ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯನ್ನು ಭಾರತದ ಅಲ್ಪಸಂಖ್ಯಾತ ಸಂಘಟನೆಗಳು ಸಹ ಖಂಡಿಸಿವೆ. ಆದರೆ, ಕಾಂಗ್ರೆಸ್ ಮನಸ್ಥಿತಿಗೆ ಏನಾಗಿದೆ? ಕಾಂಗ್ರೆಸ್ ಸರ್ಕಾರ ನಾಚಿಕೆಗೇಡಿತನದ ಹೇಳಿಕೆ ಕೊಡುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉಗ್ರರು ಹಿಂದೂಗಳನ್ನು ಕೇಳಿ ಕೇಳಿ ಹತ್ಯೆಗೈದಿದ್ದಾರೆ. ಹೀಗಾಗಿ ಅಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಹಿಂದು ಪ್ರಜೆಗಳ ನರಮೇಧ ಆಗಿದೆ. ಆದರೆ, ಕಾಂಗ್ರೆಸ್ ಸರ್ಕಾರ ಹಾಗೂ ಸಿಎಂ ಸಿದ್ಧರಾಮಯ್ಯನವರು ಪಾಕಿಸ್ತಾನದ ಮೇಲೆಯೇ ಸಿಂಪತಿ ತೋರುತ್ತಾರೆ. ಅವರ ವಿರುದ್ಧ ಯುದ್ಧ ಬೇಡ ಎನ್ನುತ್ತಾರೆ. ಇವರು ಕೇವಲ ಓಟ್ ಬ್ಯಾಂಕ್‌ಗಾಗಿ ಅಲ್ಪಸಂಖ್ಯಾತರನ್ನು ಓಲೈಸಲು ಹೀಗೆಲ್ಲ ಮಾತನಾಡುತ್ತಾರೆ. ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಸರ್ಕಾರದ ಜೊತೆಗಿದ್ದೇವೆ ಎಂದು ಹೇಳುತ್ತಿರುವಾಗ, ಸಿಎಂ ಸಿದ್ಧರಾಮಯ್ಯನವರು ಯುದ್ಧ ಬೇಡ ಎಂದು ಹೇಳುವುದು ನೋಡಿದರೆ ದೇಶದ ಭದ್ರತೆಯ ಬಗ್ಗೆ ಇವರಿಗೆ ಕಾಳಜಿ ಇಲ್ಲ. ಇವರ ಪರಿಸ್ಥಿತಿ ಹೀಗೆ ಮುಂದುವರೆದರೆ ಇವರಿಗೆ ಯಾರೂ ಮತ ಹಾಕೋದಿಲ್ಲ. ನೌಕರರು, ಕಾರ್ಮಿಕರು ಓಟ್ ಹಾಕೋದಿಲ್ಲ. ಬಿಲ್ ಪಾವತಿಸದ ಕಾರಣ ಗುತ್ತಿಗೆದಾರರು ಹಾಗೂ ವಿದ್ಯುತ್ ಸಂಪರ್ಕ ಕೊಡುವಲ್ಲಿ ಅನ್ನದಾತರಿಗೆ ಅನ್ಯಾಯ ಎಸಗಿದ ಕಾರಣ ರೈತರು ಮತ ಹಾಕೋದಿಲ್ಲ. ಅನುದಾನವನ್ನೇ ನುಂಗಿದ್ದರಿಂದ ಎಸ್ಸಿ, ಎಸ್ಟಿ ಜನರೂ ಇವರಿಗೆ ಮತ ಹಾಕೋದಿಲ್ಲ ಎಂದರು.
