ಕಾಂಗ್ರೆಸ್ ಕುಮ್ಮಕ್ಕಿಂದ ಧರ್ಮಸ್ಥಳ ಬಗ್ಗೆ ಅಪಪ್ರಚಾರ

| Published : Aug 10 2025, 02:18 AM IST

ಕಾಂಗ್ರೆಸ್ ಕುಮ್ಮಕ್ಕಿಂದ ಧರ್ಮಸ್ಥಳ ಬಗ್ಗೆ ಅಪಪ್ರಚಾರ
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮಸ್ಥಳದ ಬಗ್ಗೆ ಮತ್ತು ಅಲ್ಲಿನ ನಂಬಿಕೆಗಳ ಬಗ್ಗೆ ಅಪಪ್ರಚಾರ ಮಾಡುವುದನ್ನು ನಾವು ಖಂಡಿಸುತ್ತೇವೆ. ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದಲೇ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಸಂಸದ ಜಗದೀಶ ಶೆಟ್ಟರ್ ಗಂಭೀರ ಆರೋಪ ಮಾಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಧರ್ಮಸ್ಥಳದ ಬಗ್ಗೆ ಮತ್ತು ಅಲ್ಲಿನ ನಂಬಿಕೆಗಳ ಬಗ್ಗೆ ಅಪಪ್ರಚಾರ ಮಾಡುವುದನ್ನು ನಾವು ಖಂಡಿಸುತ್ತೇವೆ. ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದಲೇ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಸಂಸದ ಜಗದೀಶ ಶೆಟ್ಟರ್ ಗಂಭೀರ ಆರೋಪ ಮಾಡಿದರು.

ಧರ್ಮಸ್ಥಳದಲ್ಲಿ ಎಸ್ಐಟಿ ತನಿಖೆ ವಿಚಾರಕ್ಕೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಥಮಿಕ ಸಾಕ್ಷ್ಯಗಳು ಇಲ್ಲದೇ ಎಸ್ಐಟಿ ರಚನೆ ಮಾಡಿದರು. ಸರಿ ತಪ್ಪು ಎಂಬುದು ತನಿಖೆ ಆಗಲಿ. 13 ಸ್ಥಳಗಳಲ್ಲಿ ಪರೀಕ್ಷೆ ಮಾಡುತ್ತಿದ್ದಾರೆ. ಆದರೆ, ಈವರೆಗೆ ಯಾವುದೇ ಶವಗಳು ಪತ್ತೆ ಆಗಿಲ್ಲ. ಪುರಾವೆಗಳೂ ಸಿಕ್ಕಿಲ್ಲ. ನ್ಯಾಯಯುತವಾಗಿ ತನಿಖೆ ಮಾಡಲಿ. ಆದರೆ, ಹಿಂದೂ ಧರ್ಮ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು. ಎಡಪಂಥಿಯರು, ಕಮ್ಯುನಿಸ್ಟರು ಧರ್ಮಸ್ಥಳದ ಬಗ್ಗೆ ನಿರಂತರವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಇದರಲ್ಲಿ ಸರ್ಕಾರದ ಕುಮ್ಮಕ್ಕು ಇದೆ ಎಂದು ದೂರಿದರು.ರಾಹುಲ್‌ ಅಪ್ರಬುದ್ಧ ನಾಯಕ:

ಅಪ್ರಬುದ್ಧ ನಾಯಕತ್ವಕ್ಕೆ ಮತ್ತೊಂದು ಹೆಸರು ರಾಹುಲ್ ಗಾಂಧಿ. ಸಂಸತ್ತಿನಲ್ಲಿ ನನಗೂ ಹೊಸ ಅನುಭವ. ವಿರೋಧ ಪಕ್ಷವಾಗಿ ಯಾವ ವಿಷಯ ಚರ್ಚಿಸಬೇಕು ಅಂತಾ ಕಾಂಗ್ರೆಸ್‌ಗೆ ಗೊತ್ತಿಲ್ಲ. ಒಂದೆರಡು ವಿಷಯ ಚರ್ಚೆ ಆಗಿದ್ದು ಬಿಟ್ಟರೆ ಕಳೆದ ಒಂದು ವಾರದಿಂದ ಸದನ ಮುಂದೂಡಲಾಗುತ್ತಿದೆ. ಅಧಿವೇಶನ ನಡೆಸಲು ಜನಸಾಮಾನ್ಯರ ಕೋಟ್ಯಂತರ ತೆರಿಗೆ ಹಣ ಖರ್ಚಾಗುತ್ತಿದೆ. ಆದರೆ, ಅದು ವ್ಯರ್ಥವಾಗುತ್ತಿದೆ. ಸಂಸತ್ತಿನಲ್ಲಿ ಚರ್ಚೆ ಮಾಡುವುದನ್ನು ಬಿಟ್ಟು ಬೀದಿಯಲ್ಲಿ ರಾಹುಲ್ ಗಾಂಧಿ ಹೋರಾಟ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಸಮಾವೇಶ ಮಾಡಿ ಮಹದೇವಪುರ ಕ್ಷೇತ್ರದಲ್ಲಿ 1 ಲಕ್ಷ ಮತದಾರರು ನಕಲಿ ಮತದಾರರಿದ್ದಾರೆ ಎಂದು ಆರೋಪಿಸಿದ್ದಾರೆ. ದೆಹಲಿಯಲ್ಲಿ ಒಂದು ಬಂಡಲ್ ಅಷ್ಟು ಪೇಪರ್ ಹಿಡಿದು ಇಷ್ಟೆಲ್ಲಾ ದಾಖಲೆ ಇವೆ ಅಂತಾ ತೋರಿಸಿದ್ದಾರೆ. ದಾಖಲೆ ಇಟ್ಟುಕೊಂಡು ಸುಪ್ರೀಂ ಕೋರ್ಟ್ ಇಲ್ಲವೇ ಚುನಾವಣಾ ಆಯೋಗಕ್ಕೆ ಅವರು ದೂರು ಕೊಡಬೇಕಿತ್ತಲ್ಲವೇ? ಅಲ್ಲಿಗೆ ಹೋದರೆ ನಿಮಗೆ ಜಯ ಸಿಗುವುದಿಲ್ಲ ಎಂಬುದು ಖಾತ್ರಿ ಆಗಿದೆ. ಹಾಗಾಗಿ, ನೀವು ಹೋಗುತ್ತಿಲ್ಲ ಎಂದು ಕಿಡಿಕಾರಿದರು.ಬೆಂಗಳೂರಿನಲ್ಲಿ ಒಂದು ಬಾಂಬ್ ಹಾಕುತ್ತೇನೆ ಅಂತಾ ಹೇಳಿದ್ದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರ ಜೊತೆಗೆ ತೆರಳಿ ಚುನಾವಣಾ ಆಯೋಗಕ್ಕೆ ದಾಖಲೆ ಸಲ್ಲಿಸುತ್ತೇನೆ ಎಂದಿದ್ದರು. ಆ ಪ್ರಕಾರ ಅವರು ಅಲ್ಲಿಗೆ ಹೋದರಾ? ಖರ್ಗೆ ಅವರು ಹೋಗಲಿಲ್ಲ. ಹೋಗಿದ್ದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ. ಹೀಗೆ ಹೋದ ಅವರಿಗೆ ಚುನಾವಣಾ ಆಯೋಗ ದಾಖಲೆ ಕೇಳಿದರೆ ಆಮೇಲೆ ಸಲ್ಲಿಸುತ್ತೇವೆ ಎಂದಿದ್ದಾರೆ ಎಂದು ಆರೋಪಿಸಿದರು.