ಸಿಂಗಟಾಲೂರು ಏತ ನೀರಾವರಿ ಯೋಜನೆ: ₹50 ಕೋಟಿ ವಿದ್ಯುತ್‌ ಬಾಕಿ

| Published : Mar 29 2025, 12:32 AM IST

ಸಿಂಗಟಾಲೂರು ಏತ ನೀರಾವರಿ ಯೋಜನೆ: ₹50 ಕೋಟಿ ವಿದ್ಯುತ್‌ ಬಾಕಿ
Share this Article
  • FB
  • TW
  • Linkdin
  • Email

ಸಾರಾಂಶ

ಹೂವಿನಹಡಗಲಿಯ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬಲ ಹಾಗೂ ದಂಡೆ ಭಾಗದ 1, 2, ಮತ್ತು 3ನೇ ಹಂತದ ನೀರೆತ್ತುವ ಘಟಕಗಳ, ವಿದ್ಯುತ್‌ ಬಾಕಿ ₹50 ಕೋಟಿ ಗಡಿ ದಾಟಿದ್ದರೂ ಈ ವರೆಗೂ ಪಾವತಿಯಾಗಿಲ್ಲ. ಸರ್ಕಾರ ಈ ವರೆಗೂ ನೀರಾವರಿ ನಿಗಮಕ್ಕೆ ಸರಿಯಾಗಿ ಅನುದಾನ, ನೀಡದಿರುವ ಹಿನ್ನೆಲೆ ಈ ವಿದ್ಯುತ್‌ ಬಾಕಿ ನಿತ್ಯ ಏರಿಕೆಯಾಗುತ್ತಿದೆ.

ಹೂವಿನಹಡಗಲಿ: ಇಲ್ಲಿನ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬಲ ಹಾಗೂ ದಂಡೆ ಭಾಗದ 1, 2, ಮತ್ತು 3ನೇ ಹಂತದ ನೀರೆತ್ತುವ ಘಟಕಗಳ, ವಿದ್ಯುತ್‌ ಬಾಕಿ ₹50 ಕೋಟಿ ಗಡಿ ದಾಟಿದ್ದರೂ ಈ ವರೆಗೂ ಪಾವತಿಯಾಗಿಲ್ಲ.

ಬರದ ನಾಡಿನ ರೈತರ ಜೀವನಾಡಿಯಾಗಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯಿಂದ ರೈತರು ಜಮೀನುಗಳಿಗೆ ಕಾಲುವೆಗಳ ಮೂಲಕ ನೀರು ಹರಿಸುವ ಉದ್ದೇಶದಿಂದ ಬಲದಂಡೆ ಹಾಗೂ ಎಡದಂಡೆ ಭಾಗದ ನೀರೆತ್ತುವ ಮೋಟಾರ್‌ಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಡಿಸೆಂಬರ್‌ 2024ಕ್ಕೆ ಬರೊಬ್ಬರಿ ₹50 ಕೋಟಿ ಬಾಕಿ ಇದೆ.

ಬಲದಂಡೆ ಭಾಗದ ಡಿಸೆಂಬರ್‌ ಅಂತ್ಯಕ್ಕೆ ₹16.78 ಕೋಟಿ, ಎಡದಂಡೆ ಭಾಗದ 1ನೇ ಹಂತದ ನೀರೆತ್ತುವ ಘಟಕದ ವಿದ್ಯುತ್‌ ಬಾಕಿ ₹10 ಕೋಟಿ, ಅದೇ ಭಾಗದ 2 ಮತ್ತು 3ನೇ ಹಂತದ ನೀರೆತ್ತುವ, ಘಟಕದ ₹24 ಕೋಟಿ ಸೇರಿದಂತೆ ಒಟ್ಟು ₹50 ಕೋಟಿಗೂ ಅಧಿಕ ಬಾಕಿ ಹಣ ಪಾವತಿ ಮಾಡಬೇಕಿದೆ.

