ಸಾರಾಂಶ
ಕನ್ನಡಪ್ರಭ ವಾರ್ತೆ ಬಳ್ಳಾರಿ
ಮೇಯರ್ ಚುನಾವಣೆ ವಿಷಯದಲ್ಲಿ ಕಾಂಗ್ರೆಸ್ಸಿಗರು ಮಾಡುತ್ತಿರುವ ಗೊಂದಲದಿಂದಾಗಿ ಬಳ್ಳಾರಿ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದ್ದು ಜನಸಾಮಾನ್ಯರು ಸಂಕಷ್ಟ ಎದುರಿಸುವಂತಾಗಿದೆ ಎಂದು ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರು ಬೇಸರ ವ್ಯಕ್ತಪಡಿಸಿದರು.ನಗರದಲ್ಲಿ ಶನಿವಾರ ಪಾಲಿಕೆ ಬಿಜೆಪಿ ಸದಸ್ಯರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಲಿಕೆಯ ವಿಪಕ್ಷ ನಾಯಕ ಇಬ್ರಾಹಿಂಬಾಬು, ಕಾಂಗ್ರೆಸ್ ಆಡಳಿತದಲ್ಲಿ ಸಾರ್ವಜನಿಕರು ಪರಿತಪಿಸುವಂತಾಗಿದೆ. ಮೇಯರ್ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ವಿನಾಕಾರಣ ಜನರಲ್ಲಿ ಗೊಂದಲ ಮೂಡಿಸಿದೆ. ಇದರಿಂದ ನಗರದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ದೂರಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದೂ ಮೇಯರ್ ಚುನಾವಣೆಗೆ ಗೊಂದಲ ಸೃಷ್ಟಿಸಲಾಗಿದೆ. ಕಳೆದ ವರ್ಷ ನಡೆದ ಮೇಯರ್ ಚುನಾವಣೆಯಲ್ಲಿ ಮುಲ್ಲಂಗಿ ನಂದೀಶ್ ಆಯ್ಕೆಯಾಗಿದ್ದು, ಈಗ ಅವರ ಅವಧಿ ಪೂರ್ಣಗೊಂಡಿದೆ. ಮೇಯರ್ ಸ್ಥಾನಕ್ಕೆ ಸಾಮಾನ್ಯ ಮೀಸಲು ಬಂದಿದ್ದು, ಇದರ ವಿರುದ್ಧ ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರೊಬ್ಬರು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಮುಸ್ಲಿಂ ಅಭ್ಯರ್ಥಿಯನ್ನು ಮೇಯರ್ ಮಾಡಲು ನ್ಯಾಯಾಲಯದ ಮೊರೆ ಹೋಗಲಾಗಿದೆ ಎಂದು ಕಾಂಗ್ರೆಸ್ಸಿಗರು ಬಿಂಬಿಸುತ್ತಿದ್ದಾರೆ. ಇವರಿಗೆ ನಿಜವಾಗಿಯೂ ಮುಸ್ಲಿಂ ಸಮಾಜದವರನ್ನು ಮೇಯರ್ ಮಾಡುವ ಉದ್ದೇಶವಿದ್ದರೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಮೇಯರ್ ಸ್ಥಾನಕ್ಕೆ ಮುಸ್ಲಿಂ ಅಭ್ಯರ್ಥಿಯನ್ನು ನೇಮಕ ಮಾಡಬಹುದಿತ್ತು. ಆದರೆ, ಕಾಂಗ್ರೆಸ್‌ನವರಿಗೆ ಮುಸ್ಲಿಂ ಅಭ್ಯರ್ಥಿಯನ್ನು ಮೇಯರ್ ಮಾಡುವ ಯಾವ ಉದ್ದೇಶವಿಲ್ಲ. ಜನರಲ್ಲಿ ಗೊಂದಲ ಮೂಡಿಸಲು ಈ ರೀತಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.ಮೇಯರ್ ಸ್ಥಾನಕ್ಕೆ ಮುಸ್ಲಿಂ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆಂಬ ಕಾಂಗ್ರೆಸ್‌ನ ಹುಸಿ ಪ್ರೀತಿ ಎಲ್ಲರಿಗೂ ಅರ್ಥವಾಗುತ್ತದೆ. ಇವರಿಗೆ ನಿಜಕ್ಕೂ ದಲಿತ, ಹಿಂದುಳಿದ, ದಲಿತಪರ ಕಾಳಜಿಯಿದ್ದರೆ ಸದ್ಯ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಮೇಯರ್ ಸ್ಥಾನವನ್ನು ಮುಸ್ಲಿಂರಿಗೆ ನೀಡಲಿ ಎಂದು ಇಬ್ರಾಹಿಂ ಬಾಬು ಆಗ್ರಹಿಸಿದರು.
