ಕಾಂಗ್ರೆಸ್‌ ದಲಿತರ ದಾರಿ ತಪ್ಪಿಸುತ್ತಿದೆ; ಎಚ್ಚೆತ್ತುಕೊಳ್ಳಿ

| Published : May 03 2024, 01:03 AM IST

ಕಾಂಗ್ರೆಸ್‌ ದಲಿತರ ದಾರಿ ತಪ್ಪಿಸುತ್ತಿದೆ; ಎಚ್ಚೆತ್ತುಕೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಹುಲ್‌ ಗಾಂಧಿ ಅವರನ್ನು ಹುಚ್ಚರು ಸಹ ಪ್ರಧಾನಿ ಎಂದು ಒಪ್ಪಿಕೊಳ್ಳುವುದಿಲ್ಲ. ಇಷ್ಟು ವರ್ಷ ಕಾಂಗ್ರೆಸ್‌ ಬರೀ ದಲಿತರಿಗೆ ಮೋಸ ಮಾಡುತ್ತಲೇ ಬಂದಿದೆ. ಕಾಂಗ್ರೆಸ್‌ ದೀನ ದಲಿತರ ಅಭಿವೃದ್ಧಿ ಮಾಡಲಿಲ್ಲ.

ಹುಬ್ಬಳ್ಳಿ:

ಸಂವಿಧಾನದ ಆಶಯದಂತೆ ಪ್ರಧಾನಿ ನರೇಂದ್ರ ಮೋದಿ ಆಡಳಿತ ನಡೆಸುತ್ತಿದ್ದಾರೆ. ಆದರೆ ಕಾಂಗ್ರೆಸ್‌ ದಲಿತರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ದಲಿತರನ್ನು ಮತಬ್ಯಾಂಕ್‌ನ್ನಾಗಿ ಬಳಸಿಕೊಂಡಿದೆ. ಇದನ್ನು ಮರೆಯಬಾರದು ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

ಧಾರವಾಡ ಲೋಕಸಭಾ ಕ್ಷೇತ್ರದ ವತಿಯಿಂದ ಇಲ್ಲಿಯ ಮೂರುಸಾವಿರ ಮಠದ ಆವರಣದಲ್ಲಿ ಏರ್ಪಡಿಸಿದ್ದ ಬಿಜೆಪಿ ಎಸ್ಸಿ ಮೋರ್ಚಾ ಸಮಾವೇಶದಲ್ಲಿ ಮಾತನಾಡಿದರು.

ರಾಹುಲ್‌ ಗಾಂಧಿ ಅವರನ್ನು ಹುಚ್ಚರು ಸಹ ಪ್ರಧಾನಿ ಎಂದು ಒಪ್ಪಿಕೊಳ್ಳುವುದಿಲ್ಲ. ಇಷ್ಟು ವರ್ಷ ಕಾಂಗ್ರೆಸ್‌ ಬರೀ ದಲಿತರಿಗೆ ಮೋಸ ಮಾಡುತ್ತಲೇ ಬಂದಿದೆ. ಕಾಂಗ್ರೆಸ್‌ ದೀನ ದಲಿತರ ಅಭಿವೃದ್ಧಿ ಮಾಡಲಿಲ್ಲ. ಸಂವಿಧಾನದ ಪ್ರಕಾರ ಸೌಲಭ್ಯ ನೀಡಲಿಲ್ಲ. ಅದಕ್ಕೆ ಸೋಲಿನ ಭಯ ಬಂದಾಗಲಷ್ಟೇ ಅಂಬೇಡ್ಕರ್‌ ನೆನಪಾಗುತ್ತಾರೆ ಎಂದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಸಂವಿಧಾನ ಬದಲಾಗುತ್ತಿದೆ. ಮೀಸಲಾತಿ ತೆಗೆದುಹಾಕಲಾಗುತ್ತದೆ ಎಂದೆಲ್ಲ ಕಾಂಗ್ರೆಸ್ಸಿಗರು ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಸಂಸದೀಯ ವ್ಯವಹಾರ ಸಚಿವನಾಗಿ ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ. ಸಂವಿಧಾನ ಬದಲಿಸುವುದಿಲ್ಲ. ಮೀಸಲಾತಿಯನ್ನು ಕಸಿದುಕೊಳ್ಳುವುದಿಲ್ಲ. ಬೇರೆ ಸಮುದಾಯದೊಂದಿಗೆ ಸರಿಸಮಾನವಾಗಿ ನಿಲ್ಲುವವರೆಗೂ ಮೀಸಲಾತಿ ಇದ್ದೇ ಇರುತ್ತದೆ ಎಂದರು.

