ಕಾಂಗ್ರೆಸ್‌ ಮುಸಲ್ಮಾನರ ಸರ್ಕಾರ: ಶೆಟ್ಟರ್‌

| Published : Nov 01 2024, 12:03 AM IST

ಕಾಂಗ್ರೆಸ್‌ ಮುಸಲ್ಮಾನರ ಸರ್ಕಾರ: ಶೆಟ್ಟರ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿನ ಎಲ್ಲರ ಆಸ್ತಿಯನ್ನು ವಕ್ಫ್‌ ಬೋರ್ಡ್‌ಗೆ ಮಾಡಿಕೊಳ್ಳುವ ಪ್ರಯತ್ನ ಸರ್ಕಾರ ನಡೆಸಿದೆ. ಹೀಗಾಗಿ ಸರ್ಕಾರ ಇದೆಲ್ಲವನ್ನೂ ಕೈಬಿಟ್ಟು ಬಹಿರಂಗವಾಗಿ ರೈತರ ಕ್ಷಮಾಪಣೆ ಕೇಳಬೇಕು. ಈ ವಿಷಯದಲ್ಲಿ ಬಿಜೆಪಿ ವಿರೋಧ ಪಕ್ಷವಾಗಿ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದೆ.

ಹುಬ್ಬಳ್ಳಿ:

ಯಾರದ್ದೋ ಆಸ್ತಿಯನ್ನು ವಕ್ಫ್‌ ಬೋರ್ಡ್‌ಗೆ ಮಾಡುವ ಮೂಲಕ ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರ ಮುಸಲ್ಮಾನರ ಸರ್ಕಾರ ಎಂಬಂತಾಗಿದೆ ಎಂದು ಸಂಸದ ಜಗದೀಶ ಶೆಟ್ಟರ್‌ ಕಿಡಿಕಾರಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ಒಂದೇ ಒಂದು ನೀತಿ ಅಂದರೆ ಅದು ಅಲ್ಪಸಂಖ್ಯಾತರ ತುಷ್ಟೀಕರಣ. ಅಲ್ಪಸಂಖ್ಯಾತರ ತುಷ್ಟೀಕರಣ ನೀತಿ ಸಲುವಾಗಿ ರೈತರಿಗೆ ಮೋಸ ಮಾಡಲು ಮುಂದಾಗಿದೆ. ಯಾರದ್ದೋ ಆಸ್ತಿಯನ್ನು ವಕ್ಫ್‌ ಬೋರ್ಡ್‌ಗೆ ಮಾಡಿಕೊಳ್ಳುವುದು. ಇದೊಂದು ಬೇಜವಾಬ್ದಾರಿ ಸರ್ಕಾರವಾಗಿದೆ ಎಂದು ಆರೋಪಿಸಿದರು.

ತುಷ್ಟೀಕರಣಕ್ಕೆ ನಿಂತಿದೆ:

ರಾಜ್ಯದಲ್ಲಿ ಆಡಳಿತ ಎಂಬುದು ಬಿದ್ದು ಹೋಗಿದೆ. ವಿಜಯಪುರದಲ್ಲಿ 12 ಸಾವಿರ ಎಕರೆ ಜಮೀನುದಾರರಿಗೆ ಭೂಮಿಗೆ ವಕ್ಫ್ ಎಂದು ಹೆಸರು ಇಟ್ಟು ನೋಟಿಸ್ ನೀಡಿದನ್ನು ನೋಡಿದರೆ ದೊಡ್ಡ ಪ್ರಮಾಣದಲ್ಲಿ ತಪ್ಪಾಗುತ್ತಿದೆ. ಸರ್ಕಾರ ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಯಾವುದೇ ಹಂತಕ್ಕೆ ಹೋಗುತ್ತದೆ ಎಂದು ಸಾಬೀತು ಮಾಡಿದೆ ಎಂದರು.

