ಸಾರಾಂಶ
ಈ ಬಾರಿ ಭೀಕರ ಬರಗಾಲದಿಂದ ರೈತ ಸಮುದಾಯ ಸಂಕಷ್ಟಕ್ಕೊಳಗಾಗಿದೆ. ಕೆಲವೆಡೆ ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ. ಇಂತಹ ಪರಿಸ್ಥಿತಿ ಎದುರಾದರೂ ಹೆಕ್ಟೇರ್‌ಗೆ ₹೨೦೦೦ ಸಾವಿರ ಘೋಷಿಸಿರುವುದು ನಾಚಿಕೆಗೇಡಿನ ಕೆಲಸ.
ಮುಂಡಗೋಡ:
ಅಧಿಕಾರಕ್ಕೆ ಬಂದ ಬಳಿಕ ಯುವಜನತೆಗೆ ಉದ್ಯೋಗ ಸೃಷ್ಟಿಸುವ ವಾಗ್ದಾನ ಮಾಡಿದ್ದ ಕಾಂಗ್ರೆಸ್ ಸರ್ಕಾರ ಈ ವರೆಗೂ ಈಡೇರಿಸಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ (ರೈತ ಬಣ) ರಾಜ್ಯ ಯುವ ಘಟಕದ ಅಧ್ಯಕ್ಷ ಚಂದ್ರಶೇಖರ ಭೋವಿ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ ಭೀಕರ ಬರಗಾಲದಿಂದ ರೈತ ಸಮುದಾಯ ಸಂಕಷ್ಟಕ್ಕೊಳಗಾಗಿದೆ. ಕೆಲವೆಡೆ ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ. ಇಂತಹ ಪರಿಸ್ಥಿತಿ ಎದುರಾದರೂ ಹೆಕ್ಟೇರ್‌ಗೆ ₹೨೦೦೦ ಸಾವಿರ ಘೋಷಿಸಿರುವುದು ನಾಚಿಕೆಗೇಡಿನ ಕೆಲಸ. ಬರುವ ಅಧಿವೇಶನದಲ್ಲಿ ಎಕರೆಗೆ ₹೨೦ ಸಾವಿರ ಪರಿಹಾರ ಘೋಷಿಸಬೇಕು. ಇಲ್ಲದಿದ್ದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕಲಿಸಿದ ಪಾಠವನ್ನು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜನತೆ ಕಲಿಸಲಿದ್ದಾರೆ ಎಂದು ಎಚ್ಚರಿಸಿದ್ದರು. ತಕ್ಷಣ ತಮ್ಮ ಧೋರಣೆ ಬದಲಾಯಿಸದೇ ಇದ್ದಲ್ಲಿ ರಾಜ್ಯದಲ್ಲಿ ಒಂದು ಲೋಕಸಭಾ ಸ್ಥಾನ ಹೊಂದಿರುವ ಕಾಂಗ್ರೆಸ್ ಮುಂಬರುವ ಚುನಾವಣೆಯಲ್ಲಿ ಅದನ್ನು ಕೂಡ ಕಳೆದುಕೊಳ್ಳಲಿದೆ ಎಂದು ಹೇಳಿದರು.ಮಕ್ಕಳನ್ನು ಓದಿಸಿ ವಿದ್ಯಾವಂತರನ್ನಾಗಿಸಿ ಎಂದು ರಾಜಕಾರಣಿಗಳು ಭಾಷಣದಲ್ಲಿ ಹೇಳುತ್ತಾರೆ. ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಸಿಗುತ್ತಿಲ್ಲ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ. ಹಾಗಾಗಿ ಸರ್ಕಾರಿ ನೌಕರರ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ದಾಖಲಿಸುವ ಕಾನೂನು ಜಾರಿಗೊಳಿಸಬೇಕು. ಅಲ್ಲದೇ ಸರ್ಕಾರಿ ಆಸ್ಪತ್ರೆ ವೈದ್ಯರು ಖಾಸಗಿ ಆಸ್ಪತ್ರೆ ತೆರೆಯದಂತೆ ಆದೇಶಿಸಬೇಕು. ಅಂದಾಗ ಮಾತ್ರ ಸುಧಾರಣೆ ಸಾಧ್ಯ ಎಂದು ಹೇಳಿದರು.ಉತ್ತರ ಕನ್ನಡ ಜಿಲ್ಲಾ ಯುವ ಘಟಕದ ಅಧ್ಯಕ್ಷ ಮಂಗೇಶ ಲಮಾಣಿ, ಜಿಲ್ಲಾ ಮಹಿಳಾಧ್ಯಕ್ಷೆ ದುರ್ಗಮ್ಮ ಭೋವಿ, ಉಪಾಧ್ಯಕ್ಷೆ ಚೈತ್ರಾ ಇಂಗಳಗಿ, ಹಾಸನ ಜಿಲ್ಲಾಧ್ಯಕ್ಷ ದಯಾನಂದ, ಹಾಸನ ಯುವ ಘಟಕದ ಜಿಲ್ಲಾಧ್ಯಕ್ಷ ಸಿದ್ದೇಶ, ಉಪಾಧ್ಯಕ್ಷ ಕಾಂತರಾಜ, ಮಲ್ಲೇಶ ಲಮಾಣಿ, ಗಣೇಶ ಗುಲ್ಯಾನವರ, ಮಾರುತಿ ಲಮಾಣಿ, ರಾಜು ಮೊಸಳಗಿ, ಮಾಲತೇಶ ಇಂಗಳಗಿ, ಹುಲೆಪ್ಪ ಗೌಡ್ರ, ಉದಯಕುಮಾರ ಕವಟೆ ಉಪಸ್ಥಿತರಿದ್ದರು.