ಕಾಂಗ್ರೆಸ್‌ ಜಾತಿಗಣತಿ ವರದಿ ಬಿಡುಗಡೆ ಪರ ಇದೆ: ಕಾಂಗ್ರೆಸ್ಸಿಗ ಉಗ್ರಪ್ಪ

| Published : Feb 28 2025, 12:45 AM IST

ಸಾರಾಂಶ

ಜಾತಿಗಣತಿ ವರದಿ ಬಿಡುಗಡೆಯು ರಾಷ್ಟ್ರದ ನಿಲುವಾಗಿದ್ದು, ನಾವು, ನಮ್ಮ ಪಕ್ಷ ಸಹ ಜಾತಿಗಣತಿ ವರದಿ ಬಿಡುಗಡೆ ಪರವಾಗಿಯೇ ಇದ್ದೇವೆ ಎಂದು ಮಾಜಿ ಸಂಸದ, ಕಾಂಗ್ರೆಸ್ಸಿನ ಹಿರಿಯ ಮುಖಂಡ ವಿ.ಎಸ್.ಉಗ್ರಪ್ಪ ಹೇಳಿದರು.

ಕಾಂಗ್ರೆಸ್ ಕೋಟ್ಯಂತರ ಜನರ ಶ್ರಮದಿಂದ ಬೆಳೆಯುತ್ತಿದೆ । ಪವರ್ ಶೇರಿಂಗ್ ಬಗ್ಗೆ ಹೈಕಮಾಂಡ್ ತೀರ್ಮಾನ

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಾತಿಗಣತಿ ವರದಿ ಬಿಡುಗಡೆಯು ರಾಷ್ಟ್ರದ ನಿಲುವಾಗಿದ್ದು, ನಾವು, ನಮ್ಮ ಪಕ್ಷ ಸಹ ಜಾತಿಗಣತಿ ವರದಿ ಬಿಡುಗಡೆ ಪರವಾಗಿಯೇ ಇದ್ದೇವೆ ಎಂದು ಮಾಜಿ ಸಂಸದ, ಕಾಂಗ್ರೆಸ್ಸಿನ ಹಿರಿಯ ಮುಖಂಡ ವಿ.ಎಸ್.ಉಗ್ರಪ್ಪ ಹೇಳಿದರು.

ಜಿಲ್ಲೆಯ ಚನ್ನಗಿರಿ ತಾಲೂಕಿನ ಕೆಂಗಾಪುರ ಗ್ರಾಮದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನೂರಕ್ಕೆ ನೂರರಷ್ಟು ಜಾತಿ ಜನಗಣತಿ ವರದಿಯನ್ನೇ ಬಿಡುಗಡೆ ಮಾಡುವುದಾಗಿ ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದು, ನಾವು, ನಮ್ಮ ಪಕ್ಷ ಸಹ ಜಾತಿಗಣತಿ ವರದಿ ಬಿಡುಗಡೆ ಪರವಾಗಿದ್ದೇವೆ ಎಂದರು.

ಹಲವಾರು ಜಾತಿ ಇರುವ ಸಮಾಜದಲ್ಲಿ ಜಾತಿಗಣತಿ ಬಗ್ಗೆ ಅನುಮಾನವಿದೆ. ಆದರೆ, ಜಾತಿಗಣತಿ ವರದಿ ಹೊರ ಬಂದ ನಂತರವೇ ತಾನೇ ಅದರ ಬಗ್ಗೆ ಗೊತ್ತಾಗುವುದು, ವರದಿಯ ಸಾಧಕ- ಬಾಧಕಗಳ ಬಗ್ಗೆ ತಿಳಿಯುವುದು. ಮೊದಲು ವರದಿ ಬಿಡುಗಡೆಯಾಗಲಿ. ಆ ನಂತರ ಅದರ ಬಗ್ಗೆ ಚರ್ಚೆ ಮಾಡಬೇಕೇ ಹೊರತು, ಜಾತಿಗಣತಿ ವರದಿ ಬಿಡುಗಡೆಗೆ ವಿರೋಧ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಒಂದು ವೇಳೆ ಜಾತಿಗಣತಿ ವರದಿ ಬಗ್ಗೆ ವಿರೋಧವಿದ್ದರೆ, ವರದಿ ಬಿಡುಗಡೆಯಾದ ಬಳಿಕ ವಿರೋಧಿಸಲಿ. ಅದನ್ನು ಬಿಟ್ಟು, ಇನ್ನೂ ವರದಿಯನ್ನೇ ಬಿಡುಗಡೆ ಮಾಡಿಲ್ಲ. ವರದಿಯಲ್ಲೇನಿದೆ ಎಂಬುದೇ ಗೊತ್ತಿಲ್ಲದೆ, ಜಾತಿಗಣತಿ ವರದಿ ಬಿಡುಗಡೆಗೆ ವಿರೋಧ ಮಾಡುವುದಂತೂ ಸರಿಯಲ್ಲ. ನಮ್ಮ ಸರ್ಕಾರವು ಜಾತಿಗಣತಿ ವರದಿ ಬಿಡುಗಡೆಗೆ ಬದ್ಧವಿದೆ. ಸ್ವತಃ ಮುಖ್ಯಮಂತ್ರಿ ವರದಿ ಬಿಡುಗಡೆ ಮಾಡುವುದಾಗಿಯೂ ಹೇಳಿದ್ದಾರೆ ಎಂದು ತಿಳಿಸಿದರು.

ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ದೇಶಕ್ಕೆ ಜಾತ್ಯತೀತ ವ್ಯವಸ್ಥೆಯನ್ನು ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಇಂತಹ ಕಾಂಗ್ರೆಸ್ ಪಕ್ಷವು ಉಳಿದಿರುವುದು, ಬೆಳೆಯುತ್ತಿರುವುದು ಅಲ್ಲೊಬ್ಬ, ಇಲ್ಲೊಬ್ಬ ನಾಯಕನಿಂದಲ್ಲ. ಕೋಟ್ಯಂತರ ಜನರ ಪರಿಶ್ರಮದಿಂದ ಕಾಂಗ್ರೆಸ್ ಪಕ್ಷವು ಉಳಿದಿದೆ. ಪಕ್ಷವನ್ನು ಉಳಿಸಿ, ಬೆಳೆಸುವ ದಿಕ್ಕಿನಲ್ಲಿ ಪ್ರತಿಯೊಬ್ಬ ನಾಯಕರ ಪ್ರಯತ್ನವೂ ಸಾಗಬೇಕು ಎಂದು ಕಿವಿಮಾತು ಹೇಳಿದರು.

ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಆಗುವಂತೆ ಯಾರೂ ಸಹ ಎಲ್ಲಿಯೂ ಮಾತನಾಡಬಾರದು. ಪವರ್‌ ಶೇರಿಂಗ್ ಬಗ್ಗೆ ನಮ್ಮ ಪಕ್ಷದ ಹೈಕಮಾಂಡ್ ಮಾತನಾಡುತ್ತದೆ ಎಂದು ಮುಖ್ಯಮಂತ್ರಿ ಬದಲಾವಣೆ, ಅಧಿಕಾರ ಹಂಚಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಕೆಂಗಾಪುರ ಮುಳ್ಳು ಗದ್ದುಗೆ ಪವಾಡ, ಸ್ವಾಮೀಜಿ ಕಾರ್ಣಿಕ

ದಾವಣಗೆರೆಯ ಕೆಂಗಾಪುರ ಗ್ರಾಮದಲ್ಲಿ ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ಶ್ರೀ ರಾಮಲಿಂಗೇಶ್ವರ ಸ್ವಾಮಿಗಳ 49ನೇ ಮುಳ್ಳು ಗದ್ದೆ ಉತ್ಸವದಲ್ಲಿ ಮುಳ್ಳಿನ ಗದ್ದುಗೆ ಮೇಲೆ ಶ್ರೀ ಸ್ವಾಮೀಜಿ ವಿಶೇಷ ನರ್ತನ ಮಾಡುವ ಉತ್ಸವಕ್ಕೆ ಮೆರಗು ತರುತ್ತಾರೆ.

ಗ್ರಾಮದ ಶ್ರೀ ರಾಮಲಿಂಗೇಶ್ವರ ಮಠದ ಶ್ರೀ ರಾಮಲಿಂಗೇಶ್ವರ ಸ್ವಾಮೀಜಿ ಮುಳ್ಳಿನ ಗದ್ದುಗೆ ಪವಾಡಕ್ಕೆ ಕಾಂಗ್ರೆಸ್ಸಿನ ಹಿರಿಯ ಮುಖಂಡ ವಿ.ಎಸ್.ಉಗ್ರಪ್ಪ ಚಾಲನೆ ನೀಡಿದರು.

ಮುಳ್ಳುಗಳನ್ನು ಹಾಸಿದ, ಮುಳ್ಳುಗಳ ಪಲ್ಲಕ್ಕಿ ಮೇಲೆ ಕುಳಿತುಕೊಳ್ಳುವ ಶ್ರೀ ರಾಮಲಿಂಗೇಶ್ವರ ಸ್ವಾಮೀಜಿ ಗದ್ದುಗೆ ಮೇಲೆ ಕುಪ್ಪಳಿಸುತ್ತಿದ್ದರೆ ಪಲ್ಲಕ್ಕಿ ಮೆರವಣಿಗೆ ಗ್ರಾಮದಲ್ಲಿ ಸಾಗುತ್ತದೆ. ಭಕ್ತರ ಸಂಕಷ್ಟ ನೀಗಿಸಲು ಸ್ವಾಮೀಜಿ ಮುಳ್ಳು ಗದ್ದಿಗೆ ಮೇಲೆ ಕುಳಿತು, ಕುಣಿಯುತ್ತಾರೆ. ಪ್ರತಿ ವರ್ಷ ನಡೆಯುವ ಮುಳ್ಳು ಗದ್ದುಗೆ ಉತ್ಸವಕ್ಕೆ ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮಸ್ಥರು, ವಿವಿಧೆಡೆಯಿಂದ ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಸೇರುತ್ತಾರೆ.

ಕಾರ್ಮೋಡ ಕವಿದೀತು, ಮುತ್ತಿನ ಹನಿಗಳು ಉದುರೀತು, ತೂಗುವ ತೊಟ್ಟಿಲು ಕೈ ತಪ್ಪೀತು. ನಾನಿದ್ದೀನಲೇ ಪರಾಕ್ ಎಂದು ಸ್ವಾಮೀಜಿ ಈ ಬಾರಿ ಕಾರ್ಣಿಕ ನುಡಿದಿದ್ದಾರೆ. ಮಹಾ ಶಿವರಾತ್ರಿ ಮಾರನೆಯ ದಿನ ಚನ್ನಗಿರಿ ತಾ. ಕೆಂಗಾಪುರ ಗ್ರಾಮದಲ್ಲಿ ಮುಳ್ಳು ಗದ್ದುಗೆಯ ಪವಾಡದ ಐತಿಹಾಸಿಕ ಜಾತ್ರೆ ಮಹೋತ್ಸವ ನಡೆಯಿತು.