ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವನ್ನೆಲ್ಲ ಕಾಂಗ್ರೆಸ್ ಪಕ್ಷದ ವರಿಷ್ಠ ಮಂಡಳಿ ಸೋನಿಯಾಗಾಂಧಿ, ರಾಹುಲಗಾಂಧಿ, ಎಐಸಿಸಿ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಹೈ ಕಮಾಂಡ್ ಸುಪ್ರೀಂ, ಕರ್ನಾಟಕದಲ್ಲೂ ಸುಪ್ರೀಂ, ತಮಿಳುನಾಡಿನಲ್ಲೂ ಸುಪ್ರೀಂ, ವೆಸ್ಟ್ ಬೆಂಗಾಲದಲ್ಲೂ ಸುಪ್ರೀಂ, ಎಲ್ಲ ಕಡೆ ಸುಪ್ರೀಂ. ಎಲ್ಲವನ್ನು ಹೈ ಕಮಾಂಡ್‌ದವರೇ ನಿರ್ಣಯ ಮಾಡುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವನ್ನೆಲ್ಲ ಕಾಂಗ್ರೆಸ್ ಪಕ್ಷದ ವರಿಷ್ಠ ಮಂಡಳಿ ಸೋನಿಯಾಗಾಂಧಿ, ರಾಹುಲಗಾಂಧಿ, ಎಐಸಿಸಿ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಹೈ ಕಮಾಂಡ್ ಸುಪ್ರೀಂ, ಕರ್ನಾಟಕದಲ್ಲೂ ಸುಪ್ರೀಂ, ತಮಿಳುನಾಡಿನಲ್ಲೂ ಸುಪ್ರೀಂ, ವೆಸ್ಟ್ ಬೆಂಗಾಲದಲ್ಲೂ ಸುಪ್ರೀಂ, ಎಲ್ಲ ಕಡೆ ಸುಪ್ರೀಂ. ಎಲ್ಲವನ್ನು ಹೈ ಕಮಾಂಡ್‌ದವರೇ ನಿರ್ಣಯ ಮಾಡುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಕರೆದರೆ ಹೋಗಲೇಬೇಕಾಗುತ್ತದೆ ಎಂದು ಸ್ವತಹ ಮುಖ್ಯಮಂತ್ರಿಗಳೇ ಹೇಳಿಕೆ ಕೊಟ್ಟಿದ್ದಾರೆ. ಹಾಗಾಗಿ ಎಲ್ಲದಕ್ಕೂ ಹೈಕಮಾಂಡ್ ಸುಪ್ರೀಂ. ಕೇರಳದಲ್ಲಿ ಸಿಎಂ ವೇಣುಗೋಪಾಲ ಆಗ್ತಾರಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ವೇಣುಗೋಪಾಲ ಅವರು ಹೈ ಕಮಾಂಡ್‌ನ ಒಂದು ಭಾಗ. ಎಲ್ಲ ನಿರ್ಣಯವನ್ನು ಪಕ್ಷದ ವರಿಷ್ಠರು ಕೈಗೊಳ್ಳುತ್ತಾರೆ ಎಂದರು.ಮಮತಾ ಬ್ಯಾನರ್ಜಿ ರಾಜೀನಾಮೆ ಕೊಡದ ವಿಚಾರವಾಗಿ ಮಾತನಾಡಿ, ಅದರ ಬಗ್ಗೆ ಕಾನೂನಾತ್ಮಕವಾಗಿ, ಸಂವಿಧಾನಾತ್ಮಕವಾಗಿ ಏನಾಗುತ್ತದೋ ಆಗುತ್ತದೆ ಅದನ್ನು ನೊಡೋಣ. ಅವರು ರಾಜೀನಾಮೆ ಕೊಡುವುದಿಲ್ಲ ಎಂಬುವು ಸಂವಿಧಾನದಲ್ಲಿ ಏನಿದೆಯೋ ಅದು ತೀರ್ಮಾನವಾಗಲಿದೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯಿಂದ ಅವರಿಗೆ ಸಾಕಷ್ಟು ಅನ್ಯಾಯವಾಗಿರುವುದು ಸತ್ಯವಾಗಿದೆ. ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಲು ಬಿಜೆಪಿಯವರು ಅಧಿಕಾರಿಗಳನ್ನಿಟ್ಟುಕೊಂಡು, ವಾಮ ಮಾರ್ಗಗಳಿಂದ ಜಯಗಳಿಸಿದ್ದಾರೆ ಎಂದರು.ತಮಿಳುನಾಡಿಲ್ಲಿ ಟಿವಿಕೆಗೆ ಕಾಂಗ್ರೆಸ್ ಬೆಂಬಲ ವಿಚಾರವಾಗಿ ಮಾತನಾಡಿ, ಕೆಲವು ಬಿಜೆಪಿಯಂತಹ ಕೋಮುವಾದಿ ಶಕ್ತಿಗಳನ್ನು ಅಲ್ಲಿನ ಜನರು ದೂರಿಟ್ಟಿದ್ದಾರೆ. ತಮಿಳುನಾಡಿನಲ್ಲಿ ಪರ್ಯಾಯವಾಗಿ ಜ್ಯಾತ್ಯಾತೀತ ಹಿನ್ನೆಲೆಯಲ್ಲಿ ಬಂದಿರುವ ಟಿವಿಕೆಯ ಯುವಕ ವಿಜಯಗೆ ಜನ ಬಹುದೊಡ್ಡ ಮನ್ನಣೆ ಕೊಟ್ಟಿದ್ದಾರೆ. ಜನರ ತೀರ್ಪು ಹುಸಿಯಾಗಬಾರದು, ಜನರ ತೀರ್ಪಿಗೆ ನಾವು ತಲೆಬಾಗಬೇಕು ಎಂದು ತಿಳಿಸಿದರು.ಕೋಮುವಾದಿ ಶಕ್ತಿಗಳಿಗೆ ವಿರುದ್ಧವಾಗಿ ಇಂದು ಟಿವಿಕೆನವರು ಗೆದ್ದಿದ್ದು, ಅವರನ್ನು ಬೆಂಬಲಿಸುವಲ್ಲಿ ನಾವು ವಿಫಲವಾದರೇ ಕೋಮುವಾದಿ ಶಕ್ತಿಗಳನ್ನು ಬೆಳೆಸಲು ಅವಕಾಶ ಕೊಟ್ಟಂತಾಗುತ್ತದೆ. ಹಾಗಾಗಿ ಟಿವಿಕೆಗೆ ಕಾಂಗ್ರೆಸ್ ಬೆಂಬಲ ಸಿಕ್ಕಿದೆ. ಟಿವಿಕೆ ಸರ್ಕಾರ ರಚನೆ ಮಾಡುವಲ್ಲಿ ನಾವು ಬೆಂಬಲ ಕೊಟ್ಟಿದ್ದೇವೆ. ಟಿವಿಕೆಗೆ ಬಂಬಲ ಕೊಡದಿದ್ದರೇ ಜನರು ನಮ್ಮನ್ನು ಕ್ಷಮಿಸುವುದಿಲ್ಲ. ನಾವು ಕಾಂಗ್ರೆಸ್ ನವರು ಅವರಿಗೆ ಬೆಂಬಲಿಸದಿದ್ದರೆ ಜನರು ನಮ್ಮನ್ನು ತಪ್ಪಿತಸ್ಥರನ್ನಾಗಿ ಮಾಡುತ್ತಾರೆ. ಜನರ ತೀರ್ಪಿಗೆ ವಿರೋಧವಾಗಿ ಹೋಗುವುದು ಆಗಬಾರದು ಎಂದು ನಾವು ಟಿವಿಕೆಗೆ ಬೆಂಬಲ ಕೊಡುತ್ತಿದ್ದೇವೆ. ಎಲ್ಲೊ ಒಂದುಕಡೆ ನಮ್ಮ ತತ್ವ ಸಿದ್ಧಾಂತಕ್ಕೆ ವಿರೋಧಿಸಿದಂತಾಗುತ್ತದೆ. ಅದರರ್ಥ ಡಿಎಂಕೆಗೆ ನಾವು ಬೆನ್ನಿಗೆ ಚೂರಿ ಹಾಕಿದೆವು ಅಂತಲ್ಲ. ಡಿಎಂಕೆ ಪಕ್ಷದ ಜೊತೆಗೂ ಮಾತನಾಡುತ್ತೇವೆ ಎಂದರು.ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ಕೊಡಬೇಕಾಗುತ್ತದೆ. ಪ್ರತಿವರ್ಷ ನಾವು ಆಲಮಟ್ಟಿ ಡ್ಯಾಂ ನಲ್ಲಿ ಜೂನ್ 15ರವರೆಗೆ ಲೆಕ್ಕಾಚಾರ ಹಾಕಿ ನೀರು ಕೊಡುತ್ತಿದ್ದೇವು. ಇದೀಗ ಪರಿಸ್ಥಿತಿ ಬದಲಾಗಬಹುದು, ನಾರ್ಮಲ್‌ ಆಗಿ ಮಳೆ ಬಂದರೆ ಜೂ.15ರವರೆಗೆ ಆಗುತ್ತದೆ. ಇಲ್ಲವಾದಲ್ಲಿ ಆ.15ರವರೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಾಗುತ್ತದೆ. ಕೃಷಿಗಿಂತ ಮೊದಲು ನಾವು ಕುಡಿಯುವ ನೀರಿಗೆ ಆದ್ಯತೆ ಕೊಡಬೇಕಾಗುತ್ತದೆ ಎಂದರು.ಪುಣೆಯಲ್ಲಿರುವ ಅದಾನಿ ಕಂಪನಿಗೆ ಜಿಲ್ಲೆಯ ಎನ್‌ಟಿಪಿಸಿಯಿಂದ ವಿದ್ಯುತ್ ಲೈನ್ ಹೊರಟಿದ್ದು, ರೈತರಿಗೆ ಸಮಸ್ಯೆಯಾಗುತ್ತಿರುವ ವಿಚಾರವಾಗಿ ಮಾತನಾಡಿ, ಅದು ಕೇಂದ್ರ ಸರ್ಕಾರದ ಯೋಜನೆ, ಕೇಂದ್ರದ ಆಕ್ಟ್ ಪ್ರಕಾರ ಕೊಡುವ ಪರಿಹಾರವನ್ನು 95 ಪರ್ಸೆಂಟ್ ರೈತರು ಒಪ್ಪಿಕೊಂಡಿದ್ದು, ಈ ಕುರಿತು ಜಿಲ್ಲಾಧಿಕಾರಿಗಳಿಗೆ ವಿವರವಾಗಿ ಮಾಹಿತಿ ಕೊಡುವಂತೆ ತಿಳಿಸಿದ್ದೇನೆ. ಕೆಲವರು ಬ್ಲಾಕಮೇಲ್ ಮಾಡುವ ತಂತ್ರ ಮಾಡುತ್ತಿದ್ದಾರೆ. ಈ ಬ್ಲಾಕಮೇಲ್ ಮಾಡುವ ತಂತ್ರ ನಿಲ್ಲಬೇಕು ಎಂದು ತಿಳಿಸಿದರು.

ನಗರದಲ್ಲಿ ಬೀದಿನಾಯಿ ದಾಳಿ ವಿಚಾರವಾಗಿ ನಿನ್ನೆಯೇ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಅದಕ್ಕೆ ಶಾಶ್ವತವಾದ ಪರಿಹಾರಕ್ಕಾಗಿ ಚಿಂತಿಸಲಾಗುತ್ತಿದೆ. ಬೀದಿ ನಾಯಿಗಳಿಗೆ ಲಸಿಕೆ ಕೊಡುವುದು, ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸುವುದು, ಅವುಗಳನ್ನು ಬೇರೆಡೆ ಶೆಲ್ಟರ್‌ನಲ್ಲಿರಿಸುವುದು ಸೇರಿದಂತೆ ಎಲ್ಲ ರೀತಿಯಿಂದ ಪರಹಾರ ಕೊಡುವ ಕೆಲಸ ಆಗಲಿದೆ.

-ಎಂ.ಬಿ.ಪಾಟೀಲ,
ಸಚಿವರು.