ಉತ್ತರ ಕನ್ನಡ, ಧಾರವಾಡ, ಹಾವೇರಿ, ಗದಗ ಜಿಲ್ಲೆಗಳನ್ನೊಳಗೊಂಡ ಪಶ್ಚಿಮ ಪದವೀಧರ ಕ್ಷೇತ್ರ 2026ರ ಅಕ್ಟೋಬರ್‌ನಲ್ಲಿ ಅವಧಿ ಮುಕ್ತವಾಗಲಿದೆ. ಅಕ್ಟೋಬರ್‌ ಅಥವಾ ನವೆಂಬರ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಚುನಾವಣೆ ಘೋಷಣೆಗೂ ಮುನ್ನವೇ ತನ್ನ ಅಭ್ಯರ್ಥಿಯನ್ನಾಗಿ ವಿಧಾನ ಪರಿಷತ್‌ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಅವರನ್ನು ಅಖೈರು ಮಾಡಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಪಶ್ಚಿಮ ಪದವೀಧರ ಕ್ಷೇತ್ರದಿಂದ ಪರಿಷತ್‌ಗೆ ನಡೆಯುವ ಚುನಾವಣೆಗೆ 11 ತಿಂಗಳು ಬಾಕಿಯಿರುವಾಗಲೇ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಿರುವ ಕಾಂಗ್ರೆಸ್‌ ಹೈಕಮಾಂಡ್‌ಗೆ ಟಿಕೆಟ್‌ ವಂಚಿತರನ್ನು ಸಮಾಧಾನ ಪಡಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹೇಗಾದರೂ ಮಾಡಿ ಕ್ಷೇತ್ರವನ್ನು ವಶ ಪಡಿಸಿಕೊಳ್ಳಬೇಕೆಂಬ ಇರಾದೆಯಲ್ಲಿದ್ದ ಕಾಂಗ್ರೆಸ್‌ಗೆ ಭಿನ್ನಮತ ಸುಡುತ್ತಿದೆ.

ಆಗಿರುವುದೇನು?:

ಉತ್ತರ ಕನ್ನಡ, ಧಾರವಾಡ, ಹಾವೇರಿ, ಗದಗ ಜಿಲ್ಲೆಗಳನ್ನೊಳಗೊಂಡ ಪಶ್ಚಿಮ ಪದವೀಧರ ಕ್ಷೇತ್ರ 2026ರ ಅಕ್ಟೋಬರ್‌ನಲ್ಲಿ ಅವಧಿ ಮುಕ್ತವಾಗಲಿದೆ. ಅಕ್ಟೋಬರ್‌ ಅಥವಾ ನವೆಂಬರ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಚುನಾವಣೆ ಘೋಷಣೆಗೂ ಮುನ್ನವೇ ತನ್ನ ಅಭ್ಯರ್ಥಿಯನ್ನಾಗಿ ವಿಧಾನ ಪರಿಷತ್‌ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಅವರನ್ನು ಅಖೈರು ಮಾಡಿದೆ. ಅವರು ಈಗಿನಿಂದಲೇ ನಾಲ್ಕು ಜಿಲ್ಲೆಗಳಲ್ಲಿ ಸುತ್ತಾಡುತ್ತಾ ಚುನಾವಣೆ ಪ್ರಚಾರ ಶುರು ಹಚ್ಚಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಇಷ್ಟು ಬೇಗ ಅಭ್ಯರ್ಥಿಯನ್ನು ಅಖೈರುಗೊಳಿಸಿರುವ ಕಾಂಗ್ರೆಸ್‌, ಹೊಸ ತಂತ್ರಗಾರಿಕೆಗೆ ಮುಂದಾಗಿದೆ. ಆದರೆ, ಒಂದೂವರೆ ಡಜನ್‌ಗಟ್ಟಲೇ ಇದ್ದ ಆಕಾಂಕ್ಷಿಗಳಲ್ಲಿ ಇದು ತೀವ್ರ ಅಸಮಾಧಾನವನ್ನುಂಟು ಮಾಡಿದೆ. ಅದರಲ್ಲಿ ಒಂದಿಬ್ಬರು ಬಹಿರಂಗವಾಗಿಯೇ ಪಕ್ಷಕ್ಕೆ ಸಡ್ಡು ಹೊಡೆಯುವ ಸಂದೇಶವನ್ನು ರವಾನಿಸುವ ಮೂಲಕ ಎಚ್ಚರಿಕೆಯನ್ನೇ ನೀಡಿದ್ದಾರೆ.

ಯಾರಿವರು?:

ಕಳೆದ ಬಾರಿ ಕಾಂಗ್ರೆಸ್‌ ಪಕ್ಷದಿಂದ ಟಿಕೆಟ್‌ ಪಡೆದು ಪರಾಭವಗೊಂಡಿದ್ದ ಆರ್‌.ಎಂ. ಕುಬೇರಪ್ಪ ಅವರಿಗೆ ಇದು 5ನೇ ಚುನಾವಣೆ. ಎರಡು ಬಾರಿ ಪಶ್ಚಿಮ ಪದವೀಧರ ಕ್ಷೇತ್ರವಾಗಿದ್ದರೆ, ಮೂರು ಬಾರಿ ಶಿಕ್ಷಕರ ಕ್ಷೇತ್ರದಿಂದ ಅದೃಷ್ಟ ಪರೀಕ್ಷಿಸಿದ್ದರು. ಆದರೆ ಅದೃಷ್ಟ ಒಲಿಯಲಿಲ್ಲ. ಕಳೆದ ಬಾರಿ ಬಿಜೆಪಿ ಸರ್ಕಾರವಿದ್ದಾಗ

