ಕನ್ನಡಪ್ರಭ ವಾರ್ತೆ ಮಡಿಕೇರಿ

ರಾಜ್ಯದ ಎರಡೂ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂ ಕ್ಷೇತ್ರಗಳು ಕೂಡ ಕಾಂಗ್ರೆಸ್ ನ ಸಾಂಪ್ರದಾಯಿಕ ಕ್ಷೇತ್ರಗಳಾಗಿವೆ. ಹೀಗಾಗಿ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವು ಖಚಿತ. ದಾವಣಗೆರೆ ಕ್ಷೇತ್ರದಲ್ಲಿ ಶಿವಶಂಕರಪ್ಪ ಅವರು ನಮ್ಮ ದೊಡ್ಡ ನಾಯಕರಾಗಿದ್ದವರು. ಅವರ ಮೊಮ್ಮಗನಿಗೆ ಟಿಕೆಟ್ ಕೊಡಲಾಗಿದೆ.

ಮೇಟಿ ನಿಧನರಾದುದರಿಂದ ಅವರ ಕುಟುಂಬಸ್ಥರಿಗೆ ಟಿಕೆಟ್ ನೀಡಲಾಗಿದೆ. ಆರಂಭದಲ್ಲಿ ವಿರೋಧ ವ್ಯಕ್ತವಾಯಿತು ನಿಜ. ಮುಸ್ಲಿಂ ಮತದಾರರು ಹೆಚ್ಚಿದ್ದಾರೆ ಎಂದು ಟಿಕೆಟ್ ಕೇಳಿದ್ದರು. ಈಗ ಎಲ್ಲವೂ ಸರಿ ಹೋಗಿದೆ. ಹೀಗಾಗಿ ನಮ್ಮ ಪಕ್ಷದ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೇರಳದಲ್ಲಿ ಕಾಂಗ್ರೆಸ್‌ಗೆ ಅಧಿಕಾರ:


ಕೇರಳ ವಿಧಾನಸಭೆ ಚುನಾವಣೆಯಲ್ಲಿ ಈ ಭಾರಿ ಕಾಂಗ್ರೆಸ್ ಅಧಿಕಾರ ಪಡೆಯುವುದು ಖಚಿತ ಎಂದ ಪೊನ್ನಣ್ಣ,

ಎಡಪಕ್ಷಗಳಿಗೆ ಸೋಲಾಗಲಿದೆ. ವಿರಾಜಪೇಟೆ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಕೇರಳದ ಮಾನಂದವಾಡಿ, ಸುಲ್ತಾನ್‌ ಬತ್ತೇರಿ ಸೇರಿ ನಾಲ್ಕು ಕ್ಷೇತ್ರಗಳ ಉಸ್ತುವಾರಿಯಾಗಿದ್ದು, ಇಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದರು.

ಎಲ್ ಪಿಜಿ ಸಮಸ್ಯೆ ಬಗ್ಗೆ ಶಾಸಕ ಪೊನ್ನಣ್ಣ ಅವರು ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಧಾನಿಯವರು ಇಸ್ರೇಲ್ ಗೆ ಹೋಗಲು ನಾವು ಹೇಳಿದ್ವಾ? ಹೋಗಿ ವಿ ಸ್ಟ್ಯಾಂಡ್ ಬೈ ಇಸ್ರೇಲ್ ಎಂದರು.

ಈಗ ಇಸ್ರೇಲ್ ನಿಂದ ಎಲ್ ಪಿಜಿ ಮತ್ತು ಪೆಟ್ರೋಲ್ ತೆಗೆದುಕೊಂಡು ಬರಲಿ. ಜನರು ವಾಸ್ತವವನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ನಾವು ಸಾಂಪ್ರದಾಯಿಕವಾಗಿ ಇರಾನ್ ಸ್ನೇಹಿತರು. ಸ್ಟ್ರೈಟ್ ಆಫ್ ಹೊರ್ಮುಜ್ ಮುಖಾಂತರ ನಮಗೆ ಎಲ್ಲ ತೈಲೋತ್ಪನ್ನಗಳು ಬರುತ್ತಿದ್ದವು. ಅಂತಾರಾಷ್ಟ್ರೀಯ ವ್ಯವಹಾರಗಳು ಹೇಗಿರಬೇಕು ಎನ್ನುವುದು ಗೊತ್ತಿರಬೇಕು. ದೇಶದಲ್ಲಿ ಡಾಲರ್ ರೇಟ್ 64 ಇದ್ದಾಗ ಆರ್ಥಿಕತೆ ಮಲಗಿದೆ ಎನ್ನುತ್ತಿದ್ದರು. ಈಗ ಡಾಲರ್ ರೇಟ್ 95 ಆಗಿದೆ. ಈಗ ಆರ್ಥಿಕತೆ ಓಡಾಡುತ್ತಿದೆಯಾ ಎಂದು ಪ್ರಶ್ನಿಸಿದರು.

ರಷ್ಯಾ ಜೊತೆಗಿನ ಸ್ನೇಹ ಅತ್ಯಂತ ಹಳೆಯದು. ಇವತ್ತು ಅಮೆರಿಕ ಹೇಳಿದರೆ ಮಾತ್ರ ತೈಲ ಖರೀದಿ ಮಾಡುತ್ತೇವೆ ಎನ್ನುತ್ತಾರೆ. ದೇಶದ ಸ್ಥಿತಿ ಎಲ್ಲಿಗೆ ಬಂದು ನಿಂತಿದೆ. ಇಂಡೋ ಪಾಕಿಸ್ತಾನ ಚೈನಾ ವಾರ್ ಆದಾಗ ಮುಕ್ತವಾಗಿ ಚರ್ಚೆ ಆಗುತ್ತಿದ್ದವು. ಪಾರ್ಲಿಮೆಂಟಿನಲ್ಲಿ ಮುಕ್ತ ಚರ್ಚೆ ಆಗುತ್ತಿದ್ದವು. ಆದರೆ ಈಗ ನಿರಂಕುಶತ್ವದ ರೀತಿ ಆಗಿದೆ ಎಂದು ಪೊನ್ನಣ್ಣ ಅಸಮಾಧಾನ ವ್ಯಕ್ತಪಡಿಸಿದರು.