ಲೋಕ ಕದನದಲ್ಲಿ ಬೀಳೋರ್ಯಾರು, ಗೆಲ್ಲೋರ್ಯಾರು

| Published : Jun 04 2024, 12:30 AM IST

ಸಾರಾಂಶ

ಬೀದರ್ ಲೋಕಸಭಾ ಕ್ಷೇತ್ರದ ಮತ ಎಣಿಕೆ ಇಲ್ಲಿನ ಬಿವಿಬಿ ಕಾಲೇಜು ಕಟ್ಟಡದಲ್ಲಿ ಜೂ.4ರ ಬೆಳಗ್ಗೆ 8ಕ್ಕೆ ಆರಂಭವಾಗಲಿದ್ದು ಈ ಹಿನ್ನೆಲೆ ಜಿಲ್ಲಾಡಳಿತ ಸರ್ವ ಸಿದ್ಧತೆ ಮಾಡಿಕೊಂಡಿದೆ.

ಅಪ್ಪಾರಾವ್ ಸೌದಿ

ಕನ್ನಡಪ್ರಭ ವಾರ್ತೆ ಬೀದರ್‌

ದೇಶಾದ್ಯಂತ ಕಳೆದೆರಡು ತಿಂಗಳುಗಳಿಂದ ಕುತೂಹಲ ಕೆರಳಿಸಿದ್ದ ಲೋಕಸಭಾ ಚುನಾವಣಾ ಸಮರದಲ್ಲಿ ಬೀಳೋರ್ಯಾರು ಗೆಲ್ಲೋರ್ಯಾರು ಎಂಬ ಕುತೂಹಲಕ್ಕೆ ಇಂದು ಮಧ್ಯಾಹ್ನದ ಹೊತ್ತಿಗೆ ಸ್ಪಷ್ಟ ಉತ್ತರ ಸಿಗಲಿದೆ.

ಬೀದರ್ ಲೋಕಸಭಾ ಕ್ಷೇತ್ರದ ಮತ ಎಣಿಕೆ ಇಲ್ಲಿನ ಬಿವಿಬಿ ಕಾಲೇಜು ಕಟ್ಟಡದಲ್ಲಿ ಜೂ.4ರ ಬೆಳಗ್ಗೆ 8ಕ್ಕೆ ಆರಂಭವಾಗಲಿದ್ದು ಈ ಹಿನ್ನೆಲೆ ಜಿಲ್ಲಾಡಳಿತ ಸರ್ವ ಸಿದ್ಧತೆ ಮಾಡಿಕೊಂಡಿದೆ.

ಕಾಂಗ್ರೆಸ್ ಅಭ್ಯರ್ಥಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಪುತ್ರ ಸಾಗರ ಖಂಡ್ರೆ, ಹಾಲಿ ಸಂಸದ ಕೇಂದ್ರ ಸಚಿವ ಭಗವಂತ ಖೂಬಾ ಸೇರಿ ಒಟ್ಟು 18 ಅಭ್ಯರ್ಥಿಗಳ ಚುನಾವಣಾ ಭವಿಷ್ಯ ಹೊರಬರಲಿದೆ. ಇನ್ನು ಅಭ್ಯರ್ಥಿಗಳ್ಯಾರೂ ಬೇಡ ಎಂದು ನೋಟಾಗೆ ಎಷ್ಟು ಜನ ಮತದಾನ ಮಾಡಿದ್ದಾರೆ ಎಂಬುವದೂ ಸ್ಪಷ್ಟವಾಗುತ್ತದೆ.

ಕಳೆದ 2014ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಾಜಿ ಸಿಎಂ ದಿ.ಧರಂಸಿಂಗ್‌ ವಿರುದ್ಧ 92,222 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದ ಬಿಜೆಪಿ ಭಗವಂತ ಖೂಬಾ, 2019ರ ಚುನಾವಣೆಯಲ್ಲೂ ಅಂದು ಈಶ್ವರ ಖಂಡ್ರೆ ವಿರುದ್ಧ ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಜಯಗಳಿಸಿದ್ದರು. ಇದೀಗ ಹ್ಯಾಟ್ರಿಕ್‌ ಬಾರಿಸೋ ತವಕದಲ್ಲಿ ಮರು ಆಯ್ಕೆ ಬಯಸಿ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣಾ ಅಖಾಡಾಕ್ಕೆ ಇಳಿದಿದ್ದು ಪ್ರಸಕ್ತ ಚುನಾವಣೆಯಲ್ಲಿ ಮತದಾರನ ಕೈಪೆ ಅವರ ಮೇಲೆಷ್ಟು ಎಂಬುವದೂ ಈಗ ತಿಳಿಯಲಿದೆ.

ಈ ಹಿಂದಿನ 2014 ಮತ್ತು 2019ರ ಚುನಾವಣೆಗಿಂತಲೂ ಹೆಚ್ಚಿನ ಪ್ರಮಾಣದ ಮತದಾನ ಈ ಬಾರಿ ನಡೆದು ಚುನಾವಣಾ ಅಖಾಡಾ ಸಾಕಷ್ಟು ರಂಗೇರುವಂತೆ ಮಾಡಿದ್ದಂತೂ ನಿಜ. ಮತದಾನ ಮುಗಿದ ದಿನದಿಂದ ಇಲ್ಲಿಯವರೆಗೆ ಅಭ್ಯರ್ಥಿಗಳ ಸೋಲು ಗೆಲುವಿನ ಲೆಕ್ಕಾಚಾರ ಎಲ್ಲೆಡೆ ಬಲು ಜೋರು ಹಿಡಿದಿದ್ದು, ಇದಕ್ಕೆಲ್ಲ ಇದೀಗ ಉತ್ತರ ಸಿಗಲಿದೆ.

ಈ ಲೋಕಸಭಾ ಕ್ಷೇತ್ರ ಬೀದರ್‌ ಜಿಲ್ಲೆಯ ಬೀದರ್‌, ಬೀದರ್‌ ದಕ್ಷಿಣ, ಭಾಲ್ಕಿ, ಔರಾದ್‌, ಹುಮನಾಬಾದ್‌, ಬಸವಕಲ್ಯಾಣ ಸೇರಿ ಕಲಬುರಗಿ ಜಿಲ್ಲೆಯ ಚಿಂಚೋಳಿ ಹಾಗೂ ಆಳಂದ ವಿಧಾನಸಭಾ ಕ್ಷೇತ್ರ ಹೊಂದಿದ್ದು, ಇಲ್ಲಿ ಪಕ್ಷದಲ್ಲಿನ ಆಂತರಿಕ ಭಿನ್ನಮತ, ನಾಯಕರುಗಳ ಕೊರತೆ, ಕ್ಷೇತ್ರದ ಮೇಲಿನ ಹಿಡಿತ ಹೀಗೆಯೆ ಒಂದಿಲ್ಲೊಂದು ಸಮಸ್ಯೆಯಿಂದ ಬಳಲುತ್ತಿರುವ ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಚುನಾವಣಾ ಭವಿಷ್ಯ ನಿರ್ಧಾರವಾಗಲಿದೆ.

ಕ್ಷೇತ್ರ ಪುನರ್‌ವಿಂಗಡಣೆಗೂ ಮುನ್ನ ಬಿಜೆಪಿ ಭದ್ರ ಕೋಟೆಯಾಗಿದ್ದ ಈ ಕ್ಷೇತ್ರ 2008ರಲ್ಲಿ ಸಾಮಾನ್ಯ ಕ್ಷೇತ್ರವಾದ ನಂತರ ಕಾಂಗ್ರೆಸ್ ಅಧಿಪತ್ಯ ಸಾಧಿಸಿತ್ತಾದರೆ, ಕಳೆದ 2014 ಮತ್ತು 2019ರ ಚುನಾವಣೆಯಲ್ಲಿ ಈ ಕೋಟೆಯನ್ನು ಪುನಃ ವಶಕ್ಕೆ ತೆಗೆದುಕೊಳ್ಳಲು ಬಿಜೆಪಿ ಸಫಲವಾಗಿತ್ತು. ಇದೀಗ ಅದನ್ನು ಮುಂದುವರೆಸುವತ್ತ ಎದುರಾಳಿ ಕಾಂಗ್ರೆಸ್‌ಗೆ ಭಾರಿ ಪೈಪೋಟಿ ನೀಡಿದೆಯಾ ಎಂಬುವದಕ್ಕೆ ಉತ್ತರ ಸಿಗಲಿದೆ.

2019ರಲ್ಲಿ ಬೀದರ್‌ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 5,85,471 ಮತ ಪಡೆದು ಅಂದಿನ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಈಶ್ವರ ಖಂಡ್ರೆ (4,68,637) ವಿರುದ್ಧ 1,16,834 ಮತಗಳ ಅಂತರ ಜಯ ಕಂಡಿದ್ದ ಭಗವಂತ ಖೂಬಾ ಅವರೀಗ ಮರು ಆಯ್ಕೆ ಬಯಸಿ ಮತದಾರನ ಮುಂದೆ ನಿಂತಿದ್ದಾರೆ.ದರ್ಪದ ಆರೋಪಕ್ಕೆ ಖೂಬಾ ಗುರಿಯಾಗ್ತಾರಾ, ಯುವಕ ಎಂಬ ಹಿಂಜರಿಕೆಗೆ ಖಂಡ್ರೆ ಬೀಳ್ತಾರಾ:

ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಕಳೆದ ಬಾರಿ ಅಚ್ಚರಿಯಂಬಂತೆ ಭರ್ಜರಿ ಜಯ ದಾಖಲಿಸಿದ್ದರೆ ಈ ಬಾರಿಯೂ ಕ್ಷೇತ್ರದಲ್ಲಿನ ಅಭಿವೃದ್ಧಿ ಕಾರ್ಯಗಳು, ಮೋದಿ ಹವಾ ನಮ್ಮತ್ತ ಮತದಾರನನ್ನು ಸೆಳೆದುಕೊಡುವ ಭರವಸೆಯಿದೆ ಎಂಬ ವಾದ ಇವರದ್ದಾಗಿದ್ದರೂ ದರ್ಪದ ವರ್ತನೆ, ನಿರ್ಲಕ್ಷ್ಯತನದ ಆರೋಪಗಳಿಂದಾಗಿ ಈ ಬಾರಿ ಸುನಾಮಿಯಂತೆ ಕಾಡಿದ ಬಿಜೆಪಿ ಶಾಸಕರುಗಳ, ಪ್ರಮುಖ ಕಾರ್ಯಕರ್ತರು ಮತ್ತು ಮುಖಂಡರುಗಳು ವಿರೋಧಾಭಾಸ ಅವರ ಗೆಲುವಿನ ನಾಗಾಲೋಟ ಕಿತ್ತುಕೊಳ್ಳುತ್ತೇನೋ ಎಂಬ ಆತಂಕವನ್ನು ಪಕ್ಷದ ಮುಂದೆ ಬಂದಿದ್ದಂತೂ ನಿಜ.

ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಮತ್ತೊಮ್ಮೆ ಕಾಂಗ್ರೆಸ್‌ ಕೈ ಹಿಡಿಯುತ್ತವೆ ಎಂಬ ಭರವಸೆ, ಸ್ಥಳೀಯವಾಗಿ ಜಾತಿ ಮತಗಳ ಹಿಡಿತ, ಕಾಂಗ್ರೆಸ್‌ ಪರಂಪರಾಗತ ಮತಗಳ ಒಗ್ಗೂಡುವಿಕೆ ಜೊತೆ ಜೊತೆಗೆ ಬಿಜೆಪಿಯಲ್ಲಿನ ಭಾರಿ ಒಡಕು, ಹಾಲಿ ಸಂಸದ ಅಭ್ಯರ್ಥಿ ಭಗವಂತ ಖೂಬಾ ಕುರಿತಾಗಿ ಪ್ರಮುಖರ ವೈಮನಸ್ಸು ಕಾಂಗ್ರೆಸ್‌ಗೆ ಭಾರಿ ಪ್ಲಸ್‌ ಎಂಬ ಲೆಕ್ಕಾಚಾರವೂ ಇದೆ.

ಇತರೆ ಪಕ್ಷಗಳು ಮತ್ತು ಪಕ್ಷೇತರರು ಹೆಚ್ಚಾಗಿರುವ ಈ ಕ್ಷೇತ್ರದಲ್ಲಿ ಯಾವ ಪ್ರಮುಖ ಪಕ್ಷದ ಮತಗಳು ಹೋಳಾಗಲಿವೆ ಎಂಬ ಲೆಕ್ಕಾಚಾರವೂ ಅಭ್ಯರ್ಥಿಗಳನ್ನು ಕಾಡಲಾರಂಭಿಸಿದೆಯಾದರೆ ಇಲ್ಲೇನಿದ್ದರೂ ನೇರ ಸ್ಪರ್ಧೆ ಖಚಿತ.