ಕಾಂಗ್ರೆಸ್‌ ಬಡವರ ಪಾಲಿನ ಆಶಾಕಿರಣ: ಆರ್‌.ವಿ. ದೇಶಪಾಂಡೆ

| Published : Apr 24 2024, 02:27 AM IST

ಕಾಂಗ್ರೆಸ್‌ ಬಡವರ ಪಾಲಿನ ಆಶಾಕಿರಣ: ಆರ್‌.ವಿ. ದೇಶಪಾಂಡೆ
Share this Article
  • FB
  • TW
  • Linkdin
  • Email

ಸಾರಾಂಶ

ನುಡಿದಂತೆ ನಡೆದಿದ್ದೇವೆ ಎಂಬುದಕ್ಕೆ ೫ ಗ್ಯಾರಂಟಿಗಳೇ ಸಾಕ್ಷಿಯಾಗಿವೆ ಎಂದು ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.

ಯಲ್ಲಾಪುರ: ಬಡವರ ಪಾಲಿನ ಆಶಾಕಿರಣವೆಂದರೆ ಅದು ಕಾಂಗ್ರೆಸ್ ಪಕ್ಷ ಮಾತ್ರವಾಗಿದ್ದು, ದೇಶದ ಕಟ್ಟಕಡೆಯ ವ್ಯಕ್ತಿಯವರೆಗೂ ಕಷ್ಟ- ಸುಖ ಮತ್ತು ಮೂಲ ಸೌಕರ್ಯಗಳಿಗೆ ಸ್ಪಂದಿಸುವ ಪಕ್ಷವಾಗಿದೆ ಎಂದು ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.

ಮಂಗಳವಾರ ತಾಲೂಕಿನ ಇಡಗುಂದಿಯಲ್ಲಿ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ನುಡಿದಂತೆ ನಡೆದಿದ್ದೇವೆ ಎಂಬುದಕ್ಕೆ ೫ ಗ್ಯಾರಂಟಿಗಳೇ ಸಾಕ್ಷಿಯಾಗಿವೆ. ರಾಷ್ಟ್ರದ ಅಭಿವೃದ್ಧಿಗೆ ಮತ್ತು ಬಡಜನರ ಉದ್ಧಾರಕ್ಕಾಗಿ ಇವೆಲ್ಲವನ್ನೂ ಮೀರಿ ಉತ್ತರಕನ್ನಡದ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಲೋಕಸಭೆಯಲ್ಲಿ ಧ್ವನಿ ಎತ್ತಲು ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್‌ ಅವರನ್ನು ಪ್ರಚಂಡ ಬಹುಮತದಿಂದ ಚುನಾಯಿಸಬೇಕೆಂದು ವಿನಂತಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಸುಳ್ಳುಗಳ ಸರಮಾಲೆಯಿಂದಲೇ ಜನರಿಗೆ ಮಂಕುಬೂದಿ ಎರಚುತ್ತಿರುವ ಬಿಜೆಪಿಗೆ ಮತ ಕೇಳುವ ನೈತಿಕತೆ ಉಳಿದಿಲ್ಲ. ಕಾಂಗ್ರೆಸ್ ನಂಬಿ ರಾಜ್ಯದಲ್ಲಿ ಜನರೆಲ್ಲರ ಆಶೀರ್ವಾದದಿಂದ ಪಕ್ಷ ಅಧಿಕಾರಕ್ಕೆ ಬರುತ್ತಲೇ ಆಶೀರ್ವದಿಸಿದ ಜನರ ಕಷ್ಟ- ಸುಖಗಳಿಗೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದರ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ.

ಯುವ ನಾಯಕ ವಿವೇಕ ಹೆಬ್ಬಾರ ಮಾತನಾಡಿ, ಜನರ ಆಶೋತ್ತರಗಳಿಗೆ ಸ್ಪಂದಿಸಿ, ಕೊಟ್ಟ ಭರವಸೆಯನ್ನು ಈಡೇರಿಸಿ, ವಿಶ್ವಾಸಕ್ಕೆ ಪಾತ್ರವಾಗಿರುವ ಕಾಂಗ್ರೆಸ್ ಪಕ್ಷ ದೇಶದ ಚುಕ್ಕಾಣಿ ಹಿಡಿಯಲು ಪ್ರತಿಯೊಬ್ಬರೂ ಹಸ್ತದ ಗುರುತಿಗೆ ತಮ್ಮ ಮತ ನೀಡಬೇಕಿದೆ ಎಂದರು.

ಇದಕ್ಕೂ ಮುನ್ನ ಉತ್ತರಕನ್ನಡ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್‌ ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿನಾಥ ಗಾಂವ್ಕರ, ಮಾಜಿ ಸಚಿವ ವಿ.ಎಸ್. ಪಾಟೀಲ, ಯುವ ನಾಯಕ ವಿವೇಕ ಹೆಬ್ಬಾರ, ಪ್ರಮುಖರಾದ ಶ್ರೀನಿವಾಸ ಭಟ್ಟ ಧಾತ್ರಿ, ಉಲ್ಲಾಸ ಶಾನಭಾಗ, ಶ್ರೀಕಾಂತ ಶೆಟ್ಟಿ, ಜಿಲ್ಲಾ ಮಹಿಳಾ ಘಟಕದ ಪ್ರಮುಖಿ ಸುಜಾತಾ ಗಾಂವ್ಕರ, ತಾಲೂಕು ಬಿಸಿಸಿ ಅಧ್ಯಕ್ಷ ಎನ್.ಕೆ. ಭಟ್ಟ ಮೆಣಸುಪಾಲ, ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಡಿ.ಎನ್. ಗಾಂವ್ಕರ, ಯುತ್ ಕಾಂಗ್ರೆಸ್ ತಾಲೂಕು ಉಪಾಧ್ಯಕ್ಷ ಶಂಕರ ಹೆಗಡೆ ವಜ್ರಳ್ಳಿ, ಪೂಜಾ ನೇತ್ರೇಕರ, ಆಯೆಷಾ ಗೊಜನೂರು, ಸರಸ್ವತಿ ಗುನಗಾ, ಮುಶ್ರತ್ ಶೇಖ್ ಮತ್ತು ಪಕ್ಷದ ಹಿರಿಯ ಮುಖಂಡರು ವಿವಿಧ ಘಟಕಗಳ ಪ್ರಮುಖರು, ಜನಪ್ರತಿನಿಧಿಗಳು ಗುಳ್ಳಾಪುರ ಮತ್ತು ಇಡಗುಂದಿಗಳಲ್ಲಿ ಪ್ರಚಾರ ಸಭೆ ನಡೆಸಿದರು.ಪೂಜೆ ಸಲ್ಲಿಕೆ...

ಪ್ರಚಾರ ಸಭೆಯ ನಡುವೆ ಅರಬೈಲ್‌ನಲ್ಲಿ ಗುಳ್ಳಾಪುರದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನವಚೇತನ ಟ್ರಸ್ಟ್ ಸಂಘಟಿಸಿದ್ದ ಹನುಮ ಜಯಂತಿ ಉತ್ಸವಕ್ಕೆ ಭೇಟಿ ನೀಡಿದ ಕಾಂಗ್ರೆಸ್‌ನ ಹಿರಿಯ- ಕಿರಿಯ ಮುಖಂಡರು ಪೂಜೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು.