ರಾಯಚೂರು ಲೋಕಸಭಾ ಕ್ಷೇತ್ರ: ಕುಮಾರ ನಾಯಕಗೆ ಟಿಕೆಟ್‌

| Published : Mar 22 2024, 01:02 AM IST

ರಾಯಚೂರು ಲೋಕಸಭಾ ಕ್ಷೇತ್ರ: ಕುಮಾರ ನಾಯಕಗೆ ಟಿಕೆಟ್‌
Share this Article
  • FB
  • TW
  • Linkdin
  • Email

ಸಾರಾಂಶ

ನಿವೃತ್ತ ಐಎಎಸ್‌ ಅಧಿಕಾರಿಗೆ ಕಾಂಗ್ರೆಸ್ ಹೈಕಮಾಂಡ್‌ ಮಣೆ. ರಾಜ್ಯದ ಕಾಂಗ್ರೆಸ್ ಮುಖಂಡರು ಪಕ್ಷದಿಂದ ಅಸಂಭವನೀಯ ಪಟ್ಟಿ ಸಿದ್ಧಪಡಿಸಿದ ಸಮಯದಲ್ಲಿಯೇ ಜಿ.ಕುಮಾರ ನಾಯಕರ ಏಕೈಕ ಹೆಸರನ್ನು ಶಿಫಾರಸು ಮಾಡಿದ್ದರು.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ನಿವೃತ್ತ ಐಎಎಸ್‌ ಅಧಿಕಾರಿಗೆ ಜಿ.ಕುಮಾರ ನಾಯಕರಿಗೆ ಕಾಂಗ್ರೆಸ್‌ ಎರಡನೇ ಪಟ್ಟಿಯಲ್ಲಿ ಟಿಕೆಟ್‌ ಅಧಿಕೃತವಾಗಿ ಘೋಷಣೆಯಾಗಿದೆ.

ನಿವೃತ್ತ ಐಎಎಸ್‌ ಅಧಿಕಾರಿಗೆ ಅವಕಾಶ: ಕಾಂಗ್ರೆಸ್‌ ಭದ್ರಕೋಟೆ ಎಂದೇ ಹೆಸರು ವಾಸಿಯಾಗಿರುವ ರಾಯಚೂರು ಲೋಕಸಭಾ ಕ್ಷೇತ್ರದಿಂದ ಈ ಬಾರಿ ನಿವೃತ್ತ ಐಎಎಸ್‌ ಅಧಿಕಾರಿಗೆ ಜಿ.ಕುಮಾರ ನಾಯಕರಿಗೆ ಅವಕಾಶ ದೊರಕಿದೆ. ರಾಜ್ಯದ ಕಾಂಗ್ರೆಸ್ ಮುಖಂಡರು ಪಕ್ಷದಿಂದ ಅಸಂಭವನೀಯ ಪಟ್ಟಿ ಸಿದ್ಧಪಡಿಸಿದ ಸಮಯದಲ್ಲಿಯೇ ಜಿ.ಕುಮಾರ ನಾಯಕರ ಏಕೈಕ ಹೆಸರನ್ನು ಶಿಫಾರಸು ಮಾಡಿದ್ದರು. ಇದೀಗ ಅವರಿಗೆ ಟಿಕೆಟ್‌ ಘೋಷಣೆಯಾಗಿದ್ದು, ಜಿ.ಕುಮಾರ ನಾಯಕ ಅವರೊಂದಿಗೆ ರವಿ ಪಾಟೀಲ್‌, ದೇವಣ್ಣ ನಾಯಕ ಸೇರಿ ಇತರರು ಪೈಪೋಟಿಯಲ್ಲಿದ್ದರು. ಆದರೂ ಸಹ ಹೈಕಮಾಂಡ್‌ ನಿವೃತ್ತ ಐಎಎಸ್‌ ಅಧಿಕಾರಿಗೆ ಅವಕಾಶ ನೀಡುವುದರ ಮುಖಾಂತರ ವಿಶೇಷ ಪ್ರಯತ್ನಕ್ಕೆ ಕೈ ಹಾಕಿದೆ.

ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆಯ ಗೊಂದಲದಲ್ಲಿ ಮುಳುಗಿದ್ದರಿಂದ ಟಿಕೆಟ್ ಯಾರಿಗೆ ಎನ್ನುವ ಕುತೂಲಹವು ಬೆಟ್ಟದಷ್ಟು ಹೆಚ್ಚಾಗಿ ಕ್ಷೇತ್ರದಲ್ಲಿ ಕೊನೆ ಹಂತದ ಕಸರತ್ತಿನ ಕೌತುಕ ಸೃಷ್ಟಿಯಾಗಿತ್ತು.

ಯಾರಾಗ್ತಾರೆ ಬಿಜೆಪಿ ಅಭ್ಯರ್ಥಿ?: ರಾಯಚೂರು ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್‌ ಹಂಚಿಕೆಯೂ ಸಹ ಪಕ್ಷದ ರಾಜ್ಯ ಮತ್ತು ರಾಷ್ಟ್ರ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಬಿಜೆಪಿಯಿಂದ ಈಗಾಗಲೇ ಎರಡೂ ಪಟ್ಟಿಗಳನ್ನು ಪ್ರಕಟಿಸಲಾಗಿದೆ. ಮೊದಲ ಪಟ್ಟಿಯಲ್ಲಿ ರಾಜ್ಯದ ಒಂದೇ ಒಂದು ಕ್ಷೇತ್ರಕ್ಕೆ ಟಿಕೆಟ್‌ ಘೋಷಿಸಿದಿಲ್ಲ. ಆದರೆ ಎರಡನೇ ಪಟ್ಟಿಯಲ್ಲಿ 28ರ ಪೈಕಿ 20 ಕ್ಷೇತ್ರಗಳಿಗೆ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿತ್ತು.

ಉಳಿದ 8 ಕ್ಷೇತ್ರಗಳಲ್ಲಿ 3 ಮೈತ್ರಿ ಪಕ್ಷ ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದರಿಂದ ಇನ್ನುಳಿದ 5 ಕ್ಷೇತ್ರಗಳಲ್ಲಿ ಮೂರು ಕಡೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಈ ಕುರಿತು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ದೆಹಲಿಯಲ್ಲಿ ಮೋದಿ ಹಾಗೂ ಶಾ, ನಡ್ಡ ಅವರೊಂದಿಗೆ ಚರ್ಚಿಸುತ್ತಿದ್ದು ಶೀಘ್ರದಲ್ಲಿಯೇ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡಿ ಇಂದು ರಾಯಚೂರು ಸೇರಿ ಉಳಿದ ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ.