ಸಾರಾಂಶ
ತೀರ್ಥಹಳ್ಳಿ: ಕಾಶ್ಮೀರದ ಪೆಹಲ್ಗಾಂನಲ್ಲಿ ಈಚೆಗೆ ಪ್ರವಾಸಿಗರ ಮೇಲೆ ನರಮೇಧವನ್ನು ಖಂಡಿಸುವ ಬದಲಿಗೆ ಈ ಘಟನೆಗೆ ಸಂಬಂಧಿಸಿ ಕಾಂಗ್ರೆಸ್ ಪಕ್ಷ ರಾಜಕೀಯ ದೃಷ್ಟಿಕೋನದಿಂದ ನೋಡುತ್ತಿರುವುದು ಖಂಡನೀಯ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಭಾನುವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲಾಗಾಯ್ತಿನಿಂದ ಮುಸ್ಲಿಮರ ರಕ್ಷಣೆಯೊಂದಿಗೆ ಆ ಸಮುದಾಯದ ಓಲೈಕೆಯನ್ನೇ ಮಾಡಿಕೊಂಡು ಬರುತ್ತಿರುವ ಕಾಂಗ್ರೆಸ್ಸಿಗರಿಗೆ ನರೇಂದ್ರ ಮೋದಿ ಅವರ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ. ಇಡೀ ದೇಶ ಈ ಹೇಯಕೃತ್ಯವನ್ನು ಖಂಡಿಸುತ್ತಿರುವ ಸಂಧರ್ಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಬರ್ಟ್ ವಾದ್ರಾ, ಪ್ರಧಾನಮಂತ್ರಿಗಳ ವಿರುದ್ಧ ಹಗುರವಾಗಿ ಮಾತನಾಡುತ್ತಿರುವುದು ಖಂಡನೀಯ ಎಂದು ಟೀಕಿಸಿದರು.
ಪೆಹಲ್ಗಾಂನಲ್ಲಿ ಉಗ್ರವಾದಿಗಳು ಪ್ರವಾಸಿಗರ ಮೇಲೆ ನಡೆಸಿರುವ ನರಮೇಧವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಂಡಿಸಲಾಗುತ್ತಿದೆ. ಈಗಿನ ಮಾಹಿತಿ ಪ್ರಕಾರ ಭಾರತದಲ್ಲಿಯೇ ಇದ್ದು ತರಬೇತಿ ಪಡೆದ 30-40 ರ ಪ್ರಾಯದ ಉಗ್ರವಾದಿಗಳಿಂದ ಈ ಘಟನೆ ಸಂಭವಿಸಿದೆ.
ಇಂತಹ ಹೇಡಿ ಕೃತ್ಯವನ್ನು ನಿಯಂತ್ರಿಸಲು ಎಲ್ಲ ರಾಜಕೀಯ ಪಕ್ಷಗಳ ಬೆಂಬಲ ಅಗತ್ಯ. ಪೆಹಲ್ಗಾಂನಲ್ಲಿ ನಡೆದ ಘಟನೆಗೆ ಭದ್ರತಾ ವೈಫಲ್ಯ ಕಾರಣವಲ್ಲಾ ಎಂದು ಸಮರ್ಥಿಸಿಕೊಂಡರು. ಮಲೆನಾಡು ಕರಾವಳಿ ಸಂಪರ್ಕದ ಆಗುಂಬೆ ಘಾಟಿ ವಿಸ್ತರಣೆಗೆ ಸಂಬಂಧಿಸಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಘಾಟಿ ವಿಸ್ತರಣೆಗೆ ಕೇಂದ್ರ ಸರ್ಕಾರ 400 ಕೋಟಿ ರು. ಮಂಜೂರು ಮಾಡಿದ್ದು ಈ ಯೋಜನೆಗೆ ಡಿಪಿಆರ್ ಸಿದ್ಧಪಡಿಸಬೇಕಿದೆ. ಆದರೆ ಆಗುಂಬೆ ಘಾಟಿಯಲ್ಲಿ ರಸ್ತೆ ಅಗಲೀಕರಣ ಕಷ್ಟಸಾಧ್ಯ ಎಂಬ ಅಭಿಪ್ರಾಯವಿರುವ ಹಿನ್ನೆಲೆಯಲ್ಲಿ ಪರ್ಯಾಯವಾಗಿ ಸುರಂಗ ಮಾರ್ಗ ಮಾಡುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ತಿಳಿಸಿದರು.
ಮಂಡಲ ಬಿಜೆಪಿ ಅಧ್ಯಕ್ಷ ನವೀನ್ ಹೆದ್ದೂರು, ತಾಲೂಕು ಜೆಡಿಎಸ್ ಅಧ್ಯಕ್ಷ ಕುಣಜೆ ಕಿರಣ್ ಪ್ರಭಾಕರ್, ಪ್ರಶಾಂತ್ ಕುಕ್ಕೆ, ಮಧುರಾಜ ಹೆಗ್ಡೆ, ಸಂತೋಷ್ ದೇವಾಡಿಗ, ವಿನ್ಸೆಂಟ್, ಸಂದೇಶ್ ಜವಳಿ, ಮಂಜುನಾಥ.ಜೆ ಶೆಟ್ಟಿ ಇದ್ದರು.