ಕಾಂಗ್ರೆಸ್‌ನಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳೇ ಇರಲಿಲ್ಲ. ಆಗ ಕುಬೇರಪ್ಪ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿತ್ತು. ಇದೀಗ ನಮ್ಮದೆ ಸರ್ಕಾರವಿದ್ದರೂ ಟಿಕೆಟ್‌ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಅವರು, ತಕ್ಷಣ ಆಗಿರುವ ಅನ್ಯಾಯ ಸರಿಪಡಿಸಬೇಕು. ಇಲ್ಲದಿದ್ದರೆ ಪಕ್ಷದ ಕಾರ್ಯಕರ್ತರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕಳೆದ ಬಾರಿ ಜೆಡಿಎಸ್‌ ಬೆಂಬಲದೊಂದಿಗೆ ಪಕ್ಷೇತರರಾಗಿ ಕಣಕ್ಕಿಳಿದು ಪರಾಭವಗೊಂಡಿರುವ ಬಸವರಾಜ ಗುರಿಕಾರ ಇದೀಗ ಕಾಂಗ್ರೆಸ್‌ನಲ್ಲಿದ್ದಾರೆ. ಕೆಪಿಸಿಸಿ ಶಿಕ್ಷಕರ ವಿಭಾಗದ ಅಧ್ಯಕ್ಷರೂ ಆಗಿರುವ ಅವರು ಈ ಸಲ ತಮಗೆ ಗೆಲ್ಲುವ ಅವಕಾಶವಿತ್ತು. ಆದರೆ, ಪಕ್ಷ ಸರಿಯಾಗಿ ಪರಾಮರ್ಶಿಸದೆ ಟಿಕೆಟ್‌ ಘೋಷಿಸಿದೆ. ಮತ್ತೊಮ್ಮೆ ಪರಿಶೀಲಿಸಿ ಟಿಕೆಟ್‌ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಬೇಕು. ಈ ಸಂಬಂಧ ತಾವೂ ಹೈಕಮಾಂಡ್‌ ಭೇಟಿ ಮಾಡಿ ಮನವರಿಕೆ ಮಾಡಿಕೊಡುತ್ತೇವೆ ಎನ್ನತ್ತಾರೆ ಗುರಿಕಾರ.

ಇವೆಲ್ಲದರ ನಡುವೆಯೇ ಕೆಪಿಸಿಸಿಯೂ ಟಿಕೆಟ್‌ ವಂಚಿತರನ್ನು ಸಮಾಧಾನ ಪಡಿಸಲು ಯತ್ನಿಸುತ್ತಿದೆ. ಇದಕ್ಕಾಗಿ ಎಐಸಿಸಿ ರಾಷ್ಟ್ರೀಯ ಕಾರ್ಯದರ್ಶಿ ಮಯೂರ್‌ ಜಯರಾಜ್‌ ಕೂಡ ಬಂದು ಸಭೆ ನಡೆಸಿದ್ದಾರೆ. ಆದರೆ, ಟಿಕೆಟ್‌ ವಂಚಿತರ ಅಸಮಾಧಾನ ಮಾತ್ರ ಶಾಂತವಾಗುತ್ತಿಲ್ಲ. ಚುನಾವಣೆಗೆ 11 ತಿಂಗಳು ಇದೆ. ಭಿನ್ನಮತ ಶಮನಕ್ಕೆ ಏನು ತಂತ್ರಗಾರಿಕೆ ಮಾಡುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!ಕೋಟ್‌...

ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದು ಈ ಬಾರಿ ಟಿಕೆಟ್‌ ಸಿಗುತ್ತದೆ ಎಂದು ಭರವಸೆ ಇಟ್ಟುಕೊಂಡಿದ್ದೆ. ಆದರೆ, ಇದೀಗ ಮತ್ತೊಬ್ಬರನ್ನು ಘೋಷಿಸಿದ್ದು ನಾಲ್ಕು ಜಿಲ್ಲೆಗಳ ಕಾರ್ಯಕರ್ತರೊಂದಿಗೆ ಚರ್ಚಿಸಿ ಮುಂದಿನ ನಿರ್ಣಯಕೈಗೊಳ್ಳುತ್ತೇನೆ.

ಆರ್‌.ಎಂ.ಕುಬೇರಪ್ಪ, ಟಿಕೆಟ್‌ ವಂಚಿತಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದರೂ ನನಗೆ ಟಿಕೆಟ್‌ ಕೈತಪ್ಪಿರುವುದು ಬೇಸರವನ್ನುಂಟು ಮಾಡಿದೆ. ಅಭ್ಯರ್ಥಿ ಕುರಿತಂತೆ ಹೈಕಮಾಂಡ್‌ ಮರುಪರಿಶೀಲಿಸಿ ಕ್ರಮಕೈಗೊಳ್ಳಬೇಕು. ಈ ಕುರಿತು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡುತ್ತೇವೆ.

ಬಸವರಾಜ ಗುರಿಕಾರ, ಟಿಕೆಟ್‌ ವಂಚಿತ ಆಕಾಂಕ್ಷಿ