ಸಾರಾಂಶ
ನೇರಲಕೆರೆ ಗ್ರಾಮದಲ್ಲಿ ತರೀಕೆರೆ - ಅಜ್ಜಂಪುರ ಬ್ಲಾಕ್ ಕಾಂಗ್ರೆಸ್ ನಿಂದ ಚುನಾವಣಾ ಪ್ರಚಾರ ಸಭೆ
ಕನ್ನಡಪ್ರಭ ವಾರ್ತೆ, ತರೀಕೆರೆ.ದೇಶಕ್ಕೆ ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ತಂದುಕೊಟ್ಟಿದೆ, ಬಿಜೆಪಿ ಯಾವುದೇ ಹೋರಾಟದಲ್ಲಿ ಭಾಗವಹಿಸಿಲ್ಲ ಎಂದು ಬೃಹತ್ ಮತ್ತು ಮದ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.ಶುಕ್ರವಾರ ಸಮೀಪದ ನೇರಲಕೆರೆ ಗ್ರಾಮದಲ್ಲಿ ತರೀಕೆರೆ ಮತ್ತು ಅಜ್ಜಂಪುರ ಬ್ಲಾಕ್ ಕಾಂಗ್ರೆಸ್ ನಿಂದ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಪರ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದರು.ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟೀಷರ ಜೊತೆಯಲ್ಲಿ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿತ್ತು, ಈ ದೇಶ ಕಟ್ಟಿದ್ದು ಕಾಂಗ್ರೆಸ್. ದೇಶದಲ್ಲಿ 2000 ಅಣೆಕಟ್ಟುಗಳನ್ನುನಿರ್ಮಿಸಿದೆ ಕಾಂಗ್ರೆಸ್. ಬಿಜೆಪಿ ಯವರು ಒಂದು ಡ್ಯಾಂನ್ನು ಕಟ್ಟಿಲ್ಲ. ಹಿಂದೆ ಆಹಾರದ ಕೊರತೆ ಇದ್ದಾಗ ಹಸಿರು ಕ್ರಾಂತಿ ಮಾಡಿದೆ. ಶಿಕ್ಷಣ ಸಂಸ್ಥೆಗಳನ್ನು, ವಿದ್ಯುತ್ ಸ್ಥಾವರಗಳನ್ನು, ಎಚ್ಎಎಲ್, ಬಿಇಎಂಎಲ್ ಕಟ್ಟಿದ್ದು, ಇಸ್ರೋ ಪ್ರಾರಂಭಿಸಿದ್ದು ಕಾಂಗ್ರೆಸ್ ಸರ್ಕಾರದಲ್ಲಿ ಎಂದು ವಿವರಿಸಿದರು.
ಬಿಜೆಪಿಯವರು ಎಲ್ಲವನ್ನು ಮಾರಾಟ ಮಾಡುತ್ತಿದ್ದಾರೆ. ರೈಲ್ವೆಗೂ ಕೈಹಾಕುತ್ತಿದ್ದಾರೆ. ತರೀಕೆರೆ ಕ್ಷೇತ್ರದಲ್ಲಿ 55 ಸಾವಿರ ಎಕರೆ ಪ್ರದೇಶಕ್ಕೆ ನೀರು ಹರಿಸಲು 1000 ಕೋಟಿ ರು.ಈ ಕ್ಷೇತ್ರಕ್ಕೆ ನೀಡಿದ್ದೇನೆ. ಈ ಹಿಂದೆ ಚುನಾವಣೆಯಲ್ಲಿ ನೀಡಿದ್ದ ಭರವಸೆಯಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಅಲ್ಲದೆ ಈಗ ಐದು ಗ್ಯಾರಂಟಿಗಳನ್ನು ಈಡೇರಿಸಿ, ನುಡಿದಂತೆ ನಡೆದಿದ್ದೇವೆ. ಈಗ ಪೆಟ್ರೋಲ್, ಡೀಸಲ್, ಗ್ಯಾಸ್ ದರ, ಪ್ರತಿ ಪದಾರ್ಥಗಳ ದರ ಹೆಚ್ಚಿದೆ. ಬಿಜೆಪಿಯವರು ದೇಶಕ್ಕೆ ಏನೂ ಕೊಡುಗೆ ಕೊಟ್ಟಿಲ್ಲ. ಅಚ್ಚೆದಿನ್ ಬರಲಿಲ್ಲ ಎಂದ ಅವರು, ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರಿಗೆ ಅತ್ಯಂತ ಹೆಚ್ಚಿನ ಮತ ನೀಡಿ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎ.ಆರ್.ರಾಜಶೇಖರ್ ಮಾತನಾಡಿ, ಇದು ಐತಿಹಾಸಿಕ ಚುನಾವಣೆ ಯಾಗಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ಈ ಹಿಂದೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ನಮ್ಮ ತಾಲೂಕಿಗೆ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಜಯಪ್ರಕಾಶ್ ಹೆಗ್ಡೆ ಅವರಿಗೆ ಅತ್ಯಂತ ಹೆಚ್ಚಿನ ಮತ ನೀಡಿ , ಜಯಗಳಿಸುಂತೆ ಮಾಡಿ ಎಂದು ಹೇಳಿದರು
ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಆಂಶುಮಂತ್ ಮಾತನಾಡಿ ನಮ್ಮ ನಿಮ್ಮ ಭವಿಷ್ಯ- ಬದುಕು ಸುಧಾರಿಸುವ ಚುನಾವಣೆ ಇದು. ಕಾಂಗ್ರೆಸ್ ಜನಸಾಮಾನ್ಯರ ಧ್ವನಿಯಾಗಿದೆ. ಪಕ್ಷದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರಿಗೆ ಅತ್ಯಂತ ಹೆಚ್ಚಿನ ಮತ ನೀಡಿ ಅವರನ್ನು ಗೆಲ್ಲಿಸಬೇಕು ಎಂದು ಕೋರಿದರು.ಶಾಸಕ ಜೆ.ಎಚ್.ಶ್ರೀನಿವಾಸ್ ಮಾತನಾಡಿ ಕ್ಷೇತ್ರದಲ್ಲಿ ಸರ್ಕಾರದಿಂದ ಉಚಿತ ಬೋರ್ವೆಲ್ ಗಳನ್ನು ಕೊರೆಸಲಾಗಿದೆ. ಕ್ಷೇತ್ರದಲ್ಲಿ 55 ಸಾವಿರ ಎಕರೆ ಪ್ರದೇಶಗಳಿಗೆ ಡ್ರಿಪ್ ಇರಿಗೇಶನ್ ಮೂಲಕ ನೀರಾವರಿ ಒದಗಿಸಲು 1000 ಕೋಟಿ ರು. ಕೊಟ್ಟಿದ್ದಾರೆ. 200ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಲಾಗುತ್ತದೆ. ಜಂಬದಹಳ್ಳ ಜಲಾಶಯಕ್ಕೆ ನೀರು ಹರಿಸಲಾಗುತ್ತದೆ. ಮುಂದಿನ ವರ್ಷ ಟ್ಯಾಂಕರ್ ಗಳು ಬೇಡ. ಎಲ್ಲ ಕೆರೆಗಳಲ್ಲೂ ನೀರು ತುಂಬಿರುತ್ತದೆ. ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ, ಸಚಿವ ಎಂ.ಬಿ.ಪಾಟೀಲ್ಅವರನ್ನು ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಲಾಗುತ್ತದೆ ಎಂದು ಹೇಳಿದರು.ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಕ್ಷೇತ್ರದ ಜನರ ಹತ್ತಿರ ಇದ್ದಾರೆ. ಶೋಭಾ ಕರಂದ್ಲಾಜೆ ಅವರು ಯಾವ ಗ್ರಾಮ ಪಂಚಾಯಿತಿಗೂ ಬರಲಿಲ್ಲ. ಕ್ಷೇತ್ರ ಮರೆತರು. ಆದರೆ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ, ಈಗ ಪ್ರತಿ ಮಹಿಳೆಗೆ ಲಕ್ಷ ರು. ಯುವಕರಿಗೆ ಸ್ಟೈಫಂಡ್, ಪ್ರತಿ ಕುಟುಂಬಕ್ಕೆ 25 ಲಕ್ಷ ರು. ವಿಮೆ ಮಾಡಿಸಲಾಗುತ್ತದೆ ಎಂದು ಹೇಳಿದರು.ಬಿಜೆಪಿ ಯವರು ಕೇವಲ ಸುಳ್ಳು ಹೇಳುತ್ತಾರೆ. ಎಲ್ಲದಕ್ಕೂ ಖಾಲಿ ಚೆಂಬು ಕೊಟ್ಟಿದ್ದಾರೆ. ಬಿಜೆಪಿಗೆ ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲ, ಅಡಕೆಗೆ ಬಗ್ಗೆ ಪೂಜ್ಯ ಭಾವನೆ ಇದೆ. ಅಡಕೆಗೂ ಗುಟ್ಕಾಕ್ಕೂ ಬಿಜೆಪಿಯವರಿಗೆ ವ್ಯತ್ಯಾಸವೇ ಗೊತ್ತಿಲ್ಲ. ಪಕ್ಷದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರಿಗೆ ಅತ್ಯಂತ ಹೆಚ್ಚಿನ ಮತ ನೀಡಿ ಎಂದರು. ಏ.22 ರಂದು ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ಮತ್ತು ಸಚಿವ ಕೆ.ಜೆ.ಜಾರ್ಜ್ ತರೀಕೆರೆ ಪಟ್ಟಣಕ್ಕೆ ಆಗಮಿಸಲಿದ್ದು, ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದರು.ತರೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಯು.ಫಾರೂಕ್ , ಮುಖಂಡರಾದ ಎಚ್.ಎಂ. ಗೋಪಿಕೃಷ್ಣ, ಕೃಷಿ ಮತ್ತು ರಫ್ತು ನಿಗಮ ಮಂಡಳಿ ರಾಜ್ಯ ಅಧ್ಯಕ್ಷ ಬಿ.ಎಚ್ ಹರೀಶ್, ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಬೆಟ್ಟದಹಳ್ಳಿ ರವಿ, ತರೀಕೆರೆ ತಾಪಂ ಮಾಜಿ ಅಧ್ಯಕ್ಷ ಲಿಂಗದಹಳ್ಳಿ ರವಿ, ಅಜ್ಜಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಯಾನಂದ್, ತರೀಕೆರೆ ಬ್ಲಾಕ್ ಕಾಂಗ್ರೆಸ್ ನಗರಾಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ, ಪುರಸಭೆ ಸದಸ್ಯ ಟಿ.ಜಿ. ಶಶಾಂಕ್, ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್.ಧರ್ಮರಾಜ್, ಬೈಟು ರಮೇಶ್, ಟಿ.ಜಿ. ಮಂಜುನಾಥ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ್, ಹಲಸೂರು ಅರವಿಂದ್, ಅಜ್ಜಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಯಾನಂದ್, ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.20ಕೆಟಿಆರ್.ಕೆ.1ಃ
ತರೀಕೆರೆ ಸಮೀಪದ ನೇರಲಕೆರೆ ಗ್ರಾಮದಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆ ಪಕ್ಷದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಪರವಾಗಿ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆ ಉದ್ಘಾಟನೆಯನ್ನು ಬೃಹತ್ ಮತ್ತು ಮದ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ನೆರವೇರಿಸಿದರು. ಶಾಸಕ ಜಿ.ಎಚ್.ಶ್ರೀನಿವಾಸ್, ಮುಖಂಡರಾದ ಎಚ್.ಎಂ.ಗೋಪಿಕೃಷ್ಣ ಮತ್ತಿತರರು ಇದ್ದಾರೆ.