ಬಳ್ಳಾರಿ ನಗರ ಅಭಿವೃದ್ಧಿ ವಿಚಾರದಲ್ಲಿ ತೀರಾ ಹಿಂದೆ ಬಿದ್ದಿದೆ. ಕುಡಿವನೀರು, ವಿದ್ಯುತ್ ಸೇರಿದಂತೆ ಕನಿಷ್ಠ ಮೂಲ ಸೌಕರ್ಯಗಳಿಗೂ ಜನರು ಪರದಾಡವಂತಾಗಿದೆ. ಮಹಾನಗರ ಪಾಲಿಕೆಯ ಆಡಳಿತ ಸಂಪೂರ್ಣ ಹಾದಿ ತಪ್ಪಿದೆ. ಪಾಲಿಕೆ ಆಡಳಿತದ ನಿಯಂತ್ರಣವಿಲ್ಲದಂತಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ಅಭಿವೃದ್ಧಿ ಕಾಮಗಾರಿಗಳನ್ನು ನಗರದಲ್ಲಿ ಕೈಗೆತ್ತಿಕೊಳ್ಳಲಾಗಿದೆ ಹೊರತು ಹೊಸದಾಗಿ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ಪಾಲಿಕೆಯ ಬಿಜೆಪಿ ಸದಸ್ಯರಿಗೆ ಅನುದಾನ ನೀಡದೆ ತಾರತಮ್ಯ ಮಾಡಲಾಗುತ್ತಿದೆ. ಪಾಲಿಕೆ ದುರಾಡಳಿತ ವಿರುದ್ಧ ಹೋರಾಟ ನಡೆಸಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು. ಪಾಲಿಕೆ ಬಿಜೆಪಿ ಸದಸ್ಯರಾದ ಶ್ರೀನಿವಾಸ್ ಮೋತ್ಕರ್, ಕೆ.ಎಸ್. ಅಶೋಕ್ ಕುಮಾರ್, ಗೋವಿಂದರಾಜುಲು, ಹನುಮಂತ ಗುಡಿಗಂಟಿ, ಹನುಮಂತಪ್ಪ, ಸುರೇಖಾ ಮಲ್ಲನಗೌಡ, ಕಲ್ಪನಾ ಹಾಗೂ ಕೆ. ಈರಮ್ಮ ಸುದ್ದಿಗೋಷ್ಠಿಯಲ್ಲಿದ್ದರು.ನಿಯಂತ್ರಣವಿಲ್ಲ:ಬಳ್ಳಾರಿಯಲ್ಲಿ ಮಟ್ಕಾ, ಜೂಜಾಟ, ಗಾಂಜಾ ಹಾವಳಿ ಹೆಚ್ಚಾಗುತ್ತಿದ್ದು, ಯುವ ಸಮುದಾಯ ಹಾದಿ ತಪ್ಪುತ್ತಿದೆ. ಆದರೆ, ಇದರ ನಿಯಂತ್ರಣವಿಲ್ಲದಂತಾಗಿದೆ. ಬಳ್ಳಾರಿಯಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಹಾದಿ ತಪ್ಪಿದೆ ಎಂದು ಬಿಜೆಪಿ ಪಾಲಿಕೆ ಸದಸ್ಯರು ದೂರಿದರು. ಹಗಲು ರಾತ್ರಿ ಎನ್ನದೆ ಮಟ್ಕಾ, ಜೂಜಾಟ ನಡೆಯುತ್ತಿದೆ. ಇಸ್ಪೀಟ್ ಕ್ಲಬ್‌ಗಳು ನಿರಾತಂಕವಾಗಿ ನಡೆದಿವೆ. ಇದರಿಂದ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಗ್ರಾಮೀಣ ಭಾಗದ ಜನರು ಹೊಲೆ ಮನೆ ಮಾರಿಕೊಂಡು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಬಳ್ಳಾರಿ ನಗರ ಸಂಪೂರ್ಣ ಹಾದಿ ತಪ್ಪಿದೆ ಎಂದು ಆಪಾದಿಸಿದರು. ಕಾಂಗ್ರೆಸ್ ನ ಶಾಸಕರು, ಸಂಸದರು ಪಾಲಿಕೆಯತ್ತ ಗಮನ ಹರಿಸಬೇಕು. ಪಾಲಿಕೆ ದುರಾಡಳಿತ ವಿರುದ್ಧ ಹೋರಾಟ ಮಾಡಿದರೂ ದಪ್ಪಚರ್ಮದ ಕಾಂಗ್ರೆಸ್ ಸ್ಪಂದಿಸುತ್ತಿಲ್ಲ ಎಂದು ಟೀಕಿಸಿದರು.