ಸಾರಾಂಶ
ಬಹದ್ದೂರು ಬಂಡಿ ಏತ ನೀರಾವರಿ ಯೋಜನೆಯನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಿ ಹೊಸಳ್ಳಿ ಕೆರೆಗೂ ನೀರು ಹರಿಸಲಾಗಿದೆ. ಇದರಿಂದ ಬೋರ್‌ವೆಲ್‌ಗಳ ಅಂತರ್ಜಲ ವೃದ್ಧಿಯಾಗಿದೆ ಎಂದು ರೈತರು ಹೇಳಿದ್ದಾರೆ. ಅಳವಂಡಿ-ಬೆಟಗೇರಿ ಏತನೀರಾವರಿ ಯೋಜನೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.
ಕೊಪ್ಪಳ : ಸಿಂಗಟಾಲೂರು, ಬಹದ್ದೂರುಬಂಡಿ, ಬೆಟಗೇರಿ ಏತನೀರಾವರಿ ಯೋಜನೆಯ ಬಾಕಿ ಕಾಮಗಾರಿ ಮತ್ತು ಕೊಪ್ಪಳ ವಿಧಾನಸಭಾ ಕ್ಷೇತ್ರದ ವಿವಿಧ ಯೋಜನೆಗಳಿಗೆ ರಾಜ್ಯ ಸರ್ಕಾರ ₹ 1200 ಕೋಟಿ ನೀಡಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹದ್ದೂರುಬಂಡಿ ಏತನೀರಾವಾರಿ ಯೋಜನೆಯನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಿ ಹೊಸಳ್ಳಿ ಕೆರೆಗೂ ನೀರು ಹರಿಸಲಾಗಿದೆ. ಇದರಿಂದ ಬೋರ್‌ವೆಲ್‌ಗಳ ಅಂತರ್ಜಲ ವೃದ್ಧಿಯಾಗಿದೆ ಎಂದು ರೈತರು ಹೇಳಿದ್ದಾರೆ. ಅಳವಂಡಿ-ಬೆಟಗೇರಿ ಏತನೀರಾವರಿ ಯೋಜನೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೆ, ರೈತರ ಹೊಲಕ್ಕೆ ನೀರು ತಲುಪಲು ಕಾಲುವೆ ನಿರ್ಮಿಸಬೇಕಾಗಿದ್ದು ₹ 486 ಕೋಟಿ ಹಾಗೂ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ನಿರ್ಮಾಣಕ್ಕೆ ಸರ್ಕಾರ ₹ 10 ಕೋಟಿ ಮಂಜೂರು ಮಾಡಿದೆ ಎಂದು ತಿಳಿಸಿದರು.
ಸಿಂಗಟಾಲೂರು ಏತನೀರಾವರಿ ಯೋಜನೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ನೀರಾವರಿ ಕೈಗೊಳ್ಳಲು ಆಗಬೇಕಾದ ಕಾಮಗಾರಿ ಬಾಕಿ ಇದೆ ಎಂದ ಅವರು, ಈ ಯೋಜನೆ ವ್ಯಾಪ್ತಿಯಲ್ಲಿ ಸುಮಾರು 3 ಸಾವಿರ ಹೆಕ್ಟೇರ್ ಪ್ರದೇಶವನ್ನು ವಿಂಡ್ ಪವರ್ ಮತ್ತು ಸೋಲಾರ್‌ಗೆ ರೈತರು ನೀಡಿದ್ದಾರೆ. ಹೀಗಾಗಿ ಉಳಿದಿರುವ 40 ಸಾವಿರ ಎಕರೆ ಪ್ರದೇಶದಲ್ಲಿ ನೀರಾವರಿ ಕೈಗೊಳ್ಳಲು ಮಧ್ಯಪ್ರದೇಶ ಮಾದರಿ ಯೋಜನೆ ಕೈಗೊಳ್ಳಲು ₹ 530 ಕೋಟಿ ಮಂಜೂರಾಗಿದೆ. ಆದರೆ, ಟೆಂಡರ್ ಕರೆದಿದ್ದರೂ ಸಹ ಯಾರು ಸಹ ಮುಂದೆ ಬರುತ್ತಿಲ್ಲ. 5 ಹೆಕ್ಟೇರ್‌ಗೆ ಒಂದು ಓಟ್ ಲೆಟ್ ರೂಪಿಸಲು ಈ ಯೋಜನೆ ರೂಪಿಸಲಾಗಿದೆ. ಇದರಿಂದ ರೈತರಿಗೆ ಸಮಸ್ಯೆಯಾಗುತ್ತದೆ. ಹೀಗಾಗಿ, 2 ಹೆಕ್ಟೇರ್‌ಗೆ ಒಂದು ಔಟ್ ಲೆಟ್ ನಿರ್ಮಾಣಕ್ಕೆ ಯೋಜನೆ ರೂಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದು ಸಕಾರಾತ್ಮಕ ಸ್ಪಂದನೆ ದೊರಕಿದೆ ಎಂದರು.
