ಸಾರಾಂಶ
- ಮೇಯರ್ ಚಮನಸಾಬ್ ಅಧ್ಯಕ್ಷತೆ ಸಾಮಾನ್ಯ ಸಭೆಯಲ್ಲಿ ವಾಕ್ಸಮರ । ವಿದಾಯ ಭಾಷಣ ಬೆನ್ನಲ್ಲೇ ಬಿಜೆಪಿ ಸಿಡಿಸಿದ ಕಿಡಿನುಡಿ
- ಅಭಿವೃದ್ಧಿ ಕಾರ್ಯದ ವಿಚಾರಕ್ಕೆ ಕಾಂಗ್ರೆಸ್-ಬಿಜೆಪಿ ಸದಸ್ಯರ ಮಧ್ಯೆ ಪರಸ್ಪರ ಕೆಸರೆರಚಾಟ । ಗೊಂದಲ ಹಿನ್ನೆಲೆ ಸಭೆ ಬರಕಾಸ್ತು - - - ಕನ್ನಡಪ್ರಭ ವಾರ್ತೆ ದಾವಣಗೆರೆಕಳ್ಳರು ಅಂದ್ರೆ ನೀವ್ಯಾಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತೀರಿ ಎಂಬ ಬಿಜೆಪಿ ಸದಸ್ಯರೊಬ್ಬರ ಮಾತಿನಿಂದ ಮಹಾನಗರ ಪಾಲಿಕೆ ಸದಸ್ಯರ 5 ವರ್ಷಗಳ ಅವಧಿಯ ಕಡೆಯ ಸಾಮಾನ್ಯ ಸಭೆಯು ಪರಸ್ಪರ ವಾಕ್ಸಮರಕ್ಕೆ ಆಸ್ಪದ ಮಾಡಿಕೊಟ್ಟ ಘಟನೆ ನಡೆಯಿತು.
ನಗರದ ಪಾಲಿಕೆ ಸಭಾಂಗಣದಲ್ಲಿ ಮೇಯರ್ ಕೆ.ಚಮನ್ ಸಾಬ್ ಅಧ್ಯಕ್ಷತೆಯ ಕಡೆಯ ಸಾಮಾನ್ಯ ಸಭೆಯಲ್ಲಿ ಮೇಯರ್ ವಿದಾಯ ಭಾಷಣ ಮಾಡಿದರು. ಎಲ್ಲರೂ ಸಿಹಿ ಘಟನೆಯೊಂದಿಗೆ ನಮ್ಮ ಅವಧಿ ಮುಗಿಸೋಣ ಎಂದು ಹೇಳಿ, ಸಭೆಗೆ ಚಾಲನೆ ನೀಡಿದರು. ಇದಾದ ಸ್ವಲ್ಪ ಹೊತ್ತಿನಲ್ಲೇ ಇಡೀ ಸಭಾಂಗಣ ವಾಕ್ಸಮರದ ಅಖಾಡವಾಗಿ ಬದಲಾಗಿ, ಸಭೆಯನ್ನು ಮೇಯರ್ ಬರಕಾಸ್ತು ಮಾಡಿದರು.ವಿಪಕ್ಷದ ಮಾಜಿ ನಾಯಕ ಕೆ.ಪ್ರಸನ್ನಕುಮಾರ ಬಳಸಿದ ಕಳ್ಳರು ಎಂಬ ಪದವು ಕಾಂಗ್ರೆಸ್ಸಿನ ಸದಸ್ಯರನ್ನು ಕೆರಳಿಸಿತು. ಪರಿಣಾಮ ಎರಡೂ ಕಡೆಯವರ ಮಧ್ಯೆ ತೀವ್ರ ಮಾತಿನ ಚಕಮಕಿ, ಧಿಕ್ಕಾರ ಘೋಷಣೆಗಳು ಮೊಳಗತೊಡಗಿದವು. ಗಲಾಟೆ ತಹಬದಿಗೆ ಬಾರದ ಹಿನ್ನೆಲೆ ಮೇಯರ್ ಸ್ವಲ್ಪ ಹೊತ್ತು ಸಭೆ ಮುಂದೂಡಿದರು. ಈ ಬೆಳವಣಿಗೆ 45 ಸದಸ್ಯರ 5 ವರ್ಷದ ಅವಧಿಯ ಕೊನೆ ಸಭೆಗೆ ಕಪ್ಪುಚುಕ್ಕೆಯಾಗಿ ಪರಿಣಮಿಸಿ, ಎಲ್ಲರ ಮನಸ್ಸಿನಲ್ಲಿ ಉಳಿಯುವಂತಾಯಿತು.
ಶಿವಪ್ಪಯ್ಯ ವೃತ್ತವನ್ನು ಜರ್ಮನ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಬಗ್ಗೆ ಚರ್ಚೆ ಕಾವೇರಲು ಬಿಜೆಪಿ ಸದಸ್ಯ ಕೆ.ಪ್ರಸನ್ನಕುಮಾರ ಮುನ್ನುಡಿ ಬರೆದರು.ವಿಪಕ್ಷ ನಾಯಕ ಆರ್.ಎಲ್. ಶಿವಪ್ರಕಾಶ ಮಾತನಾಡಿ, ಆವರಗೆರೆ ಗೋಶಾಲೆಯಿಂದ ಚಿಕ್ಕನಹಳ್ಳಿ ತನಕ ರಿಂಗ್ ರಸ್ತೆ ಅಭಿವೃದ್ಧಿಗೆ ₹39 ಕೋಟಿ ಮೀಸಲಿಟ್ಟ ಬಗ್ಗೆ ಪ್ರಶ್ನಿಸಿದರು. ಪಾಲಿಕೆ ಎಂಜಿನಿಯರ್ ಬಸವರಾಜ ಮಾಹಿತಿ ನೀಡುವಾಗ ಮಧ್ಯ ಪ್ರವೇಶಿಸಿದ ಪ್ರಸನ್ನಕುಮಾರ, ನೀವು ಹೇಳಿದಂತೆ 2 ಕಿಮೀ ವ್ಯಾಪ್ತಿಗೆ ₹29 ಕೋಟಿ ಖರ್ಚು ಮಾಡುತ್ತೀರಾ? ಇಲ್ಲಿ ಒಎಫ್‌ಸಿ ಹಾಕುತ್ತೀರಾ? ಯೋಜನಾ ವರದಿಯಲ್ಲಿ ಮೈಕ್ರೋ ಸರ್ಫೇಸಿಂಗ್ ಪದ ಬಳಸಿದ್ದೀರಿ. ಅದರ ಅರ್ಥವೇನೆಂದು ಪ್ರಶ್ನಿಸಿದರು. ಇದೇ ವಿಚಾರಕ್ಕೆ ಸುಮಾರು ಹೊತ್ತು ಚರ್ಚೆ ನಡೆದು, ಕಡೆಗೆ ಮೇಯರ್ ಕೆ.ಚಮನ್ ಸಾಬ್ ಸಹ ನೀವು ಎಂಜಿನಿಯರ್. ಸಭೆಗೆ ಎಲ್ಲ ತಿಳಿದುಕೊಂಡೇ ಬರಬೇಕು ಎಂದು ತಿಳಿಹೇಳಿದರು.
ಅಷ್ಟಕ್ಕೇ ನಿಲ್ಲದ ಪ್ರಸನ್ನಕುಮಾರ, ಹೀಗೆಯೇ ಸುಳ್ಳು ಹೇಳಿಕೊಂಡು ಜನರನ್ನು ಯಾಮಾರಿಸುತ್ತಿದ್ದೀರಿ. ಜರ್ಮನ್ ಮಾದರಿ ವೃತ್ತವೆಂದು ಹೇಳಿ, ಚರಂಡಿ ಮೇಲಿನ ಹಾಸುಗಲ್ಲು ತಂದು, ಅದನ್ನೇ ಫೇವರ್ಸ್ ಮಾಡಿ, ಜರ್ಮನ್ ಮಾದರಿ ಅಂತಾ ಜನರಿಗೆ ಮೋಸ ಮಾಡುತ್ತಿದ್ದೀರಿ ಎಂದು ಟೀಕಿಸಿದರು. ಅದಕ್ಕೆ ಕಾಂಗ್ರೆಸ್ ಸದಸ್ಯರಾದ ಜಿ.ಎಸ್. ಮಂಜುನಾಥ ಗಡಿಗುಡಾಳ, ಎ.ನಾಗರಾಜ, ಅಬ್ದುಲ್ ಲತೀಫ್ ಆಕ್ಷೇಪಿಸಿ, ಮೊದಲು ಆ ವೃತ್ತದ ಕಾಮಗಾರಿ ಮುಗಿದ ನಂತರ ಮಾತನಾಡಿ. ಅಲ್ಲಿವರೆಗೆ ಶಾಂತವಾಗಿರಿ ಎಂದರು. ಆಗ ಮತ್ತೆ ವರ್ತುಲ ರಸ್ತೆ ವಿಷಯದ ಮಾಹಿತಿ ಕೊಡಿ ಎಂದು ಪ್ರಸನ್ನಕುಮಾರ ಪಟ್ಟುಹಿಡಿದರು.ರೊಚ್ಚಿಗೆದ್ದ ಕಾಂಗ್ರೆಸ್ಸಿನ ಸದಸ್ಯರು, ನಿಮ್ಮ ಬಿಜೆಪಿ ಅಧಿಕಾರ ಅವಧಿಯಲ್ಲಿ ಅಶೋಕ ಥೇಟರ್ ಬಳಿ, ಡಿಸಿಎಂ ಟೌನ್ ಶಿಪ್ ಬಳಿ ಕೈಗೊಂಡ ರೈಲ್ವೆ ಅಂಡರ್ ಬ್ರಿಡ್ಜ್ ಹೇಗಿವೆ, ಒಮ್ಮೆ ನೋಡಿ. ನಮ್ಮ ನಾಯಕರು ನೀಡಿದ ಕೊಡುಗೆಯಂತೆ ಒಂದೇ ಒಂದು ರಸ್ತೆಯನ್ನು ನಿಮ್ಮಿಂದ ಕೊಡಲಾಗಲಿಲ್ಲ. ಒಂದು ಆಶ್ರಯ ಮನೆಯನ್ನೂ ನಿಮ್ಮ ಅವಧಿಯಲ್ಲಿ ನೀಡಲಾಗಲಿಲ್ಲ. ಮನೆ ನೀಡಲು ₹5 ಲಕ್ಷ ವಸೂಲಿ ಮಾಡಿದ್ದೀರಿ. ಆದರೆ, ನಾವು ₹16 ಸಾವಿರ ಆಶ್ರಯ ಮನೆ ಕೊಟ್ಟಿದ್ದೇವೆ ಎಂದು ತಿರುಗೇಟು ನೀಡಿದರು.
ಬಿಜೆಪಿ ಪ್ರಸನ್ನ ಮಾತನಾಡಿ, ಜರ್ಮನ್ ಮಾದರಿ ವೃತ್ತದ ವಿಷಯ ಮತ್ತೆ ಪ್ರಸ್ತಾಪಿಸುತ್ತಲೇ, ಕಾಂಗ್ರೆಸ್ ಸದಸ್ಯರು ಏರು ದ್ವನಿಯಲ್ಲಿ ಆಕ್ಷೇಪಿಸಿದ್ದರಿಂದ ಪ್ರಸನ್ನ, ವೃತ್ತದ ವಿಷಯ ಪ್ರಸ್ತಾಪ ಮಾಡಿದರೆ ನೀವು ಏರು ಧ್ವನಿಯಲ್ಲಿ ಮಾತನಾಡುತ್ತೀರಿ. ಕಳ್ಳ ಅಂದ್ರೆ ನೀವ್ಯಾಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತೀರಿ ಎಂದರು. ಇದರಿಂದ ಆಕ್ರೋಶಗೊಂಡ ಎ.ನಾಗರಾಜ, ಮಂಜುನಾಥ, ಲತೀಫ ಸೇರಿದಂತೆ ಸದಸ್ಯರು ಮೇಯರ್ ಆಸೀನರಾಗಿದ್ದ ವೇದಿಕೆ ಮುಂದೆ ಪ್ರತಿಭಟಿಸಿದರು. ಅಂಸವಿಧಾನಿಕ ಪದ ಬಳಸಿದ ಬಿಜೆಪಿ ಸದಸ್ಯರು ಹೇಳಿಕೆ ಹಿಂಪಡೆಯಬೇಕು ಎಂದು ಘೋಷಣೆ ಕೂಗಿದರು. ಎರಡೂ ಪಕ್ಷಗಳ ಸದಸ್ಯರ ಮಧ್ಯೆ ವಾಕ್ಸಮರದಿಂದಾಗಿ ಸಭೆ ಬರಕಾಸ್ತು ಸಹ ಆಯಿತು.ಉಪ ಮೇಯರ್ ಸೋಗಿ ಶಾಂತಕುಮಾರ, ಆಯುಕ್ತೆ ರೇಣುಕಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಗಣೇಶ ಹುಲ್ಮನಿ, ಸುಧಾ ಇಟ್ಟಿಗುಡಿ ಮಂಜುನಾಥ, ಆಶಾ ಉಮೇಶ, ಎ.ಬಿ.ರಹೀಂ ಸಾಬ್, ಬರ್ಕತ್ ಅಲಿ, ಸುರಭಿ ಎಸ್.ಶಿವಕುಮಾರ, ಎಲ್.ಡಿ.ಗೋಣೆಪ್ಪ, ಬಿಜೆಪಿ ಸದಸ್ಯರಾದ ಮಾಜಿ ಮೇಯರ್‌ಗಳಾದ ಡಿ.ಎಸ್. ಉಮಾ ಪ್ರಕಾಶ, ಎಸ್.ಟಿ. ವೀರೇಶ, ರೇಖಾ ಸುರೇಶ ಗಂಡಗಾಳ, ಮಾಜಿ ಉಪ ಮೇಯರ್ ಯಶೋಧ ಯೋಗೇಶ, ಎಲ್.ಡಿ.ಗೋಣೆಪ್ಪ ಸೇರಿದಂತೆ ಆಡಳಿತ, ವಿಪಕ್ಷ ಸದಸ್ಯರು, ಅಧಿಕಾರಿಗಳು ಇದ್ದರು.
ಕೊನೆಗೆ ಮೇಯರ್, ಶುಲ್ಕ ಹೆಚ್ಚಳ ಮಾಡುವ ಜೊತೆಗೆ ಹೊಸ ವಾರ್ಡ್‌ಗಳಲ್ಲಿ ಪೈಪ್ ಲೈನ್ ಅಳವಡಿಕೆಗೆ ಅನುಮತಿ ನೀಡಬೇಡಿ ಎಂದು ಸೂಚಿಸಿದರು. ಉಪ ಮೇಯರ್ ಸೋಗಿ ಶಾಂತಕುಮಾರ್ , ಆಯುಕ್ತೆ ರೇಣುಕಾ, ಸ್ಥಾಯಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.- - -
ಬಾಕ್ಸ್* ಗ್ಯಾಸ್ ಪೈಪ್‌ಲೈನ್ ಅಳವಡಿಕೆಗೆ ಹೆಚ್ಚು ಶುಲ್ಕಕ್ಕೆ ಆಕ್ಷೇಪ ದಾವಣಗೆರೆ: ದಾವಣಗೆರೆ ನಗರಾದ್ಯಂತ ಅಳವಡಿಸುತ್ತಿರುವ ಗ್ಯಾಸ್ ಪೈಪ್ ಲೈನ್‌ಗೆ ಕೇವಲ ₹1 ದರಕ್ಕೆ 1 ಮೀಟರ್ ಶುಲ್ಕ ವಿಧಿಸುತ್ತಿದ್ದು, ಇದು ಅತಿ ಕಡಿಮೆಯಾಗಿದೆ. ಜನಸಾಮಾನ್ಯರಿಗೆ 1 ಮೀಟರ್‌ಗೆ ₹1800 ವಿಧಿಸುತ್ತಿರುವ ಬಗ್ಗೆ ಬಿಜೆಪಿ ಸದಸ್ಯ ಕೆ.ಪ್ರಸನ್ನಕುಮಾರ ಅಸಮಾಧಾನ ವ್ಯಕ್ತಪಡಿಸಿದರು. ನಗರದ ಪಾಲಿಕೆ ಸಭಾಂಗಣದಲ್ಲಿ ಸೋಮವಾರ ಸಾಮಾನ್ಯ ಸಭೆಯಲ್ಲಿ ಪ್ರಸನ್ನಕುಮಾರ ಹೇಳಿಕೆಯಿಂದ ಅಸಮಾಧಾನಗೊಂಡ ಕಾಂಗ್ರೆಸ್, ಬಿಜೆಪಿ ಸದಸ್ಯರು ಪಕ್ಷಾತೀತವಾಗಿ ಎಂಜಿನಿಯರ್‌ಗಳ ಮೇಲೆ ಮುಗಿಬಿದ್ದು ಅಸಮಾಧಾನ ಹೊರಹಾಕಿದರು.
