ಕನ್ನಡಪ್ರಭ ವಾರ್ತೆ ವಿಜಯಪುರ
ರಾಜ್ಯದಲ್ಲಿ ತಮ್ಮದೇ ಸರ್ಕಾರವಿದ್ದರೂ ಅಭಿವೃದ್ಧಿ ಮಾಡುವುದನ್ನು ಬಿಟ್ಟು ಕಾಂಗ್ರೆಸ್ ನಾಯಕರು ಆರ್‌ಎಸ್‌ಎಸ್ ಬಗ್ಗೆ ಹಾಗೂ ಹಿಂದುತ್ವದ ಬಗ್ಗೆ ಮಾತನಾಡಿ ಕಾಲಹರಣ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್ ಸಂಘಟನೆ ದೇಶಕ್ಕಾಗಿ ಹಾಗೂ ದೇಶದ ಜನರಿಗಾಗಿ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಡಬ್ಬಿ ಹೇಳಿದರು.ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಆರ್‌ಎಸ್‌ಎಸ್ ಅನ್ನು ಒಪ್ಪಿಕೊಂಡು ಸದನದಲ್ಲೇ ನಮಸ್ತೆ ಸದಾ ವತ್ಸಲೆ ಎಂದು ಆರ್‌ಎಸ್‌ಎಸ್ ಗೀತೆ ಹಾಡಿದ್ದಾರೆ. ನಾನು ಚಿಕ್ಕವನಿದ್ದಾಗ ಆರ್‌ಎಸ್‌ಎಸ್ ಶಾಖೆಗೆ ಹೋಗುತ್ತಿದ್ದೆ ಎಂದು ಡಿ.ಕೆ.ಶಿವಕುಮಾರ್ ಅವರೇ ಹೇಳಿದ್ದಾರೆ. ಪ್ರವಾಹ, ಕೋವಿಡ್ ಸಮಯದಲ್ಲಿ ಆರ್‌ಎಸ್‌ಎಸ್ ಮುಂದೆ ನಿಂತು ಕೆಲಸ ಮಾಡಿದ್ದು, ಜನರನ್ನು ಬದುಕಿಸಿದೆ. ಈ ಸಂಘಟನೆ ಹುಟ್ಟಿದಾಗಲೇ ಮಹಾತ್ಮ ಗಾಂಧಿಯವರು ಸರಸಂಘ ಸಂಚಾಲಕರ ಜೊತೆಗೆ ಕುಳಿತು ಚರ್ಚಿಸಿದ್ದಾರೆ. ಡಾ.ಅಂಬೇಡ್ಕರ್ ಅವರು ಆರ್‌ಎಸ್‌ಎಸ್ ಸಂಘಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಯಾವುದೇ ಸಂಘಟನೆ ದೇಶದ ಒಳಿತಿಗಾಗಿ ಕೆಲಸ ಮಾಡುತ್ತಿದ್ದರೆ ನೋಂದಣಿ ಮಾಡಲೇಬೇಕು ಎಂಬ ನಿಯಮವಿಲ್ಲ ಎಂದು ಹೇಳಿದರು.
ಮೂರು ವರ್ಷಗಳಿಂದ ಆಡಳಿತ ಮಾಡಿರುವ ಕಾಂಗ್ರೆಸ್ ರೈತರ ಹಾಗೂ ವಿದ್ಯಾರ್ಥಿಗಳ ವಿರೋಧಿ ಸರ್ಕಾರವಾಗಿದೆ. ಗ್ಯಾರಂಟಿ ಕೊಟ್ಟಿದ್ದೇವೆ ಎನ್ನುವ ಇವರಿಗೆ ಆಡಳಿತ ಯಂತ್ರದ ಮೇಲೆ ಹಿಡಿತವಿಲ್ಲ. ಸಮಾಜ ಕಲ್ಯಾಣ ಇಲಾಖೆ ಹಣವನ್ನು ಗ್ಯಾರಂಟಿಗೆ ಬಳಸಿ, ರಾಜ್ಯವನ್ನು 20 ವರ್ಷಗಳವರೆಗೆ ಹಿಂದಕ್ಕೆ ಒಯ್ದಿದ್ದಾರೆ. ಇದೀಗ ಕಾಂಗ್ರೆಸ್ ಶಾಸಕರೆಲ್ಲ ತಾವು ಸಚಿವರಾಗಬೇಕು ಎಂಬುದರಲ್ಲೇ ಕಾಲ ಹಣರ ಮಾಡುತ್ತಿದ್ದಾರೆ ಎಂದರು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ದೇಶದ ಅಭಿವೃದ್ಧಿಗಾಗಿ 12 ವರ್ಷಗಳಿಂದ ಶ್ರಮಿಸುತ್ತಿದೆ. 2040ರ ವೇಳೆಗೆ ವಿಕಸಿತ ಭಾರತಕ್ಕೆ ಯೋಜನೆ ರೂಪಿಸಿದೆ. ದೇಶದಲ್ಲಿ ರಸ್ತೆ, ಮಾರುಕಟ್ಟೆ, ವಿಮಾನ ನಿಲ್ದಾಣ, ರೇಲ್ವೆ ಸೇರಿ ಎಲ್ಲ ವಿಭಾಗದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಹಾಗಾಗಿ ಬಿಜೆಪಿಯ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಾಂಗ್ರೆಸ್ ಗೆ ಇಲ್ಲ ಎಂದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಾಬು ಮಾಶ್ಯಾಳ, ಈರಣ್ಣ ರಾವೂರ, ರಾಜು ಬಿರಾದಾರ, ರಾಜಕುಮಾರ ಸಗಾಯಿ, ಮಂಜುನಾಥ ಮೀಸಿ, ವಿಜಯ ಜೋಶಿ ಇದ್ದರು.