ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಕಾಂಗ್ರೆಸ್ ಮುಖಂಡ ಹಾಗೂ ಆಳಂದ ಶಾಸಕ ಬಿ.ಆರ್. ಪಾಟೀಲ ಅವರ ಆಪ್ತ ಬಸವರಾಜ ಚೌಲ್ ಅವರ ಪುತ್ರ ಚಂದ್ರಶೇಖರ್ ಚೌಲ್ (21) ಈತನನ್ನು ಆಳಂದದಲ್ಲಿ ಬರ್ಬರ ಕೊಲೆ ಮಾಡಲಾಗಿದೆ.ಆಳಂದ-ಸೊಲ್ಲಾಪುರ ಹೆದ್ದಾರಿಯ ಜಿಡಗಾ ರಸ್ತೆಯಲ್ಲಿ ಶನಿವಾರ ರಾತ್ರಿ 8. 30ರ ಸಮಾರಿಗೆ ಚಾಕುವಿನಿಂದ ಇರಿದು ಚಂದ್ರಶೇಖರ್ ಚೌಲ್ ಕೊಲೆ ಮಾಡಲಾಗಿದೆ. ಗೆಳೆಯರೊಂದಿಗೆ ಪಾರ್ಟಿ ಮಾಡುತ್ತಿದ್ದ ವೇಳೆ ನಡೆದ ಜಗಳ ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯವಾಗಿದೆ. ಸ್ನೇಹಿತರೇ ಕೊಲೆ ಮಾಡಿ ಪರಾರಿಯಾಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಕೊಲೆಯಾದ ಚಂದ್ರಶೇಖರ್ ಅವರ ತಂದೆ ಬಸವರಾಜ ಚೌಲ್ ಅವರು ಶಾಸಕ ಬಿ.ಆರ್. ಪಾಟೀಲ ಅವರ ಆಪ್ತರಾಗಿದ್ದು, ಕೊಲೆಗೆ ರಾಜಕೀಯ ವೈಷಮ್ಯವೂ ಕಾರಣವಿರಬಹುದು ಎಂಬ ಶಂಕೆ ವ್ಯಕ್ತಪಡಿಸಲಾಗಿದೆ.ಸುದ್ದಿ ತಿಳಿದು ಆಳಂದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕೊಲೆಯಾದ ಚಂದ್ರಶೇಖರ್ ಚೌಲ್ ಸ್ನೇಹಿತ ಮಿಲನ್ ವಿಜಯಕುಮಾರ ಜಾಧವ್ ಸೇರಿ ಮತ್ತಿತರ ವಿರುದ್ಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.
24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿ:ಆಳಂದ ಕಾಂಗ್ರೆಸ್ ಮುಖಂಡನ ಪುತ್ರನ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಶಾಸಕ ಬಿಆರ್ ಪಾಟೀಲ್ ಜಿಮ್ಸ್ ಶವಾಗಾರಕ್ಕೆ ಭೇಟಿ ನೀಡಿದರು. ಸಂಬಂಧಿಕರ ಬಳಿ ಮಾಹಿತಿ ಪಡೆದ ಶಾಸಕ ಬಿ.ಆರ್. ಪಾಟೀಲ್ ತಮ್ಮ ಆಪ್ತ ಬಸವರಾಜ ಚೌಲ್ ಪುತ್ರನ ಹತ್ಯೆ ಯಾರು ಮಾಡಿದ್ದಾರೆ ಯಾಕೆ ಮಾಡಿದ್ದಾರೆ ಗೊತ್ತಿಲ್ಲ. ಸೂಕ್ತ ತನಿಖೆಯಾಗಬೇಕು. ಈಗಾಗಲೇ ಎಸ್ಪಿಯವರಿಗೆ ನಾನು ಸೂಚನೆ ನೀಡಿದ್ದೆನೆ. 24 ಗಂಟೆಯೊಳಗೆ ಎಲ್ಲಾ ಆರೋಪಿಗಳ ಬಂಧನವಾಗಬೇಕು. ಜಿಲ್ಲಾ ಉಸ್ತುವಾರಿ ಸಚಿವರ ಜೊತೆಯೂ ಮಾತನಾಡಿದ್ದಾಗಿ ಪಾಟೀಲ್ ಹೇಳಿದ್ದಾರೆ.