ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಕಾಂಗ್ರೆಸ್ ಪಕ್ಷ ದಲಿತರ ದಾರಿ ತಪ್ಪಿಸಿ ಮತ ಸೆಳೆದಿದ್ದು, ದಲಿತರಿಗೆ ಅಂಗೈಯಲ್ಲಿ ಆಕಾಶ ತೋರಿಸಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.ಜಿಲ್ಲೆಯ ವಿವಿಧೆಡೆ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆಗಾಗಿ ಬುಧವಾರ ಯಾದಗಿರಿ ನಗರಕ್ಕೆ ಆಗಮಿಸಿದ್ದ ಅವರು, ಮಾಧ್ಯಮಗಳೊಂದಿಗೆ ಮಾತನಾಡಿದರು.
ದಲಿತರನ್ನು ದಾರಿ ತಪ್ಪಿಸಿ ಮತ ಸೆಳೆದಿರುವ ಕಾಂಗ್ರೆಸ್ 136 ಸೀಟು ಗೆದ್ದಿದ್ದಾಗಿ ಬೀಗಿದ್ದರು. ನಂಬಿದವರ ಚರ್ಮ ತೆಗೆದು ಸಿದ್ದರಾಮಯ್ಯನವರು ಚಪ್ಪಲಿ ಹಾಕಿ ಮೆರೆಯುತ್ತಿದ್ದಾರೆ ಎಂದು ದೂರಿದರು.ಅತಿವೃಷ್ಟಿ, ಪ್ರವಾಹದ ಕಡೆ ಗಮನ ಕೊಡಬೇಕಾದ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ, ದಿನಕ್ಕೊಂದರಂತೆ ರಾಜ್ಯ ಸರ್ಕಾರದ ಹಗರಣಗಳು ಹೊರಕ್ಕೆ ಬರುತ್ತಿದ್ದು, ಸರ್ಕಾರಕ್ಕೆ ಉತ್ತರ ಕೊಡಲಿಕ್ಕಾಗುತ್ತಿಲ್ಲ.
ಮೈಸೂರು ಮುಡಾದಲ್ಲಿ ಸಾವಿರಾರು ಕೋಟಿ ರು. ಮೊತ್ತದ ಹಗರಣ ನಡೆದಿದೆ. ಮುಖ್ಯಮಂತ್ರಿಗಳ ಕುಟುಂಬವೇ ಅದರಲ್ಲಿ ಪಾಲುದಾರರು. ವಾಲ್ಮೀಕಿ ನಿಗಮದಲ್ಲಿ ಪರಿಶಿಷ್ಟ ವರ್ಗಗಳ 187ಕೋಟಿ ರು. ಲೂಟಿ ಮಾಡಲಾಗಿದೆ. ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕರಾದ ಚಂದ್ರಶೇಖರ್ ಆತಂಕದಿಂದ ಪ್ರಾಣತ್ಯಾಗ ಮಾಡಿದ್ದಾರೆ. ಇದೆಲ್ಲದಕ್ಕೂ ಸಿಎಂ ಸಿದ್ದರಾಮಯ್ಯ ಅವರ ಬಳಿ ಉತ್ತರ ಇಲ್ಲ ಎಂದು ಟೀಕಿಸಿದರು.ನೀವು (ಕಾಂಗ್ರೆಸ್ ಸರ್ಕಾರ) ಮಾಡಿದ ಹಗರಣಗಳು ನಿಮ್ಮನ್ನು ಸುಮ್ಮನೆ ಬಿಡುತ್ತವೆಯೇ ಎಂದು ಪ್ರಶ್ನಿಸಿದ ನಾರಾಯಣಸ್ವಾಮಿ, ಇಡಿ ಕಾನೂನಾತ್ಮಕವಾಗಿ ಬಂದಿದೆ. ಉದ್ಧಟತನದ ಮಾತಿಗೆ ನಾವು ಜಗ್ಗುವುದಿಲ್ಲ. ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ನೆರೆ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ, ವರದಿ ಸಲ್ಲಿಕೆಯಾದಗಿರಿ: ನೆರೆ ಪ್ರವಾಹ ಪೀಡಿತ ಪ್ರದೇಶಕ್ಕೆ ಆರು ತಂಡಗಳು ಭೇಟಿ ನೀಡಿ, ಜಿಲ್ಲಾ ಮುಖ್ಯಸ್ಥರಿಗೆ ತಿಳಿಸಲು ಸೂಚಿಸಲಾಗಿದೆ. ತೊಂದರೆಗೆ ಒಳಗಾದವರಿಗೆ ಪರಿಹಾರ ಕೊಡಲು ನಾವು ಪ್ರೇರೇಪಣೆ ನೀಡಬೇಕು ಮತ್ತು ಸಹಕಾರಿ ಆಗಬೇಕೆಂಬ ಉದ್ದೇಶದಿಂದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ನಮ್ಮನ್ನು ಕಳುಹಿಸಿದ್ದಾರೆ ಎಂದು ತಿಳಿಸಿದರು.ಈ ಕುರಿತು ವರದಿಯನ್ನು ಪಕ್ಷದ ರಾಜ್ಯಾಧ್ಯಕ್ಷರಿಗೆ ಸಲ್ಲಿಸುವುದಾಗಿ ಹೇಳಿದ ಅವರು, ಕೆಲವೆಡೆ ಮನೆಗಳು ಬಿದ್ದಿದ್ದು ಮತ್ತೆ ಕೆಲವೆಡೆ ಬೆಳೆನಾಶ ಸಂಭವಿಸಿದೆ. ಕಳೆದ ವರ್ಷ ಬರಗಾಲದ ಪರಿಸ್ಥಿತಿ ಇದ್ದರೂ ಸರಕಾರ ಎಚ್ಚತ್ತುಕೊಳ್ಳಲಿಲ್ಲ; ಇದರಿಂದ ರೈತರಿಗೆ ಅನ್ಯಾಯವಾಗಿದೆ ಎಂದರು.
ಶ್ರಮ, ಪಕ್ಷನಿಷ್ಠೆ, ಜನಸಂಪರ್ಕ ಮತ್ತಿತರ ವಿಚಾರಗಳನ್ನು ಗುರುತಿಸಿ ತಮ್ಮನ್ನು ಮೇಲ್ಮನೆ ವಿಪಕ್ಷ ನಾಯಕನಾಗಿ ನೇಮಿಸಿದ ಪಕ್ಷದ ನಾಯಕತ್ವಕ್ಕೆ ಅವರು ಧನ್ಯವಾದ ಸಲ್ಲಿಸಿದರು.ಈ ವೇಳೆ ರಾಯಚೂರು ಬಿಜೆಪಿ ಜಿಲ್ಲಾಧ್ಯಕ್ಷ ಶಾಸಕ ಡಾ.ಶಿವರಾಜ್ ಪಾಟೀಲ್, ಮಹೇಶರಡ್ಡಿ ಮುದ್ನಾಳ್, ದೇವೇಂದ್ರನಾಥ ನಾದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮಾ, ಪರುಶುರಾಮ ಕುರಕುಂದಿ, ಮೇಲಪ್ಪ ಗುಳಗಿ, ಖಂಡಪ್ಪ ದಾಸನ, ಸಿದ್ದಣ್ಣಗೌಡ ಕಾಡಂನೊರ, ಮಹದೆವಪ್ಪ ಯಲಸತ್ತಿ ಸೇರಿ ಇತರರಿದ್ದರು.