ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಸಿದ್ದೇಶ್ವರ ಸ್ವಾಮೀಜಿ ಗುರುನಮನ ಮಹೋತ್ಸವಕ್ಕೆ ದೊಡ್ಡಮಟ್ಟದ ಪ್ರಚಾರ ದೊರಕಬಾರದು ಎಂಬ ಹಿಡನ್ ಅಜೆಂಡಾ ಇರಿಸಿಕೊಂಡು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆ ಕಾರ್ಯಕ್ರಮಕ್ಕೆ ಬಂದ ಸಂದರ್ಭದಲ್ಲಿ ದ್ವೇಷಪೂರಿತ ಹೇಳಿಕೆ ನೀಡಿ ಹೋದರು ಎಂದು ಕಾಂಗ್ರೆಸ್ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದೇಶ್ವರ ಸ್ವಾಮೀಜಿ ಅವರ ಪವಿತ್ರ ಗುರುನಮನ ಕಾರ್ಯಕ್ರಮಕ್ಕೆ ಆಗಮಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ದ್ವೇಷಭರಿತ ರಾಜಕಾಣದ ಮಾತು ಆಡಿರುವುದು ಖೇದಕರ. ಕಾನೂನಿನ ಪರಿಧಿಯಲ್ಲಿಯೇ ಹಳೆಯ ಪ್ರಕರಣಗಳನ್ನು ಸರ್ಕಾರ ತನಿಖೆ ನಡೆಸಲು ಮುಂದಾಗಿದೆ. ಇದನ್ನೇ ಕೇಂದ್ರೀಕರಿಸಿ ರಾಜ್ಯ ಸರ್ಕಾರ ನೀಚ ಆಡಳಿತ ನಡೆಸುತ್ತಿದೆ ಎಂದು ಅವಹೇಳನಕಾರಿಯಾಗಿ ಹೇಳಿರುವುದು ಸರಿಯಲ್ಲ. ಗುರುನಮನ ಕಾರ್ಯಕ್ರಮಕ್ಕೆ ಪ್ರಚಾರ ದೊರಕಬಾರದು ಎಂಬ ಹಿಡನ್ ಅಜೆಂಡಾ ಇರಿಸಿ ಈ ರೀತಿ ಹೇಳಿಕೆ ನೀಡಿದಂತಿದೆ ಎಂದು ದೂರಿದರು.
ಈ ಹಿಂದೆ ನಿಮ್ಮ ಸರ್ಕಾರದ ಅವಧಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಸಂಜೀವ ಭಟ್ ಅವರನ್ನು ಎಷ್ಟೋ ವರ್ಷಗಳ ಕೇಸ್ ಮರು ತನಿಖೆ ಮಾಡಲಿಲ್ಲವೇ? ತಿಪಟೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಅಕ್ರಮವಾಗಿ ಬಂಧಿಸಲಿಲ್ಲವೇ ಎಂದು ಪ್ರಶ್ನಿಸಿದರು.ಅವರ ಪಕ್ಷದ ಶಾಸಕರೇ ₹ 40 ಸಾವಿರ ಕೋಟಿ ಕೋವಿಡ್ ಅವ್ಯವಹಾರ ಆರೋಪ ಮಾಡಿದ್ದಾರೆ. ಜೋಶಿ, ರಾಜಾಹುಲಿ ಮಗ ಇಲಿ ವಿಜಯೇಂದ್ರ ಬಳಿ ಧಮ್ ಇದ್ದರೆ ಆ ಬಗ್ಗೆ ಮಾತನಾಡಬೇಕಿತ್ತು, ಆ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಬೇಕಿತ್ತಲ್ಲವೇ ಎಂದು ಪ್ರಶ್ನಿಸಿದರು.
ಯತ್ನಾಳ ಆರೋಪಕ್ಕೆ ಉತ್ತರಿಸುವ ಧೈರ್ಯ ಬಿಜೆಪಿಗರಿಗೆ ಇಲ್ಲ, ಯತ್ನಾಳರ ಆರೋಪಕ್ಕೆ ರಿಯಾಕ್ಟ್ ಮಾಡದೇ ಮೌನ ವಹಿಸಿರುವುದು ಭ್ರಷ್ಟಾಚಾರದಲ್ಲಿ ನಿಮ್ಮ ಪಾಲು ಇದ್ದಂತೆ ತೋರುತ್ತದೆ ಎಂದರು.ಆರ್.ಎಸ್.ಎಸ್. ಮನೆಯಲ್ಲಿ ರಾಮನಾಮ ಜಪಿಸುವಂತೆ ಕರೆ ನೀಡಿದೆ. ಮೊದಲು ಬಿಜೆಪಿ ನಾಯಕರು ಮುಸ್ಲಿಂ, ಮೊಘಲರ ಹೆಸರನ್ನು ಜಪ ಮಾಡುವುದು ಬಿಡಬೇಕು ಎಂದು ಹೇಳಲಿ. ರಾಮಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ವಿರೋಧವಿಲ್ಲ. ಅದರಲ್ಲಿ ಕಾಂಗ್ರೆಸ್ ಯಾವ ಪಾತ್ರವೂ ಇಲ್ಲ. ಆದರೂ ರಾಮಮಂದಿರಕ್ಕೆ ಕಾಂಗ್ರೆಸ್ ವಿರೋಧ ಮಾಡುತ್ತಿದೆ ಎಂದು ಸುಳ್ಳು ಹೇಳಿ ದಾರಿ ತಪ್ಪಿಸುತ್ತಿದೆ. ಹಿಂದುಳಿದ ವರ್ಗದ ನಾಯಕರು ಮುಖ್ಯಮಂತ್ರಿಯಾಗಿರುವುದು ಬಿಜೆಪಿಗರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.
ಕಾಂಗ್ರೆಸ್ ಮುಖಂಡರಾದ ನಾಗರಾಜ ಲಂಬು, ಫಯಾಜ್ ಕಲಾದಗಿ, ವಸಂತ ಹೊನಮೋಡೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.