ಅಳವಂಡಿ-ಬೆಟಗೇರಿ ಏತನೀರಾವರಿ ಯೋಜನೆಯಲ್ಲಿ 8 ಸಾವಿರ ಎಕರೆ, ಬಹದ್ದೂರುಬಂಡಿ ನವಲಕಲ್ ಯೋಜನೆಯಲ್ಲಿ 12 ಸಾವಿರ ಎಕರೆ ಹಾಗೂ ಸಿಂಗಟಾಲೂರು ಏತನೀರಾವರಿ ಯೋಜನೆಯಲ್ಲಿ 40 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸಲಾಗುವುದು. ಇದರೊಂದಿಗೆ ಗಿಣಿಗೇರಿ-ಮುಂಡರಗಿ ರಸ್ತೆಯನ್ನು ಚತುಷ್ಪತ ರಸ್ತೆಯನ್ನಾಗಿ ನಿರ್ಮಿಸಲು ಯೋಜನೆ ರೂಪಿಸಿ ಅನುಮೋದನೆ ನೀಡಲಾಗಿದೆ. ₹ 265 ಕೋಟಿ ಡಿಪಿಐ ಸಿದ್ಧ ಮಾಡಲು ಸೂಚಿಸಲಾಗಿದೆ. ಇದು ಸಹ ಶೀಘ್ರದಲ್ಲಿಯೇ ಆಗಲಿದೆ ಎಂದರು.
ಕೊಪ್ಪಳಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಬಜೆಟ್‌ನಲ್ಲಿ ಸರ್ಕಾರ ಘೋಷಿಸಿದ್ದು ಜಾರಿಯೂ ಆಗಲಿದೆ. ವಿಮಾನ ನಿಲ್ದಾಣ ಯೋಜನೆಗೆ ಬರುವ ಬಜೆಟ್‌ನಲ್ಲಿ ಅನುಮೋದನೆ ದೊರೆಯುವ ವಿಶ್ವಾಸವಿದೆ ಎಂದು ರಾಘವೇಂದ್ರ ಹಿಟ್ನಾಳ ಹೇಳಿದರು.
ಸಂಸದ ರಾಜಶೇಖರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ, ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ. ನಾಗರಳ್ಳಿ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಕೃಷ್ಣಾ ಇಟ್ಟಂಗಿ, ಗಾಳೆಪ್ಪ ಪೂಜಾರ, ಕೆ.ಎಂ. ಸಯ್ಯದ್, ಶಿವರಡ್ಡಿ ಭೂಮಕ್ಕನವರ, ಕಾಟನ್ ಪಾಶಾ, ಪ್ರಸನ್ ಗಡಾದ, ಶರಣಪ್ಪ ಸಜ್ಜನ, ಅಜೀಮ್ ಅತ್ತಾರ ಇದ್ದರು.