ಸಾರಾಂಶ
ಕೋಮುಗಳ ನಡುವೆ ಘರ್ಷಣೆ ಉಂಟಾಗುವ ಆತಂಕ
ಕನ್ನಡಪ್ರಭ ವಾರ್ತೆ ಸಕಲೇಶಪುರಶಾಂತಿ, ಸಾಮರಸ್ಯದ ನಾಡಾಗಿದ್ದ ರಾಜ್ಯವನ್ನು ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ವಕ್ಫ್ ಮಂಡಳಿಯ ಮೂಲಕ ಆತಂಕದ ಸ್ಥಿತಿಗೆ ತಳ್ಳುತ್ತಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ವಳಲಹಳ್ಳಿ ಅಶ್ವಥ್ ಆರೋಪಿಸಿದರು.
ತಾಲೂಕು ಪತ್ರಕರ್ತರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಕ್ಫ್ ಬೋರ್ಡ್‌ನಿಂದ ಆಗುತ್ತಿರುವ ಗೊಂದಲಗಳು ರಾಜ್ಯದಲ್ಲಿನ ಸಾಮರಸ್ಯ ಹದಗೆಡುವುದಕ್ಕೆ ಕಾರಣವಾಗಿದೆ. ಸರ್ಕಾರದ ವಿವೇಚನೆ ಇಲ್ಲದೆ ಕೈಗೊಳ್ಳುತ್ತಿರುವ ನಿರ್ಧಾರಗಳಿಂದಾಗಿ ರಾಜ್ಯದ ಅನೇಕ ಆಸ್ತಿಗಳ ವ್ಯಾಜ್ಯ ಬೀದಿಗೆ ಬರುತ್ತಿದೆ. ಈಗಾಗಲೇ ಕಡಕೋಳದಲ್ಲಿ ಎರಡು ಕೋಮುಗಳ ನಡುವೆ ಸಂಘರ್ಷ ಪ್ರಾರಂಭವಾಗಿದೆ. ಇದು ಇಡೀ ರಾಜ್ಯವನ್ನು ವ್ಯಾಪಿಸುವ ಸಾಧತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.ಇಡೀ ರಾಜ್ಯದ ರೈತರ ಹಿತದೃಷ್ಟಿಯಿಂದ ತನ್ನ ನಿಲುವನ್ನು ತೆಗೆದುಕೊಳ್ಳಬೇಕಾಗಿದ್ದ ಸಿದ್ಧರಾಮಯ್ಯನವರ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರನ್ನು ಓಲೈಸುವ ದೃಷ್ಟಿಯಿಂದ ಸಂಪೂರ್ಣವಾಗಿ ಅವರ ಪರವಾಗಿ ನಿಂತಿದೆ. ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ಜನತೆಯ ಹಿತದೃಷ್ಟಿಯಿಂದ ಹಾಗೂ ವಕ್ಫ್ ಮಂಡಳಿಯಲ್ಲಿ ಆಗುತ್ತಿದ್ದ ಅಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ವಿಧೇಯಕವನ್ನು ಮಂಡಿಸಿದೆ. ಇದು ಜಂಟಿ ಪಾರ್ಲಿಮೆಂಟರಿ ಬೋರ್ಡ್‌ನ ಪರಿಶೀಲನೆಯಲ್ಲಿದೆ. ಈ ತಿದ್ದುಪಡಿ ಜಾರಿಯಾಗುವುದು ಬಹುತೇಕ ಖಚಿತವಾಗುತ್ತಿದ್ದಂತೆ ವಕ್ಫ್ ಬೋರ್ಡ್ ತನ್ನ ಕರಾಳ ಕೈಚಳಕವನ್ನು ಮಾಡುವ ಮೂಲಕ ಇಡೀ ದೇಶದಲ್ಲಿ ಸಾರ್ವಜನಿಕ ಆಸ್ತಿಯನ್ನು ಕಬಳಿಸುವ ಹುನ್ನಾರಕ್ಕೆ ಕೈ ಹಾಕಿದೆ ಎಂದು ದೂರಿದರು.
ರಾಜ್ಯದಲ್ಲಿ ನಡೆಯುತ್ತಿರುವ ಇಂತಹ ಕುಕೃತ್ಯಗಳಿಗೂ ಕಾಂಗ್ರೆಸ್ ಸರ್ಕಾರ ಹಾಗೂ ಸಚಿವ ಜಮೀರ್ ಅಹ್ಮದ್ ನೇರವಾಗಿ ಕುಮ್ಮಕು ಕೊಡುತ್ತಿರುವುದು ಇಡೀ ರಾಜ್ಯದ ಜನರ ಆತಂಕಕ್ಕೆ ಕಾರಣವಾಗಿದೆ. ರಾಜ್ಯದ ಹಲವು ಕಡೆ ಜಮೀನು ವಕ್ಫ್ ಆಸ್ತಿ ಎಂದು ನಮೂದಿಸಿ ಅಧಿಕಾರಿಗಳಿಂದ ಪುಷ್ಟೀಕರಿಸಿ ನೋಟಿಸ್ ನೀಡಿ ನಂತರ ಬಿಜೆಪಿಯ ಒತ್ತಾಯದಿಂದ ಹಿಂಪಡೆಯಲಾಗಿದೆ. ವಕ್ಫ್ ಬೋರ್ಡ್ ಆಸ್ತಿ ಕಬಳಿಕೆ ಕುಕೃತ್ಯಗಳನ್ನು ವಿರೋಧಿಸಿ ಪಟ್ಟಣದಲ್ಲಿರುವ ತಾಲೂಕು ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ನ.7 ರಂದು ಪ್ರತಿಭಟನೆ ನಡೆಸಲಾಗುವುದು. ಪ್ರತಿಭಟನೆಯನ್ನು ಕ್ಷೇತ್ರದ ಜನತೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ರಾಜ್‌ಕುಮಾರ್ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ಧರಾಮಯ್ಯ ಸರ್ಕಾರ ಕೇವಲ ಒಂದು ವರ್ಗದ ಸರ್ಕಾರದಂತೆ ವರ್ತಿಸುತ್ತಿದ್ದು ಇದರಿಂದ ಸರ್ವ ಜನಾಂಗದ ಶಾಂತಿಯ ತೋಟವು ಕದಡುವ ಸಾಧ್ಯತೆಯಿದ್ದು ರಾಜ್ಯದಲ್ಲಿ ಮುಂದಾಗುವ ಅನಾಹುತಗಳಿಗೆ ಕಾಂಗ್ರೆಸ್ ಸರ್ಕಾರವೇ ನೇರವಾಗಿ ಹೊಣೆಯಾಗಬೇಕಾಗುತ್ತದೆ ಎಂದರು.
ರಾಜ್ಯದ ಹಿತಕ್ಕೆ ,ರಾಜ್ಯದ ರೈತರ ಹಿತಕ್ಕೆ ಧಕ್ಕೆ ಆಗುವಂತಹ ಮುಸ್ಲಿಂ ಓಲೈಕೆ ಹಾಗೂ ಹಿಂದೂ ವಿರೋಧಿಗಳ ನಿರ್ಧಾರಗಳನ್ನು ಕಾಂಗ್ರೆಸ್ ಕೈಗೊಳ್ಳುವ ತನ್ನ ಹಳೆ ಚಾಳಿಯನ್ನು ಕೈಬಿಡಬೇಕೆಂದು ಬಿಜೆಪಿ ಆಗ್ರಹಿಸುತ್ತದೆ ಎಂದರು.ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಧು ಬೊಮ್ಮನಕೆರೆ, ಅಗ್ನಿ ಸೋಮಶೇಖರ್, ಬಿಜೆಪಿ ತಾಲೂಕು ರೈತ ಮೋರ್ಚಾ ಅಧಕ್ಷ ಲೋಹಿತ್ ಕೌಡಹಳ್ಳಿ ಹಾಜರಿದ್ದರು.