ಶಿಕ್ಷಣ ಕ್ಷೇತ್ರವನ್ನು ಕಾಂಗ್ರೆಸ್ ಎಂದೂ ಕಡೆಗಣಿಸಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್

| Published : May 27 2024, 01:01 AM IST / Updated: May 27 2024, 10:32 AM IST

ಶಿಕ್ಷಣ ಕ್ಷೇತ್ರವನ್ನು ಕಾಂಗ್ರೆಸ್ ಎಂದೂ ಕಡೆಗಣಿಸಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್
Share this Article
  • FB
  • TW
  • Linkdin
  • Email

ಸಾರಾಂಶ

ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ವೈ.ಎ.ನಾರಾಯಣಸ್ವಾಮಿ ಅವರು, ಸದನದಲ್ಲಾಗಲಿ, ಸದನದ ಹೊರಗಾಗಲಿ ಶಿಕ್ಷಕರ ಸಮಸ್ಯೆಗಳನ್ನು ಸಮರ್ಥವಾಗಿ ಮಂಡಿಸಿ, ಪರಿಹಾರ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ.

  ತುಮಕೂರು : ಕಾಂಗ್ರೆಸ್ ಪಕ್ಷ 1952ರಿಂದ ಇದುವರೆಗೂ ತಂದ ಶಿಕ್ಷಣ ನೀತಿಗಳ ಫಲವಾಗಿ ಭಾರತ ಇಂದು ವಿಶ್ವದಲ್ಲಿಯೇ ಅತೀ ದೊಡ್ಡ ಮಾನವ ಸಂಪನ್ಮೂಲ ಉತ್ಪಾಧಿಸುವ ಕೇಂದ್ರವಾಗಿ ಗುರುತಿಸಿಕೊಂಡಿದೆ. 

2020 ರಲ್ಲಿ ಬಂದ ಹೊಸ ಶಿಕ್ಷಣ ನೀತಿಯಿಂದಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.ನಗರದ ಶ್ರೀ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಆಗ್ನೇಯ ಶಿಕ್ಷಕರ ಕ್ಷೇತ್ರದ ಮತದಾರರು ಹಾಗೂ ಶಿಕ್ಷಣ ಸಂಸ್ಥೆಗಳ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎನ್.ಇ.ಪಿ-2020ರಿಂದ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದು ತಿಳಿದ ನಂತರ ರಾಜ್ಯ ಸರಕಾರ ಅದನ್ನು ಬದಲಾಯಿಸಲು ಮುಂದಾಯಿತು ಎಂದರು.

ಕಾಂಗ್ರೆಸ್ ಪಕ್ಷ 1952ರಲ್ಲಿ, 1986 ರಲ್ಲಿ ಮತ್ತು 1992 ರಲ್ಲಿ ಶಿಕ್ಷಣ ನೀತಿಗಳನ್ನು ಘೋಷಿಸಿ, ದೇಶದಲ್ಲಿ ಶೈಕ್ಷಣಿಕ ವಾತಾವರಣ ನಿರ್ಮಿಸಿದ ಪರಿಣಾಮ ಇಂದು ಮೆಡಿಕಲ್, ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಭಾರತ ಪ್ರಗತಿ ಸಾಧಿಸಿದೆ. ವರ್ಷದಿಂದ ವರ್ಷಕ್ಕೆ ಈ ಕ್ಷೇತ್ರಗಳಲ್ಲಿ ಹೆಚ್ಚು ಬೆಳವಣಿಗೆಗಳು ಕಂಡುಬಂದಿವೆ. ಯಾರು ಏನೇ ಟೀಕೆ ಮಾಡಲಿ, ಶಿಕ್ಷಣ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷ ಎಂದಿಗೂ ಕಡೆಗಣಿಸಿಲ್ಲ. ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಿದೆ.