ಮಹದೇವಪುರ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಲೀಡ್ ಬಂದಿತ್ತು ಎನ್ನುವ ಮೂಲಕ ರಾಹುಲ್ ಹಸಿ ಸುಳ್ಳು ಹೇಳುತ್ತಿದ್ದಾರೆ. ಈ ಮೂಲಕ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಇಡೀ ರಾಷ್ಟ್ರದಲ್ಲಿ ಕಾಂಗ್ರೆಸ್ ನಾಯಕರು ಭ್ರಮನಿರಸಗೊಂಡು ಹತಾಸೆಯಿಂದ ಸುಳ್ಳು ಆರೋಪ ಮಾಡುತ್ತಿದ್ದಾರೆ. ಮೋದಿಯವರ ವ್ಯಕ್ತಿತ್ವಕ್ಕೆ ಚ್ಯುತಿ ತರುವ ಕೆಲಸ ಮಾಡುತ್ತಿದ್ದಾರೆ. ಈ ಆರೋಪದಲ್ಲಿ ಒಂದಿಷ್ಟು ಹುರುಳಿಲ್ಲ. ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲೆ ಲಿಖಿತವಾಗಿ ಚುನಾವಣೆ ಆಯೋಗಕ್ಕೆ ದೂರು ನೀಡಬೇಕಿತ್ತು. ಜನರ‌ ಮನಸ್ಸು ಬೇರೆ ಕಡೆ ಸೆಳೆಯಲು ಈ ರೀತಿ ಮಾಡುತ್ತಿದ್ದಾರೆ. ತಾವು ಗೆದ್ದಲ್ಲಿ ಎಲ್ಲವೂ ಸರಿ ಇದೆ ಎನ್ನುತ್ತಾರೆ. ಸೋತರೆ ಇವಿಎಂ ಸರಿ ಇಲ್ಲ ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಅವರು, ಲೋಕಸಭೆ ಚುನಾವಣೆ ವೇಳೆ ರಾಜ್ಯದಲ್ಲಿ ನಿಮ್ಮದೇ ಸರ್ಕಾರ ಇತ್ತು. ಡಿಸಿ, ಅಧಿಕಾರಿಗಳು ನಿಮಗೆ ಮಾಹಿತಿ ನೀಡಲಿಲ್ಲವೇ? ಹಾಗಾಗಿ, ಈ ರೀತಿ ವಾತಾವರಣ ಸೃಷ್ಟಿಸುವುದು ಅಕ್ಷಮ್ಯ ಅಪರಾಧ ಎಂದು ಕಿಡಿಕಾರಿದರು.ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಈ ಹಿಂದೆ ಸ್ಪರ್ಧಿಸಿದಾಗ ಸೋಲುವ ಹಂತದಲ್ಲಿದ್ದರು. ನಾನು ಮತ್ತು ಮಾಜಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಅವರು ಸೇರಿಕೊಂಡು ಸಾಲ ಮಾಡಿ 3 ಸಾವಿರ ಮತಗಳನ್ನು ಖರೀದಿಸಿದ್ದೇವು ಎಂದು ಸಿ.ಎಂ.ಇಬ್ರಾಹಿಂ ಬಹಿರಂಗವಾಗಿ ಆರೋಪಿಸಿದ್ದಾರೆ. ಅಲ್ಲದೇ ಮತ ಎಣಿಕೆ ದಿನ 800-1000 ಮತಗಳ ಅಂತರದಲ್ಲಿ ಸಿದ್ದರಾಮಯ್ಯ ಗೆಲ್ಲುತ್ತಾರೆ ಎಂದಿದ್ದೆ ಆ ಪ್ರಕಾರ ಗೆದ್ದಿದ್ದರು. ಆರು ತಿಂಗಳ ಬಳಿಕ ಸಿದ್ದರಾಮಯ್ಯ ಸಾಲ ತೀರಿಸಿದ್ದರು ಎಂದಿದ್ದಾರೆ. ಇಬ್ರಾಹಿಂ ಆರೋಪಕ್ಕೆ ಸಿದ್ದರಾಮಯ್ಯ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು. ಗೋಷ್ಠಿಯಲ್ಲಿ ಬಿಜೆಪಿ ಗ್ರಾಮೀಣ ಜಿಲ್ಲಧ್ಯಕ್ಷ ಸುಭಾಷ ಪಾಟೀಲ, ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ಮುಖಂಡರಾದ ಹನುಮಂತ ಕೊಂಗಾಲಿ, ರಾಜಶೇಖರ ಡೋಣಿ, ಮಲ್ಲಿಕಾರ್ಜುನ ಮಾದಮ್ಮನವರ, ಸಚಿನ ಕಡಿ ಇದ್ದರು‌.ವಂದೇ ಭಾರತಕ್ಕೆ ಇಂದು ಬೆಂಗಳೂರಲ್ಲಿ ಪ್ರಧಾನಿ ಚಾಲನೆ

ಲೋಕಸಭೆ ಚುನಾವಣೆ ವೇಳೆ ಕೊಟ್ಟ ಮಾತಿನಂತೆ ಬೆಳಗಾವಿ-ಬೆಂಗಳೂರು ವಂದೇ ಭಾರತ್ ರೈಲಿಗೆ ನಾಳೆ ಬೆಂಗಳೂರಿನಲ್ಲಿ ಪ್ರಧಾನಿ ಮೋದಿಯವರು ಚಾಲನೆ ನೀಡುತ್ತಿದ್ದಾರೆ. ಆ.4ರಂದು ಮೋದಿಯವರನ್ನು ಭೇಟಿ ಆಗಿದ್ದೆ, ಅವತ್ತೆ ರಾತ್ರಿ ಅವರು ರೈಲ್ವೆ ಮಂತ್ರಿಗಳಿಗೆ ನಿರ್ದೇಶನ ನೀಡಿದ್ದರು. ಕೇವಲ ಒಂದು ದಿನದಲ್ಲಿ ತ್ವರಿತವಾಗಿ ನಿರ್ಧಾರ ಕೈಗೊಂಡಿದ್ದಾರೆ. ಇದರ ಸಂಪೂರ್ಣ ಶ್ರೇಯಸ್ಸು ಮೋದಿಯವರಿಗೆ ಸಲ್ಲುತ್ತದೆ. ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಅಶ್ವಿನಿ ವೈಷ್ಣವ, ವಿ. ಸೋಮಣ್ಣ ಅವರು ಒಳ್ಳೆಯ ರೀತಿ ಸ್ಪಂದಿಸಿದ್ದರು. ಅದೇ ರೀತಿ ಇದಕ್ಕೆ ನನ್ನ ಒಬ್ಬನ ಶ್ರಮ ಇಲ್ಲ. ಶಾಸಕ ಅಭಯ ಪಾಟೀಲ, ಮಾಜಿ ಶಾಸಕರಾದ ಅನಿಲ ಬೆನಕೆ, ಸಂಜಯ ಪಾಟೀಲ ಸೇರಿ ರೈಲ್ವೆ ಅಧಿಕಾರಿಗಳು ಹಾಗೂ ಮಾಧ್ಯಮಗಳು ಶ್ರಮಿಸಿವೆ. ಅವರಿಗೆಲ್ಲ ಧನ್ಯವಾದ ಸಲ್ಲಿಸುತ್ತೇನೆ. ನಾಳೆ 10.30ಕ್ಕೆ ಬೆಂಗಳೂರಿನಲ್ಲಿ ಚಾಲನೆ ಸಿಗಲಿದೆ. 11 ಗಂಟೆಗೆ ಬೆಂಗಳೂರು ಬಿಡಲಿದ್ದು, ಬೆಳಗಾವಿ ರೈಲ್ವೆ ನಿಲ್ದಾಣಕ್ಕೆ ಸಂಜೆ 8 ಗಂಟೆಗೆ ಬರಲಿದೆ. ಇಲ್ಲಿ 7 ಗಂಟೆಯಿಂದ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಹಾಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಬೇಕೆಂದು ಜಗದೀಶ ಶೆಟ್ಟರ್‌ ಮನವಿ ಮಾಡಿಕೊಂಡರು.