ಎಚ್ಡಿಕೆ, ಜೆಡಿಎಸ್ ಮುಗಿಸುವ ಅನುಭವ ಕಾಂಗ್ರೆಸ್‌ಗೇ ಹೆಚ್ಚು, ಬಿಜೆಪಿಗಲ್ಲ: ಜೋಶಿ

| Published : Aug 24 2024, 01:26 AM IST

ಎಚ್ಡಿಕೆ, ಜೆಡಿಎಸ್ ಮುಗಿಸುವ ಅನುಭವ ಕಾಂಗ್ರೆಸ್‌ಗೇ ಹೆಚ್ಚು, ಬಿಜೆಪಿಗಲ್ಲ: ಜೋಶಿ
Share this Article
  • FB
  • TW
  • Linkdin
  • Email

ಸಾರಾಂಶ

ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಇದ್ದಾಗ ಹಗರಣ ನಡೆಸಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸುತ್ತಿದೆ. ಇದೀಗ ತಮ್ಮದೆ ಸರ್ಕಾರ ಅಧಿಕಾರದಲ್ಲಿದ್ದು ಹಗರಣ ನಡೆಸಿದ್ದರೆ ತನಿಖೆ ನಡೆಸಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಹುಬ್ಬಳ್ಳಿ:

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮುಗಿಸುವ ಅನುಭವ ಕಾಂಗ್ರೆಸ್‌ಗೇ ಹೆಚ್ಚಿದೆ, ಬಿಜೆಪಿಗಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಾಂಗ್ರೆಸ್‌ಗೆ ತಿರುಗೇಟು ಕೊಟ್ಟಿದ್ದಾರೆ.

ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಏನೇ ಹೇಳಲಿ. ಕುಮಾರಸ್ವಾಮಿ ಅವರು ಎನ್‌ಡಿಎ ಭಾಗವಾಗಿದ್ದಾರೆ. ಅಲ್ಲಿರುವ ಯಾರನ್ನೂ ಬಿಜೆಪಿ ಮುಗಿಸುವ ಅಥವಾ ಕೈ ಬಿಡುವ ಮಾತೇ ಇಲ್ಲ. ಕುಮಾರಸ್ವಾಮಿ ಮತ್ತು ಜೆಡಿಎಸ್ ಪಕ್ಷ ಮುಗಿಸಲು ಬಿಜೆಪಿಯೇ ಷಡ್ಯಂತ್ರ ಮಾಡಿದೆ ಎಂಬ ಸಚಿವ ದಿನೇಶ ಗುಂಡುರಾವ್‌ ಹೇಳಿದ್ದಕ್ಕೆ ತರಾಟೆ ತೆಗೆದುಕೊಂಡರು.

ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿ ಕೆಳಗಿಳಿಸಿದವರು ಯಾರು? ಎಂದು ಪ್ರಶ್ನಿಸಿದ ಜೋಶಿ, ಕಾಂಗ್ರೆಸ್ ತನ್ನ ಅನುಭವದ ಮಾತುಗಳನ್ನು ಹೇಳುತ್ತಿದೆ ಅಷ್ಟೇ ಎಂದು ಟಾಂಗ್ ಕೊಟ್ಟರು. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ಸೇರಿ ಶಾಸಕರ ರಾಜೀನಾಮೆ ಕೊಡಿಸಿ ಜೆಡಿಎಸ್ ಮತ್ತು ಕುಮಾರಸ್ವಾಮಿ ಅವರನ್ನು ಮುಗಿಸಲು ಸಂಚು ರೂಪಿಸಿದ್ದು ನೆನಪಿಲ್ಲವೇ? ಎಂದು ಪ್ರಶ್ನಿಸಿದರು.

ತನಿಖೆ ನಡೆಸಲಿ:

ತಮ್ಮದೇ ಸರ್ಕಾರವಿದ್ದು ಮಾಜಿ ಸಿಎಂ ಕುಮಾರಸ್ವಾಮಿ ಅವಧಿಯಲ್ಲಿ ಹಗರಣಗಳು ನಡೆದಿದ್ದರೆ ತನಿಖೆ ನಡೆಸಲಿ. ತನಿಖೆಗೆ ಎಚ್‌ಡಿಕೆ ಸಹ ಹೇಳಿದ್ದಾರೆಂದ ಜೋಶಿ, ಹಿಂದೆ ಯುಪಿಎ ಸರ್ಕಾರವೇ ರಾಜ್ಯಪಾಲರನ್ನು ನೇಮಿಸಿತ್ತು. ಆಗ ಕುಮಾರಸ್ವಾಮಿ ಬಗ್ಗೆ ಪ್ರಾಸಿಕ್ಯೂಷನ್‌ ಏಕೆ ಕೊಡಿಸಲಿಲ್ಲ. ಈಗ ಕುಮಾರಸ್ವಾಮಿ ಇವರ ವಿರುದ್ಧ ಮಾತನಾಡಿದ್ದಕ್ಕೆ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಹೊರಟಿದ್ದಾರೆಯೇ? ಇದನ್ನು ಜನತೆ ಹೇಗೆ ನಂಬಲು ಸಾಧ್ಯ ಎಂದು ಪ್ರಶ್ನಿಸಿದರು.