ಪ್ರಜಾಪ್ರಭುತ್ವ ಬಲಪಡಿಸದ ಕಾಂಗ್ರೆಸ್‌: ಕಾಗೇರಿ

| Published : Apr 24 2024, 02:17 AM IST

ಸಾರಾಂಶ

ಕಾಂಗ್ರೆಸ್‌ನವರು ಎಂದಿಗೂ ಪ್ರಜಾಪ್ರಭುತ್ವವನ್ನು ಬಲಪಡಿಸಿಲ್ಲ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.

ಜೋಯಿಡಾ: ದೇಶ ಉನ್ನತಿಯತ್ತ ಸಾಗಬೇಕು ಎಂದರೆ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿಯಬೇಕು ಎಂದು ಉತ್ತರಕನ್ನಡ ಬಿಜೆಪಿ ಲೋಕಸಭಾ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ತಾಲೂಕಿನ ಗುಂದದಲ್ಲಿ ಕಾರ್ಯಕರ್ತರ ಹಾಗೂ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್‌ನವರು ಎಂದಿಗೂ ಪ್ರಜಾಪ್ರಭುತ್ವವನ್ನು ಬಲಪಡಿಸಿಲ್ಲ. ಕೇವಲ ಗಾಂಧಿ ಕುಟುಂಬಕ್ಕೆ ಪ್ರೋತ್ಸಾಹ ನೀಡಿದೆ. ನಾವು ಹಾಕುವ ಮತ ಇನ್ನೂ ಐದು ವರ್ಷಗಳ ಅಭಿವೃದ್ಧಿಗೆ ಕಾರಣವಾಗಿದೆ. ಕಳೆದ 10 ವರ್ಷಗಳಲ್ಲಿ ಬಿಜೆಪಿ ಸಾಧನೆ ನಿಮ್ಮ ಕಣ್ಣ ಮುಂದೆಯೇ ಇದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ನಮ್ಮ ಜೀವಕ್ಕೆ ಮೊದಲು ಗ್ಯಾರಂಟಿ ಕೊಡಲಿ. ಆಮೇಲೆ ಇವರು ಗ್ಯಾರಂಟಿ ನೀಡಲಿ ಎಂದರು.

ಮಾಜಿ ಶಾಸಕ ಸುನೀಲ್ ಹೆಗಡೆ ಮಾತನಾಡಿ, ಅಖಂಡ ಭಾರತವನ್ನು ಉಳಿಸುವುದೇ ಬಿಜೆಪಿಯ ಮೊದಲನೇ ಉದ್ದೇಶ. ಇನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಚೊಂಬು ಕೊಡುವ ಕೆಲಸ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ ಮಾತನಾಡಿ, ಭಾರತ ವಿಶ್ವದಲ್ಲಿ ಪ್ರಖ್ಯಾತಿ ಪಡೆಯಲು ನರೇಂದ್ರ ಮೋದಿಯವರೇ ಕಾರಣ. ನಮ್ಮ ಧರ್ಮ ಉಳಿಯಬೇಕು ಎಂದರೆ ಮೋದಿಯವರನ್ನೇ ಮತ್ತೊಮ್ಮೆ ಆಯ್ಕೆ ಮಾಡೋಣ ಎಂದು ಮನವಿ ಮಾಡಿದರು.

ಜೋಯಿಡಾ ಬಿಜೆಪಿ ಅಧ್ಯಕ್ಷ ಶಿವಾಜಿ ಗೋಸಾವಿ, ಜೆಡಿಎಸ್ ಅಧ್ಯಕ್ಷ ಅಜಿತ್ ಥೋರವಥ್, ಮುಖಂಡ ಅರುಣ ಕಾಂಬ್ರೇಕರ, ಉಮೇಶ್ ಭಾಗ್ವತ್, ಆರ್.ವಿ. ದಾನಗೇರಿ, ಗಣಪತಿ ಕರಂಜೇಕರ, ಸುಧಾಕರ ರೆಡ್ಡಿ, ಶೋಭಾ ಎಲ್ಲೆಕರ, ವಿಷ್ಣು ಬಿರಂಗತ್, ಚಂದ್ರಶೇಖರ ಸಾವರಕರ ಉಪಸ್ಥಿತರಿದ್ದರು.