ಸಿದ್ದರಾಮಯ್ಯ ಈ ವಿಷಯದ ಕುರಿತು ಮಾತನಾಡಿ ನೋಟಿಸ್ ಕೊಟ್ಟಿದ್ದನ್ನು ವಾಪಸ್ ಪಡೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಹಾಗಿದ್ದರೆ ಏಕೆ ನೋಟಿಸ್ ಕೊಡಬೇಕಿತ್ತು? ಮೊದಲು ನೋಟಿಸ್ ಕೊಡುವುದು, ಆಮೇಲೆ ವಾಪಸ್ ತೆಗೆದುಕೊಳ್ಳುವುದು ಇದರ ಮೂಲಕ ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಒತ್ತು ಕೊಡುವ ಕೆಲಸ ಆಗುತ್ತಿದೆ ಎಂದು ಸರ್ಕಾರದ ವಿರುದ್ಧ ಶೆಟ್ಟರ್‌ ಹರಿಹಾಯ್ದರು.

ನಾವು ರಾಜಕಾರಣ ಮಾಡುತ್ತಿಲ್ಲ:

ರಾಜ್ಯದಲ್ಲಿನ ಎಲ್ಲರ ಆಸ್ತಿಯನ್ನು ವಕ್ಫ್‌ ಬೋರ್ಡ್‌ಗೆ ಮಾಡಿಕೊಳ್ಳುವ ಪ್ರಯತ್ನ ಸರ್ಕಾರ ನಡೆಸಿದೆ. ಹೀಗಾಗಿ ಸರ್ಕಾರ ಇದೆಲ್ಲವನ್ನೂ ಕೈಬಿಟ್ಟು ಬಹಿರಂಗವಾಗಿ ರೈತರ ಕ್ಷಮಾಪಣೆ ಕೇಳಬೇಕು. ಈ ವಿಷಯದಲ್ಲಿ ಬಿಜೆಪಿ ವಿರೋಧ ಪಕ್ಷವಾಗಿ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದೆ. ಇದರಲ್ಲಿ ಯಾವುದೇ ರಾಜಕಾರಣ ಮಾಡುತ್ತಿಲ್ಲ‌. ನಿಜವಾಗಿಯೂ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಎಂದರು.

ವಕ್ಫ್‌ ಹೆಸರು ತೆಗೆದುಹಾಕಿ:

ರಾಜ್ಯ ಸರ್ಕಾರದ ಇಮೇಜ್ ಡೌನ್ ಆಗುತ್ತಾ ಸಾಗಿದೆ. ಕಾಂಗ್ರೆಸ್ ಸರ್ಕಾರ ಎಂದರೆ ಮುಸಲ್ಮಾನರ ಸರ್ಕಾರ ಎಂಬಂತಾಗಿದೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ರೈತರು ದಂಗೆ ಏಳುವ ಕಾಲ ಬರಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ಎಚ್ಚೆತ್ತುಕೊಂಡು ನೋಟಿಸ್ ನೀಡುವುದನ್ನು ಕೈಬಿಡಬೇಕು. ರೈತರ ಜಮೀನುಗಳಲ್ಲಿ ದಾಖಲಾದ ವಕ್ಫ್ ಹೆಸರನ್ನು ತೆಗೆದುಹಾಕಬೇಕು ಎಂದರು.

ಕಿತ್ತೂರು- ಧಾರವಾಡ ರೈಲ್ವೆ ಮಾರ್ಗದ ಕುರಿತು ಮಾತನಾಡಿ, ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಮುಗಿದಿದೆ. ಸುರೇಶ ಅಂಗಡಿ ಈ ಬಗ್ಗೆ ಪ್ರಕ್ರಿಯೆ ನಡೆಸಿದ್ದರು. ಮುಂದಿನ ಒಂದೆರಡು ತಿಂಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿಯಲಿದೆ. ಆ ಬಳಿಕ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದರು.