ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಡದಿಯ ಖಾಸಗಿ ರೆಸಾರ್ಟ್‌ನಲ್ಲಿ ಬೀಡುಬಿಟ್ಟಿರುವ ಕಾಂಗ್ರೆಸ್‌ನ ಶಾಸಕರಿಗೆ ಬುಧವಾರ ಅಣಕು ಮತದಾನದ ಮೂಲಕ ತರಬೇತಿ ನೀಡಲಾಯಿತು.

ಇದೇ ವೇಳೆ ಬಿಜೆಪಿಯಿಂದ ಉಚ್ಚಾಟಿತ ಎಸ್‌.ಟಿ. ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಸೇರಿ ಕಾಂಗ್ರೆಸ್‌ ಪರ ಇರುವ 140 ಶಾಸಕರಿಗೂ ಯಾರು ಯಾವ ಅಭ್ಯರ್ಥಿಗೆ ಮತ ಹಾಕಬೇಕು ಎಂಬ ಸ್ಪಷ್ಟ ಸೂಚನೆ ನೀಡಿದ್ದು, ಕಾಂಗ್ರೆಸ್‌ನಿಂದ ಕಣದಲ್ಲಿರುವ 5 ಅಭ್ಯರ್ಥಿಗಳಿಗೂ ತಲಾ 28 ಮತಗಳನ್ನು ಚಲಾಯಿಸಲು ತೀರ್ಮಾನಿಸಲಾಗಿದೆ.

ವಂಡರ್‌ ಲಾ ರೆಸಾರ್ಟ್‌ನಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಬಳಿಕ ರೆಸಾರ್ಟ್‌ನಲ್ಲೇ ಉಳಿದಿರುವ ಶಾಸಕರಿಗೆ ಬುಧವಾರ ಮಾದರಿ ಮತಗಟ್ಟೆ (ಡಮ್ಮಿ ಬ್ಯಾಲೆಟ್‌) ಮೂಲಕ ತರಬೇತಿ ನೀಡಲಾಯಿತು. ವಿಧಾನಪರಿಷತ್ ಚುನಾವಣೆ ನಡೆಯುವ ರೀತಿಯನ್ನು ಮರು ಸೃಷ್ಟಿ ಮಾಡಿ ಯಾವ ಶಾಸಕರು ಯಾವ ಅಭ್ಯರ್ಥಿಗೆ ಮತ ಹಾಕಬೇಕು ಎಂಬ ಬಗ್ಗೆ ಪ್ರಾಯೋಗಿಕವಾಗಿ ನಿರ್ದೇಶನ ನೀಡಲಾಯಿತು.

ಸಿಎಂ, ಮಾಜಿ ಸಿಎಂ ಅವರಿಂದಲೂ ಮತ ಚಲಾವಣೆ:


ಈ ವೇಳೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಎಲ್ಲರೂ ಮಾದರಿ ಮತಗಟ್ಟೆಯಲ್ಲಿ ಮತ ಹಾಕಿದರು.

ಪ್ರತಿ ಶಾಸಕರಿಗೆ ಕಣದಲ್ಲಿರುವ ಎಂಟು ಅಭ್ಯರ್ಥಿಗಳ ವಿವರವುಳ್ಳ ಮತಪತ್ರ ವಿತರಿಸಲಾಯಿತು. ಮತಪತ್ರದಲ್ಲಿ ತಮಗೆ ಸೂಚಿಸಿರುವ ಅಭ್ಯರ್ಥಿಗೆ ಆಯಾ ಶಾಸಕರು ಮತ ಹಾಕಿ ಬಳಿಕ ಡಮ್ಮಿ ಮತಗಟ್ಟೆಗೆ ಹಾಕಿದರು.

ಯಾವ ಅಭ್ಯರ್ಥಿಗೆ ಯಾವ ವಿಧಾನಸಭೆ ಸದಸ್ಯರು ಮತ ಹಾಕಬೇಕು ಎಂಬ ಬಗ್ಗೆ ತಿಳಿಸಿ ಅಣಕು ಮತದಾನದ ವೇಳೆಯೂ ಅದೇ ಅಭ್ಯರ್ಥಿಗೆ ಮತ ಹಾಕಿಸಲಾಯಿತು. ಬಳಿಕ ಚಲಾವಣೆಯಾದ ಮತಗಳನ್ನು ಪರಿಶೀಲಿಸಿದ್ದು, ಎಲ್ಲ ಮತಗಳೂ ಸರಿಯಾಗಿದ್ದವು ಎಂದು ಮೂಲಗಳು ತಿಳಿಸಿವೆ.

ಬಸ್ಸುಗಳ ಮೂಲಕ ನೇರವಾಗಿ ವಿಧಾನಸಭೆಗೆ:

ಗುರುವಾರ ಬೆಳಗ್ಗೆ ವಿಧಾನಸೌಧದಲ್ಲಿ ಮತದಾನ ನಡೆಯಲಿದ್ದು, ಇದಕ್ಕೆ ನೇರವಾಗಿ ರೆಸಾರ್ಟ್‌ನಿಂದ ಬಸ್ಸುಗಳ ಮೂಲಕ ಶಾಸಕರು ವಿಧಾನಸೌಧಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಯಾವುದೇ ಗೊಂದಲ ಆಗದಂತೆ ಪ್ರತಿ ಅಭ್ಯರ್ಥಿಗೆ ಒಬ್ಬರನ್ನು ಏಜೆಂಟ್ ಆಗಿ ನೇಮಿಸಿದ್ದು, ಅವರು ಎಲ್ಲವನ್ನೂ ನೋಡಿಕೊಳ್ಳಬೇಕು ಎಂದು ತಿಳಿಸಲಾಗಿದೆ.-ಬಾಕ್ಸ್-

ಅಣಕು ಮತದಾನದಲ್ಲಿ ಹೆಬ್ಬಾರ್, ಎಸ್ಟಿಎಸ್‌!

ವಂಡರ್‌ಲಾ ರೆಸಾರ್ಟ್‌ನಲ್ಲಿ ನಡೆದ ಕಾಂಗ್ರೆಸ್‌ನ ಅಣು ಮತದಾನದಲ್ಲಿ ಬಿಜೆಪಿಯ ಉಚ್ಚಾಟಿತ ಶಾಸಕರಾದ ಎಸ್‌.ಟಿ. ಸೋಮಶೇಖರ್‌ ಹಾಗೂ ಶಿವರಾಂ ಹೆಬ್ಬಾರ್‌ ಅವರು ಭಾಗವಹಿಸಿದ್ದರು. ಆ ಮೂಲಕ ಇಬ್ಬರೂ ಶಾಸಕರ ಮತ ಕಾಂಗ್ರೆಸ್‌ ಅಭ್ಯರ್ಥಿಗೆ ಖಚಿತ ಎಂಬಂತಾಗಿದೆ.ಜೆಡಿಎಸ್‌ ಕರೆ ಬಂದರೆ ಮಾಹಿತಿ ನೀಡಿ:

ಜೆಡಿಎಸ್‌ ಪಕ್ಷದವರು ಕಾಂಗ್ರೆಸ್‌ ಹಲವು ಶಾಸಕರನ್ನು ಸಂಪರ್ಕಿಸಲು ಯತ್ನಿಸಿದ್ದು, ಇಂತಹವುಗಳನ್ನು ಗಮನಕ್ಕೆ ತರುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು. ಈ ವೇಳೆ ಮೊಳಕಾಲ್ಮೂರು ಶಾಸಕ ಎನ್‌.ವೈ. ಗೋಪಾಲಕೃಷ್ಣ, ‘ಜೆಡಿಎಸ್‌ನವರು ಕರೆ ಮಾಡಿದ್ದು ನಿಜ, ಆದರೆ ನಾನು ಸ್ವೀಕರಿಸಿಲ್ಲ’ ಎಂದು ಹೇಳಿದರು.

ಇದಕ್ಕೆ ಡಿ.ಕೆ. ಶಿವಕುಮಾರ್‌, ಇದೇ ರೀತಿ ಇನ್ನೂ ಹಲವರಿಗೆ ಸಂಪರ್ಕಿಸಲು ಯತ್ನಿಸಿರಬಹುದು. ಜೆಡಿಎಸ್‌ ಅಭ್ಯರ್ಥಿಯು ಹೆಂಡತಿ, ಮಗ, ಕಾರು ಡ್ರೈವರ್‌ ದೂರವಾಣಿ ಸಂಖ್ಯೆ ಮೂಲಕ ಕಾಂಗ್ರೆಸ್‌ ಶಾಸಕರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಮತಚಲಾವಣೆ ಆಗುವವರೆಗೆ ಅನಾಮಿಕ ಕರೆಗಳನ್ನು ಸ್ವೀಕರಿಸಬೇಡಿ ಎಂದು ಡಿ.ಕೆ. ಶಿವಕುಮಾರ್‌ ಪುನರುಚ್ಛರಿಸಿದ್ದಾರೆ ಎಂದು ತಿಳಿದುಬಂದಿದೆ.ಅಡ್ಡ ಮತ ಭೀತಿ: ಜೆಡಿಎಸ್‌ ಶಾಸಕರು ರೆಸಾರ್ಟ್‌ಗೆ:

ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ಗುರುವಾರ ಚುನಾವಣೆ ಹಿನ್ನೆಲೆಯಲ್ಲಿ ಅಡ್ಡಮತದಾನದ ಭೀತಿಯಲ್ಲಿ ಜೆಡಿಎಸ್‌ ಪಕ್ಷವು ತನ್ನ ಶಾಸಕರನ್ನು ದೇವನಹಳ್ಳಿ ಸಮೀಪದ ರೆಸಾರ್ಟ್‌ಗೆ ಸ್ಥಳಾಂತರಿಸಿದೆ.18 ಶಾಸಕರ ಸಂಖ್ಯಾಬಲ ಹೊಂದಿರುವ ಜೆಡಿಎಸ್‌ ಬಳಿ ತಮ್ಮ ಅಭ್ಯರ್ಥಿ ಗೆಲ್ಲುವಷ್ಟು ಮತಗಳಿಲ್ಲ. ಮೈತ್ರಿ ಪಕ್ಷ ಬಿಜೆಪಿಯ ಹೆಚ್ಚುವರಿ ಮತ ಪಡೆದರೂ ಜೆಡಿಎಸ್‌ ಅಭ್ಯರ್ಥಿ ಗೆಲ್ಲಲು ಸಾಧ್ಯವಿಲ್ಲ. ಆದರೂ ಆಡಳಿತಾರೂಢ ಕಾಂಗ್ರೆಸ್‌ನ 5ನೇ ಅಭ್ಯರ್ಥಿಗೆ ಸುಲಭ ಗೆಲುವು ಸಿಗಬಾರದು ಎಂಬ ಕಾರಣಕ್ಕೆ ಜೆಡಿಎಸ್‌ ತನ್ನ ಅಭ್ಯರ್ಥಿ ಕಣಕ್ಕಿಳಿಸಿ ಪೈಪೋಟಿ ನೀಡುತ್ತಿದೆ.ಈಗಾಗಲೇ ಕಾಂಗ್ರೆಸ್‌ ಪಕ್ಷವು ತನ್ನ ಶಾಸಕರನ್ನು ಬಿಡದಿ ಬಳಿಯ ರೆಸಾರ್ಟ್‌ಗೆ ಕರೆಸಿಕೊಂಡು ಉಳಿಸಿಕೊಂಡಿದೆ. ಇದೀಗ ಚುನಾವಣೆ ವೇಳೆ ತಮ್ಮ ಶಾಸಕರಿಂದ ಅಡ್ಡಮತದಾನ ಆಗಬಾರದು ಎಂಬ ಕಾರಣಕ್ಕೆ ಬುಧವಾರ ಸಂಜೆಯೇ ಜೆಡಿಎಸ್‌ ಕೂಡ ತನ್ನ ಶಾಸಕರನ್ನು ಕರೆಸಿಕೊಂಡು ರೆಸಾರ್ಟ್‌ನಲ್ಲಿ ಉಳಿಸಿದೆ. ಶಾಸಕರು ರಾತ್ರಿ ರೆಸಾರ್ಟ್‌ನಲ್ಲಿಯೇ ವಾಸ್ತವ್ಯ ಹೂಡಲಿದ್ದು, ಗುರುವಾರ ಬೆಳಗ್ಗೆ ನೇರವಾಗಿ ಅಲ್ಲಿಂದ ವಿಧಾನಸೌಧಕ್ಕೆ ಬಂದು ಮತ ಚಲಾಯಿಸಲಿದ್ದಾರೆ.ಜೆಡಿಎಸ್‌ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಬುಧವಾರ ರಾತ್ರಿ ಶಾಸಕರ ಸಭೆ ನಡೆಸಲಾಗಿದೆ. ತಮ್ಮ ಅಭ್ಯರ್ಥಿ ಗೆಲ್ಲುವಷ್ಟು ಮತಗಳು ನಮ್ಮ ಬಳಿ ಇಲ್ಲ. ಆದರೂ ನಾವು ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ಕಾಂಗ್ರೆಸ್‌ಗೆ ಪೈಪೋಟಿ ನೀಡಬೇಕು. ಹೀಗಾಗಿ ಚುನಾವಣೆ ವೇಳೆ ಯಾವುದೇ ಗೊಂದಲಕ್ಕೆ ಎಡೆಮಾಡಿಕೊಡದೆ ನಮ್ಮ ಅಭ್ಯರ್ಥಿಗೇ ಮತ ಹಾಕಬೇಕು ಎಂದು ಶಾಸಕರಿಗೆ ತಿಳಿಸಲಾಗಿದೆ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.ಶಾಸಕರಿಗೆ ವಿಪ್‌ ಜಾರಿ:ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ಗೌಪ್ಯ ಮತದಾನ ನಡೆಯಲಿದೆ. ಶಾಸಕರು ಗೌಪ್ಯವಾಗಿ ತಮ್ಮ ಮತ ಚಲಾಯಿಸುತ್ತಾರೆ. ಆದರೂ ಜೆಡಿಎಸ್‌ ಪಕ್ಷದ ಮುಖ್ಯ ಸಚೇತಕ ಹರೀಶ್ ಗೌಡ ಅವರು ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೋವಿಂದರಾಜು ಅವರಿಗೆ ಕಡ್ಡಾಯವಾಗಿ ಮತ ಹಾಕುವಂತೆ ಜೆಡಿಎಸ್‌ನ ಶಾಸಕರಿಗೆ ವಿಪ್‌ ಜಾರಿ ಮಾಡಿದ್ದಾರೆ.ಜೆಡಿಎಸ್‌ಗೆ ಯತ್ನಾಳ್ ಮತ?:ಬಿಜೆಪಿಯಿಂದ ಉಚ್ಚಾಟಿತ ಶಾಸಕ ಬಸನಗೌಡ ಯತ್ನಾಳ್‌ ಅವರು ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದ ಅಭ್ಯರ್ಥಿಗೆ ಮತ ಹಾಕುವ ಸಾಧ್ಯತೆಯಿದೆ. ಈಗಾಗಲೇ ಎಚ್.ಡಿ.ಕುಮಾರಸ್ವಾಮಿ ಅವರು ಯತ್ನಾಳ್‌ ಅವರೊಂದಿಗೆ ಮಾತನಾಡಿ ತಮ್ಮ ಅಭ್ಯರ್ಥಿಗೆ ಮತ ಹಾಕುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಯತ್ನಾಳ್‌ ಸಹ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.ಬಿಜೆಪಿ ಹೆಚ್ಚುವರಿ ಮತಕ್ಕೆ ಮನವಿ:ವಿಧಾನ ಪರಿಷತ್‌ ಚುನಾವಣೆಯಲ್ಲಿ ಹೆಚ್ಚುವರಿ ಮತಗಳನ್ನು ತಮಗೆ ನೀಡುವಂತೆ ಜೆಡಿಎಸ್‌ ಅಭ್ಯರ್ಥಿ ಗೋವಿಂದರಾಜು ನೇತೃತ್ವದ ಜೆಡಿಎಸ್‌ ನಾಯಕರ ನಿಯೋಗವು ರಾಜ್ಯ ಬಿಜೆಪಿ ನಾಯಕರಿಗೆ ಮನವಿ ಮಾಡಿದೆ. ಬುಧವಾರ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ಮೇಲ್ಮನೆ ಪ್ರತಿಪಕ್ಷದ ನಾಯಕ ಛಲವಾದಿ ನಾರಾಣಸ್ವಾಮಿ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ.

ಜೆಡಿಎಸ್‌ ಅಭ್ಯರ್ಥಿಗೆ ಜಿಟಿಡಿ ಮತ:ಜೆಡಿಎಸ್‌ ಹಿರಿಯ ಶಾಸಕ ಜಿ.ಟಿ.ದೇವೇಗೌಡ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ರೆಸಾರ್ಟ್‌ಗೆ ಬಂದಿರಲಿಲ್ಲ. ಮೈಸೂರಿನ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿರುವ ದೇವೇಗೌಡರು, ಗುರುವಾರ ಬೆಳಗ್ಗೆ ಮೈಸೂರಿನಿಂದ ನೇರವಾಗಿ ವಿಧಾನಸೌಧಕ್ಕೆ ಬಂದು ಮತ ಚಲಾಯಿಸಲಿದ್ದಾರೆ.ಪಕ್ಷದ ನಾಯಕರ ಬಗ್ಗೆ ಅವರಿಗೆ ಯಾವುದೇ ಮುನಿಸಿಲ್ಲ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮಾತನಾಡಿ ಎಲ್ಲವನ್ನೂ ಸರಿಪಡಿಸಿದ್ದಾರೆ. ಇನ್ನು ಮುಂದೆ ಪಕ್ಷದ ಚುಟುವಟಿಕೆಗಳಲ್ಲಿ ಜಿ.ಟಿ.ದೇವೇಗೌಡರು ಸಕ್ರಿಯರಾಗಲಿದ್ದಾರೆ. ಈ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದ ಅಭ್ಯರ್ಥಿಗೆ ಚಲಾಯಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.