ಸಾರಾಂಶ
ದಾವಣಗೆರೆ: ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್ ಅವರನ್ನು ಅವಹೇಳನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬೆಳಗಾವಿ ಸುವರ್ಣಸೌಧ ಅಧಿವೇಶನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಹೀನಾಯ ಪದ ಬಳಸಿದ ಬಿಜೆಪಿ ವಿಧಾನಪರಿಷತ್ತು ಸದಸ್ಯ ಸಿ.ಟಿ.ರವಿ ವಿರುದ್ಧ ಕಾಂಗ್ರೆಸ್ ಜಿಲ್ಲಾ ಘಟಕದಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು. ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅಣಕು ಶವಯಾತ್ರೆ ಮಾಡಿ, ಶಾಸಕ ಸಿ.ಟಿ. ರವಿ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿ, ಕಾಲಲ್ಲಿ ತುಳಿದರು, ಸಿ.ಟಿ.ರವಿ ಭಾವಚಿತ್ರವನ್ನು ಹರಿದುಹಾಕುವ ಮೂಲಕ ಮಹಿಳಾ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಪದಾಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಈ ಸಂದರ್ಭ ಮಾತನಾಡಿ, ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ಅಕ್ಷಮ್ಯ ಅಪರಾಧ. ಅಮಿತ್ ಶಾ ಸಂಘ ಪರಿವಾರ ಹಾಗೂ ಬಿಜೆಪಿ ಸಂವಿಧಾನಶಿಲ್ಪಿ ಬಗ್ಗೆ ಅದೆಷ್ಟು ಗೌರವ ಹೊಂದಿದೆ ಎಂಬ ಸಂಗತಿ ಈ ಹೇಳಿಕೆಯಿಂದ ಜಗಜ್ಜಾಹಿರಾಗಿದೆ ಎಂದರು. ಜವಾಬ್ಧಾರಿಯುತ ಸ್ಥಾನದಲ್ಲಿರುವ ಅಮಿತ್ ಶಾ ಅವಹೇಳನಾಕಾರಿ ಹೇಳಿಕೆಗೆ ಇಡೀ ಕಾಂಗ್ರೆಸ್ ಪಕ್ಷ, ದೇಶವಾಸಿಗಳು, ಶೋಷಿತರು, ಹಿಂದುಳಿದವರು, ದಮನಿತ ಸಮುದಾಯಗಳು ತೀವ್ರವಾಗಿ ಖಂಡಿಸುತ್ತಿವೆ. ಅಂಬೇಡ್ಕರ್ ಬಗ್ಗೆ ಅವಹೇಳನ ಹೇಳಿಕೆ ನೀಡಿದ್ದು ಅಕ್ಷಮ್ಯ ಅಪರಾಧ ಎಂದು ಹೇಳಿದರು. ಪಕ್ಷದ ಎಸ್‌ಸಿ ಘಟಕ ಜಿಲ್ಲಾಧ್ಯಕ್ಷ ಬಿ.