 ಕಳೆದ ಬಜೆಟ್ ನಲ್ಲಿ ರಾಜ್ಯ ಸರಕಾರ ಸಹ ಶೇ 12ರಷ್ಟು ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಟ್ಟು, ಎಲ್ಲಾ ಮೂಲ ಸೌಕರ್ಯಗಳ ಜೊತೆಗೆ, ಶಿಕ್ಷಕರ ಖಾಲಿ ಹುದ್ದೆಗಳ ಭರ್ತಿಗೆ ಅಗತ್ಯ ಕ್ರಮ ಕೈಗೊಂಡಿದೆ ಎಂದು ಡಾ.ಜಿ.ಪರಮೇಶ್ವರ್ ನುಡಿದರು.

1952 ರಿಂದ ಇದುವರೆಗೂ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿಲ್ಲ. ಆದರೆ ಈ ಬಾರಿ ಈ ಕ್ಷೇತ್ರದ ಅಭ್ಯರ್ಥಿಯಾಗಿರುವ ಡಿ.ಟಿ.ಶ್ರೀನಿವಾಸ್ ಗೆಲುವು ಸಾಧಿಸಲಿದ್ದಾರೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಶಿಕ್ಷಕರಾಗಿ,ಅಧಿಕಾರಿಯಾಗಿ,ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿ ಶಿಕ್ಷಕರ ಸಮಸ್ಯೆಗಳ ಅರಿವಿದೆ. ಹಾಗಾಗಿ ಅವರು ಗೆಲ್ಲುವುದರಿಂದ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂಬ ವಿಶ್ವಾಸ ನಮ್ಮದು. 2023 ರ ವಿಧಾನಸಭಾ ಚುನಾವಣೆಯ ಪ್ರಣಾಳಿಕೆ ಸಮಿತಿ ಅಧ್ಯಕ್ಷನಾಗಿ ಶಿಕ್ಷಕರ ಹುದ್ದೆ ತುಂಬುವ ಭರವಸೆಯನ್ನು ನೀಡಿದ್ದೇವೆ. 

ನಮ್ಮಲ್ಲಿ 2.50 ಲಕ್ಷ ಹುದ್ದೆಗಳು ಖಾಲಿಯಿದ್ದು, ಇವುಗಳನ್ನು ತುಂಬುವಾಗ ಆರೋಗ್ಯ, ಶಿಕ್ಷಣ ಮತ್ತು ಪೊಲೀಸ್ ಇಲಾಖೆಗೆ ಹೆಚ್ಚಿನ ಅದ್ಯತೆ ನೀಡಲಾಗುವುದು. ಇದರಿಂದ ಶಿಕ್ಷಕರಿಗೆ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ವೈ.ಎ.ನಾರಾಯಣಸ್ವಾಮಿ ಅವರು, ಸದನದಲ್ಲಾಗಲಿ, ಸದನದ ಹೊರಗಾಗಲಿ ಶಿಕ್ಷಕರ ಸಮಸ್ಯೆಗಳನ್ನು ಸಮರ್ಥವಾಗಿ ಮಂಡಿಸಿ, ಪರಿಹಾರ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ. ಆಡಳಿತ ಪಕ್ಷದಲ್ಲಿದಾಗಲಾಗಲಿ, ವಿರೋಧಪಕ್ಷದಲ್ಲಿದ್ದಾಗಲಾಗಲಿ ಶಿಕ್ಷಕರ ಸಮಸ್ಯೆಗಳನ್ನು ಚರ್ಚಿಸಿಲ್ಲ. 

ಬಿಜೆಪಿ ಸರಕಾರವಿದ್ದಾಗಲೇ 7ನೇ ವೇತನ ಆಯೋಗ ಆರಂಭವಾಗಿತ್ತು. ಆಗಲೂ ಮೌನ ವಹಿಸಿದ್ದರು. ಅನುದಾನಿತ ಶಾಲೆಗಳ ಶಿಕ್ಷಕರ ಹುದ್ದೆ ನೇಮಕದ ಬಗ್ಗೆ ಚರ್ಚೆನೇ ಮಾಡಲಿಲ್ಲ. ಯಾವ ಯಾವದಕ್ಕೋ ಸದನದ ಬಾವಿಗೆ ಇಳಿದು ಹೋರಾಡುವ ನಾರಾಯಣಸ್ವಾಮಿ, ಶಿಕ್ಷಕರ ವಿಚಾರದಲ್ಲಿ ಎಂದೂ ಸದನದ ಬಾವಿಗೆ ಇಳಿದಿದ್ದು ನೋಡಿಲ್ಲ. ಇಂತಹವರು ಮತ್ತೊಮ್ಮೆ ಆಯ್ಕೆಯಾಗುವುದರಲ್ಲಿ ಅರ್ಥವಿಲ್ಲ ಎಂದು ಡಾ.ಜಿ.ಪರಮೇಶ್ವರ್ ನುಡಿದರು.

ಎಚ್.ಎಂ.ಎಸ್ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಎಸ್.ಷಪಿ ಅಹಮದ್ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರಲು ಸರಕಾರ ಎಲ್ಲಾ ರೀತಿಯಿಂದಲೂ ಪ್ರಯತ್ನಿಸುತ್ತಿದೆ. ಬಜೆಟ್‌ನಲ್ಲಿಯೂ ಹಲವಾರು ಯೋಜನೆಗಳನ್ನು ಘೋಷಿಸಿದ್ದು, ಡಿ.ಟಿ.ಶ್ರೀನಿವಾಸ್ ರಂತಹ ವ್ಯಕ್ತಿಗಳು ಗೆದ್ದು ಮೇಲ್ಮನೆಗೆ ಹೋದರೆ ಹೆಚ್ಚಿನ ಉಪಯೋಗವಾಗಲಿದೆ ಎಂದರು.ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಜಿಲ್ಲಾ ಕಾರ್ಯದರ್ಶಿ ದೇವರಾಜಯ್ಯ ಮಾತನಾಡಿ, ಕಳೆದ ಮೂರು ಅವಧಿಯಿಂದ ಈ ಕ್ಷೇತ್ರವನ್ನು ಪ್ರತಿನಿಧಿಸಿರುವ ವೈ.ಎ.ನಾರಾಯಣಸ್ವಾಮಿ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲರಾಗಿದ್ದಾರೆ.

ಹಾಗಾಗಿ ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳು ಭ್ರಮನಿರಶನಕ್ಕೆ ಒಳಗಾಗಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಬದಲಾವಣೆ ಬಯಸಿದ್ದು, ಎಲ್ಲಾ ವಿಷಯಗಳನ್ನು ಅರಿತಿರುವ ಡಿ.ಟಿ.ಶ್ರೀನಿವಾಸ್ ರನ್ನು ಆಯ್ಕೆ ಮಾಡುವ ನಿರ್ಣಯವನ್ನು ಸಂಘ ತೆಗೆದುಕೊಂಡಿದೆ ಎಂದರು.ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಶಾಸಕಿ ಪೂರ್ಣಿಮ ಶ್ರೀನಿವಾಸ್, ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯಾಗಿ ಶಿಕ್ಷಕ ಸಮಸ್ಯೆಗಳೇನು, ಅವಶ್ಯಕತೆಗಳೇನು ಎಂಬುದನ್ನು ಅರ್ಥಮಾಡಿಕೊಂಡಿದ್ದೇನೆ. 

ಸರಕಾರಿ ಶಾಲೆ, ಖಾಸಗಿ ಶಾಲೆ, ಅನುದಾನಿತ ಖಾಸಗಿ ಶಾಲೆಗಳ ಶಿಕ್ಷಕರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಅರಿತಿದ್ದೇನೆ. ಅತಿಥಿ ಉಪನ್ಯಾಸಕರು ತೀವ್ರ ನೋವಿನಲ್ಲಿದ್ದಾರೆ. ನಮ್ಮ ಸರಕಾರ ಖಂಡಿತವಾಗಿಯೂ ನಿಮ್ಮ ಸಮಸ್ಯೆಗಳನ್ನು ಅರಿತು ಕೆಲಸ ಮಾಡುತ್ತಿದೆ ಎಂದರು.ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡರಾದ ಇಕ್ಬಾಲ್ ಅಹಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಮುರುಳೀಧರ ಹಾಲಪ್ಪ, ದೇವರಾಜಯ್ಯ ಮತ್ತಿತರರು ಉಪಸ್ಥಿತರಿದ್ದರು.