ಧಾರವಾಡ: ಪ್ರತ್ಯೇಕ ಮಹಾನಗರ ಪಾಲಿಕೆಯ ಸತ್ಯಪ್ರತಿಪಾದನೆ ಸತ್ಯಾಗ್ರಹ ತೀವ್ರಗೊಂಡು, 10ನೇ ದಿನಕ್ಕೆ ಕಾಲಿಟ್ಟಿದೆ. ಭಾನುವಾರ ಪಾಲಿಕೆಯ ಕಾಂಗ್ರೆಸ್ ಸದಸ್ಯರು ರಾಜೀನಾಮೆ ಅಸ್ತ್ರ ಪ್ರಯೋಗಿಸಿ, ರಾಜ್ಯಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹು-ಧಾ-74ರ ಕ್ಷೇತ್ರದ ಕವಿತಾ ಕಬ್ಬೇರ, ಶಂಭು ಸಾಲಮನಿ, ಡಾ. ಮಯೂರ ಮೋರೆ, ಪರವೀನ ದೇಸಾಯಿ, ಗಣೇಶ ಮುಧೋಳ, ಬಿಲಕಿಸಬಾನು ಮುಲ್ಲಾ, ಮಂಜುನಾಥ ಬಡಕುರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿದರು.ಹಾಗೆಯೇ, ಗ್ರಾಮೀಣ-71ರ ಕ್ಷೇತ್ರದ ರಾಜಶೇಖರ ಕಮತಿ, ಸೂರವ್ವ ಪಾಟೀಲ, ದಿಲಶಾದಬೇಗಂ ನದಾಫ್, ದೀಪಾ ನೀರಲಕಟ್ಟಿ, ಪ್ರಕಾಶ ಘಾಟಗೆ ಅವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಏಗನಗೌಡರ ಕೈಗೆ ರಾಜೀನಾಮೆ ಪತ್ರ ಸಲ್ಲಿಸಿದರು.
ಧಾರವಾಡದ ಸ್ವಾಭಿಮಾನ ಮತ್ತು ಹಿತರಕ್ಷಣೆ ನಮಗೆ ಮುಖ್ಯ. ಪ್ರತ್ಯೇಕ ಪಾಲಿಕೆ ರಚನೆ ಆಗದಿದ್ದರೆ ನಮ್ಮ ಸ್ಥಾನಗಳಿಗೆ ಅರ್ಥವಿಲ್ಲ. ಸರ್ಕಾರದ ಗಮನ ಸೆಳೆಯಲು ಮತ್ತು ಹೋರಾಟದ ಬಿಸಿ ಮುಟ್ಟಿಸಲು ರಾಜೀನಾಮೆ ನೀಡಿದ್ದಾಗಿ ಸದಸ್ಯರು ಹೇಳಿದರು.ಮಲ್ಲಿಕಾರ್ಜುನ ಶ್ರೀ ಬೆಂಬಲ
ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳು, ಕ್ರಿಶ್ಚಿಯನ್ ಕ್ಯಾಥೋಲಿಕ್ ಸಮಾಜ ಬಾಂಧವರು ಹಾಗೂ ಹೋಲಿ ಕ್ರಾಸ್ ಚರ್ಚ್ ಹೋರಾಟಕ್ಕೆ ಸಂಪೂರ್ಣ ಬೆಂಬಲ ಸೂಚಿಸಿ, ಅಭಿವೃದ್ಧಿ ಮತ್ತು ಆಡಳಿತ ದೃಷ್ಟಿಯಿಂದ ಪ್ರತ್ಯೇಕ ಪಾಲಿಕೆ ರಚಿಸುವಂತೆ ಒತ್ತಾಯಿಸಿತು.
ಪ್ರತ್ಯೇಕ ಪಾಲಿಕೆ ರಚನೆಗೆ ಒಕ್ಕೊರಲಿನ ಒತ್ತಾಯ ಹೇರಲು ಪಾಲಿಕೆ ಸದಸ್ಯರಾದ ದೀಪಾ ನೀರಲಕಟ್ಟಿ ಮತ್ತು ಶಿವಶಂಕರ ಹಂಪಣ್ಣವರ, ಕಾರ್ಯಕರ್ತರು ಅನೇಕ ರೈತರು ತಮ್ಮ ಎತ್ತು, ಚಕ್ಕಡಿಯೊಂದಿಗೆ ಆಗಮಿಸಿ, ಈ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಹುಬ್ಬಳ್ಳಿ-ಧಾರವಾಡ ಒಂದೇ ಪಾಲಿಕೆಯಾಗಿದ್ದರೂ, ಅಭಿವೃದ್ಧಿ ವಿಷಯದಲ್ಲಿ ಧಾರವಾಡಕ್ಕೆ ನಿರಂತರವಾಗಿ ಮಲತಾಯಿ ಧೋರಣೆ ತೋರಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಹೋರಾಟ ಸಮಿತಿ ಪ್ರಮುಖರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಧಾರವಾಡದ ಸಾರ್ವಜನಿಕರು ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಪ್ರತ್ಯೇಕ ಪಾಲಿಕೆ ಘೋಷಿಸಬೇಕು ಎಂದು ಆಗ್ರಹಿಸಿದರು.