ಕಾಂಗ್ರೆಸ್ ನಾಯಕರಲ್ಲಿ ಸೋಲಿನ ಹತಾಶೆ ಕಾಡುತ್ತಿದೆ: ನಿಖಿಲ್

| Published : Jun 04 2024, 12:30 AM IST

ಸಾರಾಂಶ

ರಾಮನಗರ: ಎಕ್ಸಿಟ್ ಪೋಲ್ ನಲ್ಲಿ ಲೋಕಸಭಾ ಚುನಾವಣೆ ಫಲಿತಾಂಶ ಏನಾಗಲಿದೆ ಎಂಬುದರ ಸ್ಪಷ್ಟ ಸಂದೇಶ ಅರ್ಥ ಆಗುತ್ತಿದೆ. ಹೀಗಾಗಿಯೇ ಕಾಂಗ್ರೆಸ್ ನಾಯಕರಲ್ಲಿ ಸೋಲಿನ‌ ಹತಾಶ ಮನೋಭಾವ ಕಾಡುತ್ತಿದೆ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.

ರಾಮನಗರ: ಎಕ್ಸಿಟ್ ಪೋಲ್ ನಲ್ಲಿ ಲೋಕಸಭಾ ಚುನಾವಣೆ ಫಲಿತಾಂಶ ಏನಾಗಲಿದೆ ಎಂಬುದರ ಸ್ಪಷ್ಟ ಸಂದೇಶ ಅರ್ಥ ಆಗುತ್ತಿದೆ. ಹೀಗಾಗಿಯೇ ಕಾಂಗ್ರೆಸ್ ನಾಯಕರಲ್ಲಿ ಸೋಲಿನ‌ ಹತಾಶ ಮನೋಭಾವ ಕಾಡುತ್ತಿದೆ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸತ್ ಚುನಾವಣಾ ಪೂರ್ವದಲ್ಲಿ ಎನ್‌ಡಿಎ ಮೈತ್ರಿ ಕೂಟ 400ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು. ಅದರಂತೆಯೇ ಸಮೀಕ್ಷೆಗಳು ಕೂಡ ಎನ್‌ಡಿಎ ಮೈತ್ರಿ 360-380 ಸ್ಥಾನಗಳ ಸಂದೇಶ ನೀಡುತ್ತಿವೆ. 3ನೇ ಬಾರಿ ಮೋದಿರವರು ಪ್ರಧಾನಮಂತ್ರಿ ಆಗಲಿದ್ದಾರೆ. ಮೊದಲ ಬಾರಿ ಬಿಜೆಪಿ ಜೆಡಿಎಸ್ ಜೊತೆಗೂಡಿ ಚುನಾವಣೆ ಎದುರಿಸಿದ್ದೇವೆ. ಇನ್ನೂ ಹೆಚ್ಚಿನ ಸ್ಥಾನಗಳು ಕೂಡ ನಮ್ಮ ಪರವಾಗಿ ಬರುವ ನಿರೀಕ್ಷೆ ಇದೆ ಎಂದರು.

ಎಕ್ಸಿಟ್ ಪೋಲ್ ಮೇಲೆ ನಂಬಿಕೆ ಇಲ್ಲ ಎನ್ನುತ್ತಿರುವ ಕಾಂಗ್ರೆಸ್ ನಾಯಕರ ವಿಚಾರಕ್ಕೆ ಪ್ರತಿಕ್ರಿಯಿಸಿದ ನಿಖಿಲ್, ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದ ಪರ ಇಂಡಿಯಾ ಟುಡೇ ಆ್ಯಕ್ಸಿಸ್ ಅನ್ನೋ ಸಮೀಕ್ಷೆ ಮಾಡಿದ್ದರು. ಆಗ ಕೊಟ್ಟ 136 ಸ್ಥಾನದ ಸಮೀಕ್ಷೆ ಸರಿಯಾಗಿತ್ತಾ? ಈಗ ತಪ್ಪಾಗಿದೆಯಾ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ನಾಯಕರಲ್ಲಿ ಸೋಲಿನ‌ ಹತಾಶ ಮನೋಭಾವ ಕಾಡುತ್ತಿದೆ. ಇನ್ನೂ ಕೇವಲ 24 ಗಂಟೆಯಲ್ಲಿ ಫಲಿತಾಂಶ ಹೊರಬರಲಿದೆ. ಜನ ನಮ್ಮ ಪರವಾಗಿ ನಿಲ್ಲುತ್ತಾರೆ ಎನ್ನುವ ವಿಶ್ವಾಸ ಇದೆ. ಚುನಾವಣೆ ಆರೋಗ್ಯಕರ, ಶಾಂತಿಯುತವಾಗಿ ನಡೆಯಬೇಕು ಎಂದು ಈ ಹಿಂದೆಯೂ ಡಾ. ಮಂಜುನಾಥ್ ಅವರು ಹೇಳಿದ್ದರು. ಮಂಗಳವಾರ ಕೂಡ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂಬುದು ಅವರು ಭಾವನೆ. ಅದನ್ನು ಚುನಾವಣಾ ಆಯೋಗಕ್ಕೆ ಪತ್ರ ಬರೆಯುವ ಮೂಲಕ ವ್ಯಕ್ತಪಡಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಾಲ್ಮೀಕಿ ಸಮುದಾಯದ ಹಣ ವರ್ಗಾವಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಎಸ್ಸಿ-ಎಸ್ಟಿ ಅಭಿವೃದ್ಧಿ ನಿಗಮಕ್ಕೆ ಮೀಸಲಿಟಿರುವ ಹಣ ದುರುಪಯೋಗ ಆಗಿದೆ. ಇದರಲ್ಲಿ‌ ಸಚಿವರ ಭ್ರಷ್ಟಾಚಾರ ಎದ್ದು ಕಾಣುತ್ತಿದೆ. ಹೀಗಾಗಿ ಪ್ರಕರಣವನ್ನು ಸಿಬಿಐ‌ಗೆ ತನಿಖೆಗೆ ವಹಿಸಬೇಕು ಎಂಬುದು ನನ್ನ ಆಗ್ರಹ ಎಂದು ನಿಖಿಲ್ ಕುಮಾರಸ್ವಾಮಿ ಉತ್ತರಿಸಿದರು.

3ಕೆಆರ್ ಎಂಎನ್ 3.ಜೆಪಿಜಿ

ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