ತಿಂಗಳಿಗೆ ಲಕ್ಷ ರು. ಸಂಬಳ ಪಡೆದರೂ, ಯಾವುದೇ ವಾರ್ಡ್‌ಗೂ ಎಂಜಿನಿಯರ್‌ಗಳು ಭೇಟಿ ನೀಡುತ್ತಿಲ್ಲ. ನೀವು ಸರಿಯಾಗಿ ಕೆಲಸ ಮಾಡಿದ್ದರೆ ಇಷ್ಟೆಲ್ಲಾ ಸಮಸ್ಯೆ ಆಗುವುದೇ ಇಲ್ಲ. ನಿಮಗೆ ಕೊಡುವ ಸರ್ಕಾರಿ ಸಂಬಳಕ್ಕಾದರೂ ಸರಿಯಾಗಿ ಕೆಲಸ ಮಾಡಿ ಎಂದು ಸ್ವತಃ ಮೇಯರ್ ಕೆ.ಚಮನ್ ಸಾಬ್ ಸಹ ಅಧಿಕಾರಿಗಳಿಗೆ ತಾಕೀತು ಮಾಡಿದರು. ಇದಕ್ಕೆ ಸದಸ್ಯರು ಪಕ್ಷಾತೀತವಾಗಿ ಧ್ವನಿಗೂಡಿಸಿದರು.ಕಾಂಗ್ರೆಸ್ ಸದಸ್ಯ ಎ.ನಾಗರಾಜ ಮಾತನಾಡಿ, ಗ್ಯಾಸ್ ಪೈಪ್ ಲೈನ್ ಅಳವಡಿಕೆ ಕೇಂದ್ರ ಸರ್ಕಾರದ ಯೋಜನೆ. ಆದರೆ, ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ, ಜಾರಿಗೊಳಿಸಲಾಗುತ್ತಿದೆ. ನೀವು ವಿರೋಧಿಸಿ ಎಂದರು. ಆಗ ಮೇಯರ್ ಸಹ ಧ್ವನಿ ಗೂಡಿಸಿದರು.
ಆಡಳಿತ ಪಕ್ಷದ ಹೇಳಿಕೆಗೆ ವಿಪಕ್ಷ ಸದಸ್ಯ ಕೆ.ಪ್ರಸನ್ನಕುಮಾರ, ಗ್ಯಾಸ್ ಪೈಪ್ ಲೈನ್ ಅಳವಡಿಕೆಗೆ ವಿರೋಧಿಸಿ, ನೀವು ಸಭೆಗೆ ಸುಳ್ಳು ಮಾಹಿತಿ ನೀಡುತ್ತಿದ್ದೀರಿ. ಪೈಪ್ ಲೈನ್ ಅಳವಡಿಕೆಗೆ ದರ ನಿಗದಿಪಡಿಸಿದ್ದು ರಾಜ್ಯ ಸರ್ಕಾರ. ಇದರಲ್ಲಿ ಕೇಂದ್ರದ ಯಾವ ಪಾತ್ರವೂ ಇಲ್ಲ. ಕಂಪನಿಗೆ ಅನುಕೂಲ ಮಾಡಿಕೊಡಲು ನಿಮ್ಮ ಸರ್ಕಾರವೇ ಹೀಗೆ ಮಾಡಿದೆ ಎಂದು ತಿರುಗೇಟು ನೀಡಿದರು.ಕಡೆಗೆ ಮೇಯರ್ ಕೆ.ಚಮನ್ ಸಾಬ್, ಶುಲ್ಕ ಹೆಚ್ಚಳ ಮಾಡುವ ಜೊತೆಗೆ ವಾರ್ಡ್‌ಗಳಿಗೆ ಪೈಪ್ ಲೈನ್ ಅಳವಡಿಕೆಗೆ ಅನುಮತಿ ನೀಡಬೇಡಿ ಎಂದು ಆಯುಕ್ತರಿಗೆ ಸೂಚನೆ ನೀಡಿದರು.
- - - -(ಫೋಟೋ ಬರಲಿವೆ):