ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಕೇಂದ್ರ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ, ರಾಮನವಮಿ ಅಂಗವಾಗಿ, ಚಳಕಾಪೂರ ಗ್ರಾಮದ ಹನುಮಾನ ದೇವಸ್ಥಾನಕ್ಕೆ ತೆರಳಿ, ರಾಮಭಕ್ತ ಹನುಮಂತನ ಪೂಜೆ ನೆರವೇರಿಸಿ, ಸದ್ಗೂರು ಶ್ರೀ ಸಿದ್ಧಾರೂಢ ಸ್ವಾಮೀಜಿಯವರ ಜನ್ಮದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸದ್ಗುರು ಸಿದ್ಧಾರೂಢರ ದರ್ಶನ ಹಾಗೂ ಪೂಜ್ಯರಾದ ಶಿವಕುಮಾರ ಮಹಾಸ್ವಾಮೀಜಿ ಅವರ ದರ್ಶನಾಶೀರ್ವಾದ ಪಡೆದುಕೊಂಡು ಅವರು ಮಾತನಾಡಿದರು.ಚಳಕಾಪೂರ ಗ್ರಾಮವು ಸದ್ಗುರು ಸಿದ್ಧಾರೂಢರು ಹುಟ್ಟಿದ ಕರ್ಮಭೂಮಿಯ ಆಗಿದೆ ಜೊತೆಗೆ ರಾಮಭಕ್ತ ಹನುಮಂತ ಈ ಗ್ರಾಮದ ಗುಡ್ಡದ ಮೇಲೆ ತನ್ನ ಪಾದಗಳಿಟ್ಟು ಈ ಭೂಮಿ ಪಾವನ ಮಾಡಿದ್ದಾರೆ ಎಂದರು.
ನಂತರ ಬೀದರ್ ನಗರದ ರಾಮಕೃಷ್ಣ ಆಶ್ರಮ, ವನವಾಸಿ ರಾಮಮಂದಿರ ಮತ್ತು ಓಲ್ಡ್ ಸಿಟಿಯ ಹಳೆಯ ರಾಮಮಂದಿರಕ್ಕೆ ಭೇಟಿ ನೀಡಿ, ರಾಮನ ಪೂಜೆ ಮಾಡಿ, ದರ್ಶನ ಪಡೆದುಕೊಂಡರು, ನೆರೆದಿದ್ದ ರಾಮಭಕ್ತರಿಗೆ ಶುಭಾಶಯ ಕೋರಿದರು.ತದನಂತರ ನಗರದಲ್ಲಿ ಸ್ವಾಭಿಮಾನಿ ಹಿಂದು ಕಾರ್ಯಕರ್ತರ ಬಳಗದಿಂದ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಸಮಸ್ತ ಹಿಂದುಗಳ ಆರಾಧ್ಯಧೈವವಾಗಿದ್ದ ಪ್ರಭು ಶ್ರೀರಾಮರ ಜನ್ಮ ಭೂಮಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಹಿಂದೆ ಲಕ್ಷಾಂತರ ಹಿಂದುಗಳ ತ್ಯಾಗವಿದೆ, ಎಲ್ಲರ ಇಚ್ಛೆಯಂತೆ ಕಳೆದ ವರ್ಷ ರಾಮಮಂದಿರ ನಿರ್ಮಾಣ ಮಾಡಿ ಕೋಟ್ಯಂತರ ಭಕ್ತರ ಇಚ್ಚೆಯನ್ನು ನರೇಂದ್ರ ಮೋದಿ ಈಡೇರಿಸಿದ್ದಾರೆ ಎಂದು ತಿಳಿಸಿದರು.
ಆದರೆ ಕಾಂಗ್ರೆಸ್ ಪಕ್ಷದ ತುಷ್ಟೀಕರಣದ ರಾಜನೀತಿಯಿಂದ, ರಾಮಮಂದಿರ ನಿರ್ಮಾಣಕ್ಕೆ ಸತತವಾಗಿ ಅಡ್ಡಿಪಡಿಸಿತ್ತು. ಹಿಂದುಗಳ ವಿರುದ್ಧ, ರಾಮಮಂದಿರ ನಿರ್ಮಾಣದ ವಿರುದ್ಧವಾಗಿ 24 ಜನ ವಕೀಲರನ್ನು ನೇಮಿಸಿದ್ದರೂ ಬಿಜೆಪಿ ಸರ್ಕಾರ ಎಲ್ಲಾ ಅಡೆತಡೆಗಳನ್ನು ಬಗೆಹರಿಸಿ ಎಲ್ಲರ ಇಚ್ಛೆಯಂತೆ ರಾಮಮಂದಿರ ನಿರ್ಮಾಣ ಮಾಡಿದ್ದೇವೆ ಎಂದರು.ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ಶಾಸಕ ಡಾ. ಶೈಲೆಂದ್ರ ಬೆಲ್ದಾಳೆ, ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಮುಖಂಡರಾದ ಎನ್‌ಆರ್ ವರ್ಮಾ, ಉಮಕಾಂತ ನಾಗಮಾರಪಳ್ಳಿ, ಸುನೀಲ್ ದಳವೆ, ಗುರುನಾಥ ಜ್ಯಾಂತಿಕರ್, ರೇವಣಸಿದ್ದಪ್ಪ ಜಲಾದೆ, ವೀರಶೆಟ್ಟಿ ಖ್ಯಾಮಾ ಹಾಗೂ ಶಶಿಧರ ಹೊಸಳ್ಳಿ ಮುಂತಾದವರು ಉಪಸ್ಥಿತರಿದ್ದರು.