, ತಿಮ್ಮಣ್ಣ, ರವಿಕುಮಾರ್ ವೇದಿಕೆಯಲ್ಲಿದ್ದರು.