ಸಾರಾಂಶ
ಪಿಎಸ್‌ಐ ಕುಟುಂಬಕ್ಕೆ ಸಾಂತ್ವನ ಹೇಳಿದ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಆರೋಪ
ಕನ್ನಡಪ್ರಭ ವಾರ್ತೆ ಕಾರಟಗಿಪಿಎಸ್ಐ ಸಾವಿಗೆ ಕಾರಣರಾಗಿರುವ ಯಾದಗಿರಿ ಶಾಸಕ ಮತ್ತು ಅವರ ಪುತ್ರನನ್ನು ಮೊದಲು ಬಂಧಿಸಿ ನಂತರ ಮೃತ ಪಿಎಸ್‌ಐ ಕುಟುಂಬವನ್ನು ರಾಜ್ಯ ಗೃಹ ಸಚಿವರು ಭೇಟಿ ಮಾಡಲಿ, ಇವರಿಬ್ಬರ ಬಂಧನಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ದಲಿತ ಸಂಘಟನೆಗಳು ಹೋರಾಟ ಮಾಡಲಿ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಕರೆ ನೀಡಿದರು.
ಇತ್ತೀಚೆಗೆ ಸಾವನ್ನಪ್ಪಿದ ಪಿಎಸ್‌ಐ ಪರುಶರಾಮ ಅವರ ಸೋಮನಾಳ ಗ್ರಾಮದಲ್ಲಿ ಕುಟುಂಬವನ್ನು ಮಂಗಳವಾರ ಭೇಟಿಯಾಗಿ ಸಾಂತ್ವನ ಹೇಳಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಲಂಚಕ್ಕೆ ಬೇಡಿಕೆಯಿಟ್ಟಿದ್ದೇ ಪರುಶರಾಮನ ಸಾವಿಗೆ ಪ್ರಮುಖ ಕಾರಣವಾಗಿದೆ. ಆದರೆ, ಆ ಸಾವಿಗೆ ಕಾರಣರಾದ ಶಾಸಕ ಚನ್ನಾರೆಡ್ಡಿ ಹಾಗೂ ಅವರ ಮಗನ ಬೆಂಬಲ, ರಕ್ಷಣೆಗೆ ಎಐಸಿಸಿ ನಿಂತಿರುವುದು ವಿಪರ್ಯಾಸ. ಆದರೆ, ನೀವು ರಕ್ಷಣೆಗೆ ನಿಂತಿರಬಹುದು. ಆದರೆ ನಾವು ಮಾತ್ರ ಅವರ ಕುಟುಂಬದ ಜೊತೆಗಿದ್ದು, ಅಪರಾಧಿ ಸ್ಥಾನದಲ್ಲಿರುವ ಚನ್ನಾರೆಡ್ಡಿ ಮತ್ತು ಆತನ ಮಗನ ಬಂಧನವಾಗುವವರೆಗೆ ರಾಜ್ಯಾದ್ಯಂತ ದಲಿತ ಸಂಘಟನೆಗಳು ಬೀದಿಗೆ ಇಳಿದು ಹೋರಾಟ ಮಾಡಲಿವೆ ಎಂದರು.
ರಾಜ್ಯದ ಎಲ್ಲ ದಲಿತ ಸಂಘಟನೆಗಳಿಗೆ ಇವತ್ತೇ ನಾನು ಹೋರಾಟಕ್ಕೆ ಕರೆ ಕೊಡುತ್ತಿರುವುದಾಗಿ ತಿಳಿಸಿದರು. ಪರಶುರಾಮನ ಮೇಲೆ ಎಲ್ಲೂ ಒಂದು ಕಪ್ಪು ಚುಕ್ಕೆ ಇರಲಿಲ್ಲ. ಅವರಿಗೆ ಐಎಎಸ್ ಅಧಿಕಾರಿ ಆಗುವ ಕನಸು ಇತ್ತು. ಆದರೆ, ಈ ಸಮಾಜ, ಈ ವ್ಯವಸ್ಥೆ ಆತನನ್ನು ಬಲಿ ಪಡೆಯಿತು. ಸ್ವಾತಂತ್ರ್ಯ ಬಂದು ೭೫ ವರ್ಷಗಳು ಉರುಳಿದರೂ ಕೆಳ ಸಮುದಾಯದವರಿಗೆ ಈ ರೀತಿಯ ಘಟನೆಗಳಿಂದ ಮಾತ್ರ ಬಿಡುಗಡೆ ಇಲ್ಲವಾಗಿದೆ. ಇನ್ನು ಅಹಿಂದ ಪರ, ದಲಿತ, ದಮನಿತರ ಪರ ಎನ್ನುವ ಕಾಂಗ್ರೆಸ್ ಸರ್ಕಾರದಲ್ಲಿ ದಲಿತರ ಮಾರಣ ಹೋಮ ನಡೆಯುತ್ತಿದೆ. ಅದಕ್ಕೆ ಸಾಕ್ಷಿ ವಾಲ್ಮೀಕಿ ನಿಗಮದ ಹಗರಣ. ಅಲ್ಲಿಯೂ ಕೂಡಾ ನಮ್ಮ ದಲಿತ ಸಹೋದರನೇ ಮರಣ ಹೊಂದಿದ. ಇವತ್ತು ಪರಶುರಾಮನ ಸರದಿ ಎಂದು ವಿಷಾಧಿಸಿದರು.ಪಿಎಸ್‌ಐ ಪರುಶರಾಮ ಕಳೆದ ಏಳು ತಿಂಗಳ ಹಿಂದೆ ಶಾಸಕ ಚನ್ನಾರೆಡ್ಡಿಗೆ ₹೩೦ ಲಕ್ಷ ದುಡ್ಡು ಕೊಟ್ಟಿರೋದನ್ನ ನನ್ನ ಬಳಿ ಹೇಳಿದ್ದ. ಆಗ ನಾನು ಬೈದಿದ್ದೆ. ನನಗೆ ಹೇಳಬಾರದೇ ಎಂದು ತಿಳಿಸಿದ್ದೆ. ಆಗಲೂ ಹೇಳಲಿಲ್ಲ. ಈಗಲೂ ಅಷ್ಟೇ ಏಳು ತಿಂಗಳಿಗೆ ಎತ್ತಂಗಡಿ ಮಾಡಿದ್ದಾರೆ, ಮುಂದುವರೆಯಬೇಕಿದ್ರೆ ₹೩೦ ಲಕ್ಷ ಕೊಡಿ ಅಂತ ಹೇಳಿದ್ದಾರೆ ಆಗ, ಏಳು ತಿಂಗಳಿಗೆ ವರ್ಗಾವಣೆ ಪ್ರಶ್ನೆ ಮಾಡಿದ್ದಕ್ಕೆ ಜಾತಿ ನಿಂದನೆ ಮಾಡಿದ್ದಾರೆ. ಇದಕ್ಕೆ ಮನನೊಂದು ನನ್ನ ಸಹೋದರ ಇವತ್ತು ನಮ್ಮನ್ನೆಲ್ಲ ಬಿಟ್ಟುಹೋಗಿದ್ದಾನೆ. ಆದರೆ ಎರಡನೇ ಬಾರಿ ದುಡ್ಡು ಕೇಳಿದಾಗಲಾದರೂ ನನ್ನ ಹತ್ತಿರ ಹೇಳಿದ್ದರೆ ಆತನಿಗಾಗಿ ನಾನು ಧ್ವನಿ ಎತ್ತುತ್ತಿದ್ದೆ ಎಂದು ನಾರಾಯಣಸ್ವಾಮಿ ಹೇಳಿದರು.
ಈಗ ಚಿರನಿದ್ರೆಗೆ ಜಾರಿದ್ದಾನೆ. ಆತನ ಸಾವಿಗೆ ಕಾರಣರಾದವರ ಮೇಲೆ ಅಟ್ರಾಸಿಟಿ ಕೇಸ್ ದಾಖಲಾಗಿದೆ. ಆದರೆ ಇದುವರೆಗೂ ಬಂಧನ ಆಗಿಲ್ಲ. ಖುದ್ದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ, ಗೃಹ ಸಚಿವ ಪರಮೇಶ್ವರ ಅದೆಲ್ಲಕ್ಕಿಂತ ಹೆಚ್ಚಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶಾಸಕರನ್ನು ಹಾಗೂ ಅವರ ಮಗನನ್ನ ರಕ್ಷಣೆ ಮಾಡುತ್ತಿದ್ದಾರೆ. ಅವರನ್ನು ಕರೆದು ಪಕ್ಕದಲ್ಲಿ ಕೂರಿಸಿಕೊಂಡು ಪರಶುರಾಮ ಕುಟುಂಬಕ್ಕೆ ನಿಮ್ಮ ಹಿಂದೆ ನಾವಿದ್ದೇವೆ ಎಂದು ಮೊಸಳೆ ಕಣ್ಣೀರು ಸುರಿಸುತ್ತಾರೆ. ಈ ರೀತಿಯ ನೀವು ನೊಂದ ಕುಟುಂಬಕ್ಕೆ ಸಾಂತ್ವನ ಹೇಳುವುದು ಬಿಟ್ಟು ಕೂಡಲೇ ಅಪರಾಧಿಗಳನ್ನು ಬಂಧಿಸಲೇಬೇಕು. ಇನ್ನು ಪರುಶರಾಮನ ಹೆಂಡತಿ ಬಿಇ ಪದವೀಧರೆಯಾಗಿದ್ದು, ಅವಳಿಗೆ ಉನ್ನತ ಹುದ್ದೆ ಕಲ್ಪಿಸಿಕೊಡಬೇಕು. ನಿಮ್ಮ ತನಿಖೆ ಮೇಲೆ ನಮಗೆ ವಿಶ್ವಾಸ ಇಲ್ಲ. ಆ ಕಾರಣಕ್ಕೆ ಈ ಪ್ರಕರಣವನ್ನು ಸಿಬಿಐಗೆ ಕೊಡಬೇಕು ಎಂಬುವುದು ನಮ್ಮ ಆಗ್ರಹವಾಗಿದೆ ಎಂದರು.ಈ ಸಂದರ್ಭದಲ್ಲಿ ಕರ್ನಾಟಕ ಪೊಲೀಸ್ ಮಹಾಸಂಘದ ಅಧ್ಯಕ್ಷ ವಿ. ಶಶಿಧರ್, ನಿವೃತ್ತ ಐಜಿಪಿ ಭಾಸ್ಕರ್‌ರಾವ್, ಮಾಜಿ ಶಾಸಕರಾದ ಬಸವರಾಜ ದಢೇಸೂಗೂರು, ಪರಣ್ಣ ಮುನವಳ್ಳಿ ಪ್ರಮುಖರಾದ ಬಸವರಾಜ ಕ್ಯಾವಟರ್, ವೀರೇಶ್ ಸಾಲೋಣಿ, ನಾಗರಾಜ ಬಿಲ್ಗಾರ್, ಮಂಜುನಾಥ್ ಮಸ್ಕಿ, ಗುರುಸಿದ್ದಪ್ಪ ಯರಕಲ್ ಇತರರಿದ್ದರು.