ಸರ್ಕಾರ ಈ ವರೆಗೂ ನೀರಾವರಿ ನಿಗಮಕ್ಕೆ ಸರಿಯಾಗಿ ಅನುದಾನ, ನೀಡದಿರುವ ಹಿನ್ನೆಲೆ ಈ ವಿದ್ಯುತ್‌ ಬಾಕಿ ನಿತ್ಯ ಏರಿಕೆಯಾಗುತ್ತಿದೆ. ಧಾರವಾಡ ನೀರಾವರಿ ನಿಗಮಕ್ಕೆ ಹಣ ಬಿಡುಗಡೆ ಮಾಡಿದರೆ, ಅವರು ವಿದ್ಯುತ್‌ ಕಂಪನಿಗಳಿಗೆ ಬಾಕಿ ಹಣ ಪಾವತಿ ಮಾಡುತ್ತಾರೆ. ಆದರೆ ಈ ವರೆಗೂ ಬಾಕಿ ಮೊತ್ತ ಪಾವತಿಯಾಗಿಲ್ಲ.

ಖಾಸಗಿ ವ್ಯಕ್ತಿಗಳ ವಿದ್ಯುತ್‌ ಬಾಕಿ ಪಾವತಿ ಮಾಡಲು ವಿಳಂಬ ಮಾಡಿದರೆ, ವಿದ್ಯುತ್‌ ಸಂಪರ್ಕ ಕಡಿತ ಮಾಡುವ ಅಧಿಕಾರಿಗಳು ಈ ಸರ್ಕಾರದ ಯೋಜನೆಗಳ ಬಗ್ಗೆ ಯಾಕೆ ಕ್ರಮವಿಲ್ಲ? ಬಾಕಿ ಮೊತ್ತಕ್ಕೆ ಬಡ್ಡಿ ಹಣ ಬೆಳೆಯುತ್ತಾ ಹೋಗುತ್ತದೆ. ಆದರಿಂದ ಜನರ ತೆರಿಗೆ ಹಣ ಪೋಲು ಆಗದಂತೆ ಸರ್ಕಾರ ಕೂಡಲೇ ಹಣ ಬಿಡುಗಡೆ ಮಾಡಿ ಬಾಕಿ ಇರುವ ಮೊತ್ತವನ್ನು ಪಾವತಿ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬಲದಂಡೆ ಭಾಗದಲ್ಲಿ ₹16.78 ಕೋಟಿ, ಎಡದಂಡೆ ಭಾಗದ 2 ಮತ್ತು 3ನೇ ಹಂತದ ನೀರೆತ್ತುವ ಘಟಕದ ₹24 ಕೋಟಿ ವಿದ್ಯುತ್‌ ಬಾಕಿ ಇದೆ. ಸರ್ಕಾರ ಹಣ ಬಿಡುಗಡೆ ಮಾಡಿದ ನಂತರದಲ್ಲಿ ನೀರಾವರಿ ನಿಗಮದ ಅಧಿಕಾರಿಗಳು ಹಣ ಪಾವತಿ ಮಾಡುತ್ತಾರೆ ಎಂದು ಸಿಂಗಟಾಲೂರು ಏತ ನೀರಾವರಿ ಯೋಜನೆ, ಹೂವಿನಹಡಗಲಿ ವಿಭಾಗ-2ರ ಎಇಇ ಎಚ್‌.ಸಿ. ರಾಘವೇಂದ್ರ ಹೇಳಿದರು.ಸಿಂಗಟಾಲೂರು ಏತ ನೀರಾವರಿ ಯೋಜನೆಯ ಎಡದಂಡೆ ಭಾಗದ, 1ನೇ ಹಂತದ ನೀರೆತ್ತುವ ಘಟಕದ ವಿದ್ಯುತ್‌ ಬಾಕಿ ₹10 ಕೋಟಿ ಇದೆ. ಸರ್ಕಾರ ಅನುದಾನ ನೀಡಿದ ನಂತರದಲ್ಲಿ ಬಾಕಿ ಹಣ ಪಾವತಿ ಮಾಡುತ್ತಾರೆ ಎಂದು ಸಿಂಗಟಾಲೂರು ಏತ ನೀರಾವರಿ ಯೋಜನೆಯ ಮುಂಡರಗಿ ಎಇಇ ವಿನಯ್‌ ಹೇಳಿದರು.