ಸಾಮರಸ್ಯ ಕದಡುವ ಕೆಲಸ ಮಾಡುತ್ತಿರುವ ಕಾಂಗ್ರೆಸ್‌ -ಸಂಸದ ಬಸವರಾಜ ಬೊಮ್ಮಾಯಿ

| Published : Oct 29 2024, 12:52 AM IST

ಸಾಮರಸ್ಯ ಕದಡುವ ಕೆಲಸ ಮಾಡುತ್ತಿರುವ ಕಾಂಗ್ರೆಸ್‌ -ಸಂಸದ ಬಸವರಾಜ ಬೊಮ್ಮಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಸಮುದಾಯಗಳ ನಡುವೆ ಸಾಮರಸ್ಯ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಹಾವೇರಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಸಮುದಾಯಗಳ ನಡುವೆ ಸಾಮರಸ್ಯ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.ಶಿಗ್ಗಾಂವಿ ತಾಲೂಕಿನ ಹುರುಳಿಕುಪ್ಪಿ ಗ್ರಾಮದಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರವಾಗಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು‌.

ನಾನು ವಿಧಾನಪರಿಷತ್ ಸದಸ್ಯನಿದ್ದಾಗಿನಿಂದ ಹುರುಳಿಕುಪ್ಪೆ ಗ್ರಾಮದೊಂದಿಗೆ ಸಂಪರ್ಕ ಇದೆ. ಈ ಊರಲ್ಲಿ ಎಲ್ಲ ಸಮುದಾಯದವರು ಒಗ್ಗಟ್ಟಿನಿಂದ ಇದ್ದಾರೆ‌. ಬೀರಲಿಂಗೇಶ್ವರ ಸಮುದಾಯ ಭವನವನ್ನು ಸಂಪೂರ್ಣ ಮಾಡಿಕೊಡುವ ಜವಾಬ್ದಾರಿ ನನ್ನದು. ಎಸ್ಸಿ, ಎಸ್ಟಿ ಭೋವಿ ಸಮುದಾಯದ ಬೇಡಿಕೆ ಇದೆ. ಅದೆಲ್ಲವನ್ನು ಮಾಡುತ್ತೇನೆ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಸಮುದಾಯಗಳ ನಡುವಿನ ಸಾಮರಸ್ಯ ಕೆಡಿಸುವ ಕೆಲಸ ಮಾಡಲಾಗುತ್ತಿದೆ. ಪೊಲೀಸ್‌ ಠಾಣೆಗಳ ಮೂಲಕ ಆಡಳಿತ ನಡೆಸಲಾಗುತ್ತಿದೆ. ನಾನು ಕಳೆದ ಹದಿನೈದು ವರ್ಷಗಳಿಂದ ಈ ಕ್ಷೇತ್ರದಲ್ಲಿ ಯಾವುದೇ ಕೋಮು ಸಂಘರ್ಷ ಉಂಟಾಗದಂತೆ ನೋಡಿಕೊಂಡಿದ್ದೇನೆ. ಊರಿನ ಸಮಸ್ಯೆಗಳನ್ನು ಊರಲ್ಲಿಯೇ ಬಗೆ ಹರಿಸುವ ಕೆಲಸ ಮಾಡಿದ್ದೇನೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಎಲ್ಲ ಸಮುದಾಯಗಳ ನಡುವೆ ಸಾಮರಸ್ಯ ಮುಂದುವರಿಯಲು ಭರತ್ ಬೊಮ್ಮಾಯಿಯನ್ನು ಗೆಲ್ಲಬೇಕು. ಎಲ್ಲರೂ ಸೇರಿ ಒಗ್ಗಟ್ಟಿನಿಂದ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು. ಈ ಕ್ಷೇತ್ರದ ಸಿಎಂ ಆಗಿ ಕೆಲಸ ಮಾಡುವ ಸೌಭಾಗ್ಯ ನೀವು ಕೊಟ್ಟಿದ್ದೀರಿ, ನಾನು ಸಿಎಂ ಆಗಿ ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಮಾಡಿದೆ. ಜನಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಜಮೀನು ಅಷ್ಟೆ ಇದೆ. ಹೀಗಾಗಿ ಕೃಷಿ ಮೇಲಿನ ಅವಲಂಬನೆ ಕಡಿಮೆ ಮಾಡಲು ರೈತರ ಮಕ್ಕಳು ಉನ್ನತ ಶಿಕ್ಷಣ ಪಡೆದು ಬೇರೆ ಉದ್ಯೋಗ ಮಾಡಲು ಅನುಕೂಲವಾಗಲು ವಿದ್ಯಾನಿಧಿ ಯೋಜನೆ ಮಾಡಿದೆ. ಪ್ರವಾಹ ಬಂದಾಗ ಎರಡು ಪಟ್ಟು ಪರಿಹಾರ ನೀಡಿದ್ದೇವು. ಆದರೆ, ಈಗಿನ ಸರ್ಕಾರ ಬರಪರಿಹಾರ ಪ್ರವಾಹ ಪರಿಹಾರ ನೀಡುತ್ತಿಲ್ಲ. ಸರ್ಕಾರ ಜನರ ಪರ ಕೆಲಸ ಮಾಡುತ್ತಿಲ್ಲ ಎಂದು ಹೇಳಿದರು. ಭರತ್ ಬೊಮ್ಮಾಯಿಗೆ ಪಕ್ಷದ ನಾಯಕರು ಟಿಕೆಟ್ ನೀಡಿದ್ದಾರೆ.‌ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಮುಂದುವರಿಯಬೇಕು. ಅದಕ್ಕಾಗಿ ಭರತ್ ಬೊಮ್ಮಾಯಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಕ್ಷೇತ್ರದ ಜನರಿಗೆ ಅಪಮಾನ ಮಾಡುತ್ತಿರುವ ಕೈ ಅಭ್ಯರ್ಥಿ ಶಿಗ್ಗಾಂವಿ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಬಿಜೆಪಿ ಅಲೆ ಕಾಣಿಸುತ್ತಿದೆ. ಜನರು ಸ್ವಯಂ ಪ್ರೇರಿತರಾಗಿ ಪ್ರಚಾರ ಮಾಡುತ್ತಿದ್ದಾರೆ. ಭರತ್ ಪರವಾಗಿ ಯುವಕರು ಪ್ರಚಾರ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಶಿಗ್ಗಾಂವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ನಾಲ್ಕೈದು ದಿನದಲ್ಲಿ ಮೊದಲ ಹಂತದ ಪ್ರಚಾರ ಕಾರ್ಯ ಮುಕ್ತಾಯವಾಗಲಿದ್ದು, ದೀಪಾವಳಿ ನಂತರ ರಾಜ್ಯ ನಾಯಕರು ಪ್ರಚಾರದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಹೇಳಿದರು. ಬಸವರಾಜ ಬೊಮ್ಮಾಯಿಯವರು ಜನರಿಗೆ ಹಣ ಹೆಂಡ ಹಂಚಿ ಚುನಾವಣೆ ಗೆಲ್ಲುತ್ತಾರೆ ಎಂಬ ಕಾಂಗ್ರೆಸ್ ಅಭ್ಯರ್ಥಿಯ ಆರೋಪಕ್ಕೆ ಪ್ರತಿಕ್ರಿಯಿಸಿ ಅವರು, ಸೋಲನ್ನು ಒಪ್ಪಿಕೊಳ್ಳುತ್ತಿದ್ದಾರೆ. ಶಿಗ್ಗಾಂವಿ-ಸವಣೂರು ಜನರು ಸ್ವಾಭಿಮಾನಿಗಳು, ಪ್ರಜ್ಞಾವಂತರಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅವರಿಗೆ ಅವಮಾನ ಮಾಡುತ್ತಿದ್ದಾರೆ‌. ಕಾಂಗ್ರೆಸ್ ಪಕ್ಷದವರು ದೊಡ್ಡ ಪ್ರಮಾಣದಲ್ಲಿ ಹಣ ಹೆಂಡ ಖರ್ಚು ಮಾಡುವವರಿದ್ದಾರೆ. ಹಣ ಹೆಂಡ ಹೇಗೆ ಬರುತ್ತಿದೆ? ಎಲ್ಲಿ ಬರುತ್ತಿದೆ? ಎಂದು ಎಲ್ಲವೂ ಗೊತ್ತಿದೆ‌. ಮಂತ್ರಿಗಳು, ಶಾಸಕರು ಚುನಾವಣೆಗೆ ಬರಿಕೈಯಲ್ಲಿ ಸುಮ್ಮನೇ ಬರುತ್ತಾರಾ ಎಂದು ಪ್ರಶ್ನಿಸಿದರು.