ಸಾರಾಂಶ
ಹುಬ್ಬಳ್ಳಿ: ರಾಜ್ಯ ಸರ್ಕಾರವನ್ನು ನಾವು ಅಭದ್ರಗೊಳಿಸುತ್ತಿಲ್ಲ ಅವರ ಶಾಸಕರೇ ಆ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಈ ಕುರಿತು ಮಾತನಾಡಿ, ಸಚಿವ ಸಂತೋಷ ಲಾಡ್ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದರು.
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ನಡುವೆ ಈಗಾಗಲೇ ಜಗಳ ನಡೆಯುತ್ತಿದೆ. ಹೀಗಾಗಿ ಬೇರೆಯವರು ಅಭದ್ರಗೊಳಿಸುವ ಮಾತೇ ಬರುವುದಿಲ್ಲ. ಅವರೇ ಅಭದ್ರಗೊಳಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ಸಿನವರೇ ಬಡಿದಾಡಿಕೊಂಡು ಬಿಜೆಪಿಯವರ ಮೇಲೆ ಹಾಕುತ್ತಿದ್ದಾರೆ ಎಂದರು.
ಸಚಿವ ಸಂತೋಷ ಲಾಡ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಜೋಶಿ ಅವರನ್ನು ಬೈಯ್ಯಲು ಹೇಳಿದ್ದಾರೆ. ಅವರು ನಮ್ಮನ್ನ ಬಯ್ಯದೇ ಇದ್ದರೆ ಸಚಿವ ಸ್ಥಾನದಿಂದ ಕೆಳಗಿಳಿಸುವ ಭಯ ಹಾಕಿದ್ದಾರೆ.
ಹಾಗಾಗಿ ಲಾಡ್ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಅಷ್ಟೆ. ಹಿಂದುತ್ವ ಸೇರಿದಂತೆ ಜಾತೀಯತೆ ಬಗ್ಗೆ ಕಾಂಗ್ರೆಸ್ಸಿನವರಿಗೆ ಒಳ್ಳೆಯ ಅಭಿಪ್ರಾಯ ಇಲ್ಲ ಎಂದರು.
ನಮಗೆ ದೇಶ ಅಭಿವೃದ್ಧಿ ಆಗಬೇಕು, ಮುಂದುವರಿಯಬೇಕೆಂಬ ಅಭಿಮಾನವಿದೆ. ಆದರೆ, ಕಾಂಗ್ರೆಸ್ಸಿನಲ್ಲಿ ಈ ಮನಸ್ಥಿತಿ ಇಲ್ಲ. ಅವರ ನೀತಿಗಳೇ ವಿಚಿತ್ರವಾಗಿವೆ. ಈಗಾಗಲೇ ಇದಕ್ಕೆ ಜನತೆ ಉತ್ತರ ಕೊಟ್ಟಿದ್ದಾರೆ. ಮುಂದೆಯೂ ಕೊಡುತ್ತಾರೆ ಎಂದರು.
ಯಾರು ಅನ್ಯಾಯ ಮಾಡಿದ್ದಾರೆ: ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯದ ಕುರಿತು ಮಾತನಾಡಿದ ಜೋಶಿ, ಮೊದಲು ರಾಜ್ಯಕ್ಕೆ ₹60 ಸಾವಿರ ಕೋಟಿ ಅನುದಾನ ಬರುತ್ತಿತ್ತು. ಈಗ ₹2.60 ಲಕ್ಷ ಕೋಟಿ ಅನುದಾನ ಬರುತ್ತಿದೆ.
ಯುಪಿಎ ಕಾಲದಲ್ಲಿ ತೆರಿಗೆ ₹81 ಸಾವಿರ ಕೋಟಿ ಬರುತ್ತಿತ್ತು. ಈಗ ₹2.51 ಲಕ್ಷ ಕೋಟಿ ಬರುತ್ತಿದೆ. ಯಾವುದು ಅನ್ಯಾಯ ಎಂಬುದನ್ನು ಕಾಂಗ್ರೆಸ್ ಹೇಳಲಿ.
ಹೆಚ್ಚು ರಸ್ತೆ, ರೈಲು, ರೈತರಿಗೆ ಯೋಜನೆಗಳನ್ನು ನಾವು ಕೊಟ್ಟಿದ್ದೇವೆ. ಇಂತಹ ಹಲವು ಉದಾಹರಣೆಗಳನ್ನು ನಾನು ನೀಡುವೆ ಎಂದರು.
ಅನುದಾನ ನೀಡಲು ನಾವು ಸಿದ್ಧ: ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಇವರ ಶಾಸಕರೇ 50 ಪ್ರಸೆಂಟ್ ಕಮೀಷನ್ ಎಂದು ಹೇಳುತ್ತಿದ್ದಾರೆ.
ಕೇಂದ್ರದಿಂದ ನೀಡಿರುವ ಅನುದಾನವನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ಬಳಸುತ್ತಿಲ್ಲ. ಇವರು ಕೆಲಸ ಮಾಡಿದರೆ ಕೇಂದ್ರದಿಂದ ಅನುದಾನ ನೀಡಲು ಸಿದ್ಧವಿದೆ ಎಂದರು.