ಉತ್ತಮ ಆಡಳಿತ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯ ಕಾರ್ಯವೈಖರಿ ಸಹಿಸದೇ ಕಾಂಗ್ರೆಸ್ ಪಕ್ಷ ವಿರೋಧಿಸುತ್ತಿದೆ
ಹರಪನಹಳ್ಳಿ: ಉತ್ತಮ ಆಡಳಿತ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯ ಕಾರ್ಯವೈಖರಿ ಸಹಿಸದೇ ಕಾಂಗ್ರೆಸ್ ಪಕ್ಷ ವಿರೋಧಿಸುತ್ತಿದೆ ಎಂದು ಬಿಜೆಪಿ ಮುಖಂಡ ಜಿ.ನಂಜನಗೌಡ ಆರೋಪಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ದೇಶದ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ನಿಲುವಿನಿಂದ ಭಾರತದ ಅಭಿವೃದ್ಧಿಯ ಸಾವಲಂಬನೆಯನ್ನು ನೋಡಿ ಕಾಂಗ್ರೆಸ್ ಗೆ ಸಹಿಸಲಾರದಾಗಿದೆ ಎಂದು ಹೇಳಿದರು.ಹೊಟ್ಟೆ ಉರಿಯಿಂದ ಕಾಂಗ್ರೆಸ್ ಸರ್ಕಾರ ಮೋದಿ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿರುವುದು ಕಾಂಗ್ರೆಸ್ಸಿಗರ ನಾಚಿಕೆಗೇಡಿನ ಸಂಗತಿ. ದೇಶ ಇನ್ನೆಂದೂ ಕಂಡರಿಯದ ಅಭಿವೃದ್ಧಿ ಸಾಧಿಸುತ್ತದೆ. ರಾಹುಲ್ ಗಾಂಧಿಯವರ ಬಾಲಿಶ ಹೇಳಿಕೆಗಳಿಂದ ಕಲಾಪದ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆಯೇ ವಿನಃ ದೇಶದ ಮೇಲೆ ಕಿಂಚಿತ್ತೂ ಕಾಳಜಿ ಇಲ್ಲ. ಇಂಥವರು ನಮ್ಮ ದೇಶವನ್ನಾಳಿದರೆ ಪರಿಸ್ಥಿತಿ ಊಹೆ ಮಾಡಲಿಕ್ಕೆ ಸಾಧ್ಯವಾಗದು. ನರೇಗಾ ವ್ಯವಸ್ಥೆಯನ್ನು ಬದಲಾವಣೆ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಎಂದರು.ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅರಸೀಕೆರೆ ವೈ.ಡಿ. ಅಣ್ಣಪ್ಪ ಮಾತನಾಡಿ, ಕಾಂಗ್ರೆಸ್ ಕಳ್ಳಾಟ ಮತ್ತು ದುರಾಡಳಿತಗಳನ್ನು ಪ್ರಶ್ನೆ ಮಾಡಲು ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಗ್ರಾಮ ಮಟ್ಟದಲ್ಲಿ ಸಂಘಟನೆ ಸದೃಢಗೊಳಿಸಲು ರಾಜ್ಯ ಕಾಂಗ್ರೆಸ್‌ನ ದುರಾಡಳಿತವನ್ನು ಮನವರಿಕೆ ಮಾಡಲು ಪ್ರತಿ ಗ್ರಾಮಗಳಿಗೆ ಭೇಟಿಯಾಗಲು ಫೆ.20ರಂದು ಬೆಳಿಗ್ಗೆ 11 ಗಂಟೆಗೆ ನಗರದ ತರಳಬಾಳು ಕಲ್ಯಾಣ ಮಂಟಪದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಅಂದಿನ ಸಭೆಗೆ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್, ವೈ.ದೇವೇಂದ್ರಪ್ಪ, ಹಡಗಲಿ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಜಗಳೂರು ಮಾಜಿ ಶಾಸಕ ಎಸ್.ವಿ. ರಾಮಚಂದ್ರ, ಎಚ್.ಪಿ. ರಾಜೇಶ್, ಜಿಲ್ಲಾಧ್ಯಕ್ಷ ಸಂಜೀವ್ ರೆಡ್ಡಿ ಭಾಗವಹಿಸಲಿದ್ದಾರೆ ಎಂದರು.ಮುಖಂಡರಾದ ಕಂಚಿಕೇರಿ ಕೆಂಚಪ್ಪ, ರಮೇಶ್, ಸಣ್ಣ ಹಾಲಪ್ಪ, ಮುತ್ತಿಗಿ ವಾಗೀಶ್, ಕಣವಿಹಳ್ಳಿ ಮಂಜುನಾಥ್, ಸತ್ತೂರ್ ಹಾಲೇಶ್, ಓಂಕಾರ ಗೌಡ, ವಕೀಲ ಪ್ರಾಣೇಶ್, ಲಿಂಗಾನಂದ್, ಬೂದಿ ನವೀನ್ ಇದ್ದರು.