ಅಂಬೇಡ್ಕರ್‌ ಹಾಗೂ ದಲಿತ ಸಮುದಾಯಗಳಿಗೆ ಅತ್ಯಂತ ಅಪಮಾನ ಮಾಡಿದ ಪಕ್ಷವೆಂದರೆ ಕಾಂಗ್ರೆಸ್‌. ಅಂಬೇಡ್ಕರ್‌ ಅವರನ್ನು ಸೋಲಿಸಿದರು. ಜಗಜೀವನರಾಮ್‌ ಅವರನ್ನು ಪ್ರಧಾನಿಯಾಗುವುದನ್ನು ತಪ್ಪಿಸಿದರು. ಅಂಬೇಡ್ಕರ್‌ ಅವರನ್ನು ಸೋಲಿಸಿದ ವ್ಯಕ್ತಿಗೆ ಪದ್ಮವಿಭೂಷಣ ನೀಡಿದರು. ಆದರೆ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಅಂಬೇಡ್ಕರ್‌ ಸ್ಥಳಗಳನ್ನೆಲ್ಲ ಪಂಚತೀರ್ಥಗಳನ್ನಾಗಿ ಅಭಿವೃದ್ಧಿ ಪಡಿಸಿದ್ದಾರೆ. ಹೀಗಾಗಿ ದಲಿತರ ಉದ್ಧಾರ ಅದು ಬಿಜೆಪಿಯಿಂದ ಮಾತ್ರ ಸಾಧ್ಯ. ಆದಕಾರಣ ಈ ಸಲ ಕಮಲಕ್ಕೆ ಮತ ಹಾಕುವ ಮೂಲಕ ಮೋದಿ ಅವರ ಕೈ ಬಲಪಡಿಸಬೇಕು ಎಂದರು.ಬಿಜೆಪಿ ಪರಿಶಿಷ್ಟ ಜಾತಿಯ ಮೋರ್ಚಾ ಉಪಾಧ್ಯಕ್ಷ ಎನ್. ಮಹೇಶ, ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕಾಂಗ್ರೆಸ್‌ ವ್ಯವಸ್ಥಿತವಾಗಿ ಸೋಲಿಸಿದರು. ಈ ಚುನಾವಣಾ ನಮ್ಮ ಅಸ್ತಿತ್ವ ಹಾಗೂ ದೇಶದ ಅಸ್ಮಿತೆಗೆ ಉಳಿವಿಗೆ ನಡೆಯುತ್ತಿರುವ ಚುನಾವಣೆ. ಬಿಜೆಪಿಗೆ ಮತ ಹಾಕುವ ಮೂಲಕ ದಲಿತರಿಗೆ ಅನ್ಯಾಯ ಮಾಡಿದ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.

ಮಾಜಿ ಶಾಸಕ ಡಿ.ಎಸ್‌. ವೀರಯ್ಯ, ಆರ್ . ರುದ್ರಯ್ಯ, ಎಸ್ಸಿಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ, ಬಸವರಾಜ ಅಮ್ಮಿನಬಾವಿ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ದತ್ತಮೂರ್ತಿ ಕುಲಕರ್ಣಿ, ಚಂದ್ರಶೇಖರ ಗೋಕಾಕ, ಡಾ. ಕ್ರಾಂತಿಕಿರಣ ಸೇರಿದಂತೆ ಹಲವರಿದ್ದರು.