ಎಚ್. ವೀರಭದ್ರಪ್ಪ ಮಾತನಾಡಿ, ಮಹಾನ್ ನಾಯಕ ಅಂಬೇಡ್ಕರ್ ಹಾಕಿಕೊಟ್ಟ ಸಂವಿಧಾನದಡಿ ದೇಶ ಸಾಗುತ್ತಿದೆ. ಇಂದು ಇಡೀ ವಿಶ್ವದಲ್ಲೇ ಸದೃಢ ಪ್ರಜಾಪ್ರಭುತ್ವ ಹೊಂದಿರುವ ದೇಶ ನಮ್ಮದು. ಇದಕ್ಕೆ ಅಂಬೇಡ್ಕರ್ ಕೊಡುಗೆ ಅತಿ ದೊಡ್ಡದು. ಬಾಬಾ ಸಾಹೇಬರು ಹಾಕಿಕೊಟ್ಟ ಸಂವಿಧಾನದಲ್ಲೇ ಇಡೀ ದೇಶದ ಜನತೆ ಬದುಕನ್ನು ಕಟ್ಟಿಕೊಂಡಿದ್ದಾರೆ. ಇಂತಹ ಮಹಾನ್ ನಾಯಕರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಮಾನಿಸಿದ್ದನ್ನು ಖಂಡಿಸುತ್ತೇವೆ ಎಂದು ತಿಳಿಸಿದರು. ಪಕ್ಷದ ಮುಖಂಡರಾದ ಅಯೂಬ್ ಪೈಲ್ವಾನ್, ಕೆ.ಜಿ.ಶಿವಕುಮಾರ, ಎಸ್.ಮಲ್ಲಿಕಾರ್ಜುನ, ಮಾಗಾನಹಳ್ಳಿ ಬಿ.ಕೆ.ಪರಶುರಾಮ, ಹದಡಿ ಜಿ.ಸಿ. ನಿಂಗಪ್ಪ, ಪಾಲಿಕೆ ಸದಸ್ಯರಾದ ಎ.ನಾಗರಾಜ, ಎಲ್.ಎಂ.ಎಚ್. ಸಾಗರ್, ಸೀಮೆಣ್ಣೆ ಮಲ್ಲೇಶ, ಎಚ್.ಜೆ. ಮೈನುದ್ದೀನ್, ನಾಗರಾಜ ಆದಾಪುರ, ರಂಗನಾಥ, ಮಂಜಮ್ಮ, ಶ್ರೀಕಾಂತ ಬಗರೆ, ಯುವರಾಜ, ಮಲ್ಲೇಶಪ್ಪ, ಸುಭಾನ್, ಖಾನ್, ರಾಕೇಶ, ಜಯಣ್ಣ, ಸರ್ವಮಂಗಳ, ಕವಿತಾ ಚಂದ್ರಶೇಖರ, ಕಾವ್ಯ ಇತರರು ಇದ್ದರು.
ಶಾ ರಾಜೀನಾಮೆ ನೀಡಲಿ, ಸಿ.ಟಿ.ರವಿ ವಜಾಗೊಳಿಸಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ, ಮಾಜಿ ಮೇಯರ್ ಅನಿತಾಬಾಯಿ ಮಾಲತೇಶ ಮಾತನಾಡಿ, ಅಂಬೇಡ್ಕರ್‌ರಂತಹ ಜಗತ್ತಿನ ಶ್ರೇಷ್ಠ ನಾಯಕರನ್ನು ಅವಮಾನಿಸಿರುವ ಅಮಿತ್ ಶಾ ಹಾಗೂ ಕೇಂದ್ರ ಸರ್ಕಾರಕ್ಕೆ ಜನತೆ ಮುಂದಿನ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸುತ್ತಾರೆ. ಸಮಾಜದಲ್ಲಿ ಎಲ್ಲ ನಾಗರೀಕರಿಗೂ ಸಮಗ್ರ ಸೌಲಭ್ಯ ಸಿಕ್ಕಿದ್ದರೆ ಅದಕ್ಕೆ ಅಂಬೇಡ್ಕರ್ ದೊಡ್ಡ ಕೊಡುಗೆ ನೀಡಿದ್ದಾರೆ. ಕೇಂದ್ರ ಸಚಿವ ಅಮಿತ್ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು. ಇತ್ತ ರಾಜ್ಯದ ಬೆಳಗಾವಿ ಸುವರ್ಣ ಸೌಧದಲ್ಲಿ ವಿಪ ಸದಸ್ಯ ಸಿ.ಟಿ.ರವಿ ಮಹಿಳಾ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಗ್ಗೆ ಹೀನಾಯ ಪದಗಳಿಂದ ಮಾತನಾಡಿದ್ದಾರೆ. ಸಿ.ಟಿ.ರವಿ ವಿರುದ್ಧ ಕಾನೂನು ಕ್ರಮ ಕೈಗೊಂಡು, ವಿಪ ಸದಸ್ಯತ್ವದಿಂದ ವಜಾ ಮಾಡಬೇಕು. ಮಹಿಳೆಯರನ್ನು ಗೌರವದಿಂದ ಮಾತನಾಡುವುದನ್ನು ಸಿ.ಟಿ.ರವಿಯಂತಹವರು ಕಲಿಯಲಿ. ರವಿ ವಿರುದ್ಧ ಕೈಗೊಳ್ಳುವ ಕ್ರಮ ಇತರರಿಗೂ ಎಚ್ಚರಿಕೆ ಪಾಠವಾಗಬೇಕು ಎಂದರು.