ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ ಕೆ.ಎಸ್.ಈಶ್ವರಪ್ಪನವರಿಂದಾಗಿ ರಾಜ್ಯದ ಗಮನ ಸೆಳೆದು, ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದ್ದು, ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಫಲಿತಾಂಶದ ಚಿತ್ರಣ ಸ್ಪಷ್ಟವಾಗಲಿದೆ.ಜೆಡಿಎಸ್ ಬೆಂಬಲದೊಂದಿಗೆ ಬಿಜೆಪಿಯಿಂದ ಹಾಲಿ ಸಂಸದ ಬಿ. ವೈ.ರಾಘವೇಂದ್ರ, ಕಾಂಗ್ರೆಸ್‌ನಿಂದ ಗೀತಾ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಹಿರಿಯ ಬಿಜೆಪಿ ಮುಖಂಡ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸೇರಿ ಒಟ್ಟು 23 ಜನ ಕಣಕ್ಕೆ ಇಳಿದಿದ್ದರು. ಮೂರು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಬಿ. ವೈ.ರಾಘವೇಂದ್ರ ನಾಲ್ಕನೇ ಬಾರಿಯ ಗೆಲುವಿನ ಮೂಲಕ ಎಸ್.ಬಂಗಾರಪ್ಪ ದಾಖಲೆ ಸರಿಗಟ್ಟುವ ಉತ್ಸಾಹದಲ್ಲಿದ್ದಾರೆ. ತಮ್ಮ ಕುಟುಂಬದ ಮರ್ಯಾದೆ ಪ್ರಶ್ನೆ ಎಂದು ಒಂದು ಬಾರಿ ಸೋತಿರುವ ತಮ್ಮ ಸೋದರಿ ಗೀತಾ ಅವರನ್ನು ಪುನಃ ಕಣಕ್ಕೆ ಇಳಿಸಿ ಗೆಲುವು ದಾಖಲಿಸುವ ಮೂಲಕ ಬಂಗಾರಪ್ಪ ಸೋಲಿಗೆ ನ್ಯಾಯ ಒದಗಿಸಬೇಕು ಎಂಬ ಧಾವಂತದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕಾಂಗ್ರೆಸ್ ಗೆಲುವು ನಿಶ್ಚಿತ ಎಂಬ ನಂಬಿಕೆಯಲ್ಲಿದ್ದಾರೆ.
ಯಾರೇ ಗೆದ್ದರೂ ಕಡಿಮೆ ಅಂತರ ಎಂಬ ಮಾತು ಎಲ್ಲೆಡೆ ಕೇಳಿ ಬಂದ ಬೆನ್ನಲ್ಲೇ ತಮ್ಮ ತಮ್ಮ ಅಭ್ಯರ್ಥಿಗಳ ಪರ ಬೆಟ್ಟಿಂಗ್ ಕೂಡ ಜೋರಾಗಿಯೇ ನಡೆದಿತ್ತು.ಈ ನಡುವೆ ವಿವಿಧ ಮಾಧ್ಯಮ ಸಂಸ್ಥೆಗಳು ಹಾಗೂ ಖಾಸಗಿ ಏಜೆನ್ಸಿಗಳ ಮತಗಟ್ಟೆ ಸಮೀಕ್ಷೆಗಳು ಪ್ರಕಟಗೊಂಡಿವೆ. ಶಿವಮೊಗ್ಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಬಿಜೆಪಿ ಪಕ್ಷ ಮುನ್ನಡೆ ಸಾಧಿಸುವ ಅಭಿಪ್ರಾಯಗಳು ವ್ಯಕ್ತವಾಗಿವೆ.
ಬಿಜೆಪಿ ತನ್ನ ಸಂಘಟಿತ ಯತ್ನ, ಬೂತ್ ಮತ್ತು ಪೇಜ್ ಮಟ್ಟದಲ್ಲಿನ ಸಂಪರ್ಕ ಜಾಲದ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸನ್ನು ನಂಬಿಕೊಂಡಿತ್ತು. ಕಾಂಗ್ರೆಸ್ ಮಾತ್ರ ಗ್ಯಾರಂಟಿಯನ್ನೇ ಪ್ರಮುಖವಾಗಿ ನಂಬಿಕೊಂಡಿತ್ತು. ಜೊತೆಗೆ ಈಶ್ವರಪ್ಪ ಕಣಕ್ಕೆ ಇಳಿದಿದ್ದರ ಲಾಭ ತಮಗೆ ದೊರೆಯಬಹುದು ಎಂಬ ಒಂದು ಸಣ್ಣ ಆಸೆ ಸಹ ಸಹಜವಾಗಿಯೇ ಆ ಪಕ್ಷದ ಮುಖಂಡರಲ್ಲ ಇತ್ತು. ಈಶ್ವರಪ್ಪ ಸ್ಪರ್ಧಿಸುವ ನಿರ್ಧಾರ ಪ್ರಕಟಿಸಿದಾಗ ಯಾರೂ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಆ ಬಳಿಕ ಭರ್ಜರಿ ಪ್ರಚಾರದಲ್ಲಿ ತೊಡಗಿದಾಗ, ಎಲ್ಲರಿಗಿಂತ ಹೆಚ್ಚು ಬಿರುಸಿನ ಪ್ರಚಾರಕ್ಕೆ ಚಾಲನೆ ನೀಡಿದಾಗ ಅವರ ಸಭೆಗಳಿಗೆ ಸೇರುತ್ತಿದ್ದ ಜನಸ್ತೋಮ ಕಂಡು ಸಹಜವಾಗಿಯೇ ಉಳಿದ ಅಭ್ಯರ್ಥಿಗಳಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಈ ಜನಸ್ತೋಮ ಮತಗಳಾಗಿ ಪರಿವರ್ತನೆಯಾಗುವುದೇ ಎಂಬ ಪ್ರಶ್ನೆಗೆ ಮಂಗಳವಾರೇ ಉತ್ತರ ಸಿಗಲಿದೆ.ಬೆಟ್ಟಿಂಗ್ ಬಲು ಜೋರು
ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ, ವಿಜಯದ ನಗೆ ಬೀರುವವರು ಯಾರು? ಯಾವ್ಯಾವ ಅಸೆಂಬ್ಲಿ ಕ್ಷೇತ್ರಗಳಲ್ಲಿ ಯಾವ ಅಭ್ಯರ್ಥಿಗಳಿಗೆ ಮತಗಳಿಕೆಯಲ್ಲಿ ಮುನ್ನಡೆ – ಹಿನ್ನಡೆಯಾಗಲಿದೆ? ಎಂಬ ಲೆಕ್ಕಾಚಾರಗಳು ರಾಜಕೀಯ ವಲಯದಲ್ಲಿ ನಡೆಯಲಾರಂಭಿಸಿವೆ. ಈ ನಡುವೆ ಕೆಲ ರಾಜಕೀಯ ಕುತೂಹಲಿಗಳು, ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಸೋಲು – ಗೆಲುವಿನ ಮೇಲೆ ಬೆಟ್ಟಿಂಗ್ ಕೂಡ ಕಟ್ಟುತ್ತಿರುವ ಮಾಹಿತಿಗಳು ಕೇಳಿಬರುತ್ತಿವೆ.;Resize=(128,128))
;Resize=(128,128))
;Resize=(128,128))
;Resize=(128,128))