ಇನ್ನೊಂದೆಡೆ ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆಯೇ ಹಿರಿಯ ಪೊಲೀಸ್ ಅಧಿಕಾರಿಯ ಮೇಲೆ ಕೈಎತ್ತುತ್ತಾರೆ ಎಂದರೆ, ಇನ್ನು ಜನಸಾಮಾನ್ಯರು ಪೊಲೀಸರ ಜೊತೆ ಹೇಗೆ ವರ್ತಿಸಬೇಕು? ಎಂದು ಪ್ರಶ್ನಿಸಿದರು.ಪಾಕಿಸ್ತಾನಿಗಳನ್ನು ಹೊರಹಾಕಿ:
ಕಾಶ್ಮೀರ ಘಟನೆ ಬಳಿಕ ಭಾರತದಲ್ಲಿರುವ ಪಾಕಿಸ್ತಾನಿ ಪ್ರಜೆಗಳನ್ನು ಹೊರಹಾಕುವಂತೆ ಭಾರತ ಸರ್ಕಾರ ನಿರ್ಣಯ ಕೈಗೊಂಡಿದೆ. ಪಾಕಿಸ್ತಾನಿಗಳೆಲ್ಲ ದೇಶ ಬಿಟ್ಟು ಹೋಗಬೇಕು ಎಂದು ನಿರ್ಣಯ ಮಾಡಲಾಗಿದ್ದು, ಎಲ್ಲ ರಾಜ್ಯ ಸರ್ಕಾರಗಳು ಪಾಕಿಸ್ತಾನಿ ಪ್ರಜೆಗಳನ್ನು ಹೊರಹಾಕಲು ಕ್ರಮ ಕೈಗೊಳ್ಳಬೇಕು ಎಂದರು. ಅಲ್ಲದೆ, ನಾವು ಸಹ ಮೇ 5ರಂದು ಬೆಳಗ್ಗೆ ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲೆಯಲ್ಲಿ ಯಾರಾದರೂ ಇದ್ದರೆ ಅವರನ್ನು ಹೊರಹಾಕಬೇಕು. ಹಾಗೂ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿರುವ ಪಾಕಿಸ್ತಾನಿಗಳನ್ನು ಹೊರಹಾಕುವಂತೆ ಮನವಿ ಸಲ್ಲಿಸಲಿದ್ದೇವೆ ಎಂದರು.ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಮಾತನಾಡಿ, ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಫಲಿತಾಂಶದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಈ ಸರ್ಕಾರದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ಇಲ್ಲ. ಇವರು ಶಿಕ್ಷಣ ಇಲಾಖೆಯಲ್ಲಿನ ಖಾಲಿ ಹುದ್ದೆಗಳ ಭರ್ತಿ ಮಾಡಿಲ್ಲ. ಶಾಲೆಗಳಿಗೆ ಸೂಕ್ತ ಮೂಲಭೂತ ಸೌಕರ್ಯ ಒದಗಿಸಿಲ್ಲ. ಜಿಲ್ಲೆಯಲ್ಲಿ ಖಾಯಂ ಡಿಡಿಪಿಐ ಹುದ್ದೆ ಭರ್ತಿ ಮಾಡಿಲ್ಲ. ಹೀಗಾಗಿ ಶಿಕ್ಷಣದ ಮೌಲ್ಯ ಕುಸಿತವಾಗಿದೆ ಎಂದರು.
ಅಲ್ಲದೇ, ಎಂದು ಟೀಕಿಸಿದರು.ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಉಮೇಶ ಕಾರಜೋಳ, ಮಳುಗೌಡ ಪಾಟೀಲ, ಚಂದ್ರಶೇಖರ ಕವಟಗಿ, ಈರಣ್ಣ ರಾವೂರ, ವಿಜಯ ಜೋಶಿ ಉಪಸ್ಥಿತರಿದ್ದರು.----ಕೋಟ್
ಕಾಂಗ್ರೆಸ್ ಸರ್ಕಾರದಲ್ಲಿ ಬಿಇಒ ಹಾಗೂ ಡಿಡಿಪಿಐ ಹುದ್ದೆಗಳ ವರ್ಗಾವಣೆ ಮಾಡಲು ಹಣ ನಿಗದಿ ಮಾಡಲಾಗಿದೆ. ಹಾಗಾಗಿ ಇವರು ಕೇಳಿದಷ್ಟು ಹಣ ಕೊಟ್ಟು ಅಧಿಕಾರಿಗಳು ಬರುತ್ತಿಲ್ಲ. ರಾಜ್ಯದಲ್ಲಿ ಸಿಎಂ-ಡಿಸಿಎಂ ಕಚ್ಚಾಟ, ಜಿಲ್ಲೆಯಲ್ಲಿ ಕಾಂಗ್ರೆಸ್ ನಲ್ಲಿನ ಒಳ ಕಚ್ಚಾಟಗಳ ಪರಿಣಾಮ ಶಿಕ್ಷಣದ ಮೇಲೆ ಆಗಿದೆ. ಹೀಗಾಗಿ ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆ ಅನಾಥವಾಗಿದೆ. ಈ ವಿಚಾರವಾಗಿ ನಾನು ಶಿಕ್ಷಣ ಸಚಿವರು ಹಾಗೂ ಸಿಎಂ ಅವರ ಬಳಿಗೆ ಹೋಗಿ ಬಂದಿದ್ದೇನೆ, ಆದರೆ ಏನೂ ಪ್ರಯೋಜನವಾಗಿಲ್ಲ. ಇಡೀ ಶಿಕ್ಷಣ ಇಲಾಖೆಗೆ ಕಾಯಕಲ್ಪ ಕೊಡುವ ಅವಶ್ಯಕತೆ ಇದೆ. ಸುಮಾರು 80 ಸಾವಿರ ಹುದ್ದೆಗಳು ಖಾಲಿ ಇದ್ದು, ಭರ್ತಿ ಮಾಡಿಕೊಳ್ಳುತ್ತಿಲ್ಲ.ಅರುಣ ಶಹಾಪುರ, ವಿ.ಪರಿಷತ್ ಮಾಜಿ ಸದಸ್ಯ