ಸಾರಾಂಶ
ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಒಂದೇ ಒಂದು ಅಭಿವೃದ್ಧಿ ಕಾರ್ಯ ಮಾಡದೇ ಅಭಿವೃದ್ಧಿಗೆ ಚೊಂಬು ನೀಡಿದೆ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವಥ್ ನಾರಾಯಣ ಆರೋಪಿಸಿದರು.
ಅವರು ಶುಕ್ರವಾರ ಇಲ್ಲಿನ ಅರವಿಂದ ನಗರದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿದೆ. ತಾನು ನೀಡಿದ ಭರವಸೆಗಳನ್ನು ಸಮರ್ಪಕವಾಗಿ ಈಡೇರಿಸದೆ ಜನರ ದಾರಿ ತಪ್ಪಿಸುತ್ತಿದೆ. ಈ ಮೂಲಕ ಸುಳ್ಳು ಹೇಳುವ ಮೂಲಕ ಜನರ ಕೈಗೆ ಚೊಂಬು ನೀಡಿದೆ ಎಂದರು.
ಯಾವುದೇ ಒಂದು ಸರ್ಕಾರ ಅಧಿಕಾರಕ್ಕೆ ಬಂದ 4 ವರ್ಷಗಳ ನಂತರ ಆಡಳಿತ ವಿರೋಧಿ ಅಲೆ ಬರುವುದು ಸಹಜ. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 100 ದಿನಗಳೊಳಗೆ ಆಡಳಿತ ವಿರೋಧಿ ಅಲೆ ಬಂದಿರುವುದು ಸರ್ಕಾರದ ಕಾರ್ಯವೈಖರಿ ಬಗ್ಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ. ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ವರೆಗೆ ಒಂದೇ ಒಂದು ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಿಲ್ಲ. ಅಭಿವೃದ್ಧಿ ಕಾಮಗಾರಿಗೆ ಅನುದಾನ ನೀಡಿಲ್ಲ ಎಂದು ಆಡಳಿತ ಪಕ್ಷದ ಶಾಸಕರೇ ದೂರುತ್ತಿದ್ದಾರೆ, ಅಭಿವೃದ್ಧಿ ಕೆಲಸಗಳಿಗೆ ಚೊಂಬು ನೀಡಿದ್ದು ಕಾಂಗ್ರೆಸ್ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ತನ್ನಲ್ಲಿರುವ ತಪ್ಪು ಮುಚ್ಚಿಟ್ಟುಕೊಳ್ಳಲು ಕೇಂದ್ರ ಸರ್ಕಾರದ ವಿರುದ್ಧ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ರಾಜ್ಯದ ಜನತೆಗೆ ಚೊಂಬು ನೀಡುತ್ತಿರುವ ಕಾಂಗ್ರೆಸ್, ನರೇಂದ್ರ ಮೋದಿ ಕೈಗೊಂಡ ಅಭಿವೃದ್ಧಿ ಕೆಲಸಗಳ ಕುರಿತು ಪ್ರಶ್ನೆ ಮಾಡುತ್ತಿದೆ. ತನ್ನ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದ ಮೇಲೆ ಗೂಬೆ ಕೂಡಿಸಿ ಲೋಕಸಭಾ ಚುನಾವಣೆಗೆ ಹೋಗುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಾಧನೆ ಬಗ್ಗೆ ಜನತೆಯ ಮುಂದಿಡಲಿ ಎಂದು ಸವಾಲು ಹಾಕಿದರು.
ಕೇಂದ್ರ ಸರ್ಕಾರ ಕೈಗೊಂಡಿರುವ ಸಾಧನೆಗಳ ಕುರಿತು ಮಾಹಿತಿ ಪತ್ರವನ್ನು ಜನತೆಯ ಮುಂದಿಟ್ಟು ನಾವು ಚುನಾವಣೆಗೆ ಹೋಗುತ್ತಿದ್ದೇವೆ. ಅದರಂತೆ ಸಿದ್ದರಾಮಯ್ಯ 11 ತಿಂಗಳ ಸಾಧನೆಯನ್ನು ಜನತೆಯ ಮುಂದಿಟ್ಟು ಚುನಾವಣೆ ಎದುರಿಸಲಿ ಎಂದರು.
ಮಾಧ್ಯಮ ಕೇಂದ್ರ ಉದ್ಘಾಟಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವುದಕ್ಕೆ ನೇಹಾ ಹಿರೇಮಠ ಹತ್ಯೆ, ಗದಗಿನಲ್ಲಿ ನಾಲ್ವರ ಕೊಲೆ ಇಂಥಹ ಅನೇಕ ಘಟನೆಗಳು ಸಾಕ್ಷಿಯಾಗಿವೆ ಎಂದರು.
ಈ ವೇಳೆ ವಿಧಾನಸಭೆಯ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ, ಶಾಸಕ ಮಹೇಶ ಟೆಂಗಿನಕಾಯಿ, ಬಸವರಾಜ ಕುಂದಗೋಳಮಠ, ದತ್ತಮೂರ್ತಿ ಕುಲಕರ್ಣಿ, ರವಿ ನಾಯಕ ಸೇರಿದಂತೆ ಹಲವರಿದ್ದರು.
;Resize=(128,128))
;Resize=(128,128))