ಕನ್ನಡಪ್ರಭ ವಾರ್ತೆ ಸಾಗರ
ಅಡುಗೆ ಅನಿಲದ ಸಮರ್ಪಕ ವಿತರಣೆಯಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರದ ವಿರುದ್ದ ಸೋಮವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪೇಟೆ ಪೊಲೀಸ್ ಸ್ಟೇಷನ್ ವೃತ್ತದಲ್ಲಿ ರಸ್ತೆತಡೆ ನಡೆಸಿ ಪ್ರತಿಭಟಿಸಲಾಯಿತು.ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ ಮಾತನಾಡಿ, ಅಚ್ಚೆದಿನ್ ಬರುತ್ತದೆ ಎಂದು ದೇಶದ ಮತದಾರರು ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಮೂರನೇ ಬಾರಿಗೆ ಅಧಿಕಾರ ನೀಡಿದ್ದಾರೆ. ಆದರೆ ದೇಶದಲ್ಲಿ ಜನಸಾಮಾನ್ಯರ ಬವಣೆ ಜಾಸ್ತಿಯಾಗುತ್ತಿದೆ. ಮಧ್ಯಪ್ರಾಚ್ಯ ಯುದ್ದವನ್ನು ಮುಂದಿಟ್ಟುಕೊಂಡು ಅಡುಗೆ ಅನಿಲ ಕೊರತೆ ಎಂದು ಹೇಳಲಾಗುತ್ತಿದೆ. ಯುದ್ದ ಪ್ರಾರಂಭವಾಗುವ ಎಲ್ಲಾ ಲಕ್ಷಣ ಇದ್ದಾಗಲೇ ಕೇಂದ್ರ ಸರ್ಕಾರ ಅಗತ್ಯ ಮುಂಜಾಗ್ರತೆ ವಹಿಸಲಿಲ್ಲ. ಕೇಂದ್ರ ಸರ್ಕಾರದ ನಿರ್ಲಕ್ಷ್ಯವನ್ನು ದೇಶದ ಸಮಸ್ತ ಜನರು ಖಂಡಿಸಬೇಕು ಎಂದರು.
ಸಾಗರ ನಗರ ಯೋಜನಾ ಪ್ರಾಧಿಕಾರದ ಸದಸ್ಯ ಸೋಮಶೇಖರ ಲ್ಯಾವಿಗೆರೆ ಮಾತನಾಡಿ, ಒಂದು ಕಡೆ ಬೇಟಿ ಬಚಾವೋ ಎನ್ನುವ ಬಿಜೆಪಿ ಈಗ ಮಹಿಳೆಯರಿಗೆ ಗ್ಯಾಸ್ ಇಲ್ಲದೆ ಸೌದೆ ಒಲೆ ಮುಂದೆ ಕುಳಿತು ಕಣ್ಣೀರು ಹಾಕುವ ಸ್ಥಿತಿ ತಂದಿದೆ. ಗ್ಯಾಸ್ ಸಿಲೆಂಡರ್ ಕೊರತೆಯಿಂದ ಹೋಟೆಲ್‌ಗಳು ಬಂದಾಗಿದ್ದು ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಸಿವಿನಿಂದ ಬಳಲುವ ಸ್ಥಿತಿ ನಿರ್ಮಾಣವಾಗಿದೆ. ಅಡುಗೆ ಅನಿಲ ಕೊರತೆಯನ್ನು ತಕ್ಷಣ ಬಗೆಹರಿಸದೆ ಹೋದಲ್ಲಿ ಕಾಂಗ್ರೆಸ್ ಪಕ್ಷ ಇನ್ನಷ್ಟು ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು.ಎಪಿಎಂಸಿ ಮಾಜಿ ಅಧ್ಯಕ್ಷ ಚೇತನರಾಜ್ ಕಣ್ಣೂರು ಮಾತನಾಡಿ, ಗ್ಯಾಸ್ ಕೊರತೆಯಿಂದ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗುವ ಜೊತೆಗೆ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ನೇರ ಹೊಣೆ ಕೇಂದ್ರದ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರು. ಬಿಜೆಪಿ ಸರ್ಕಾರದ ವೈಫಲ್ಯದಿಂದಾಗಿ ದೇಶಕ್ಕೆ ಅತಿದೊಡ್ಡ ಆರ್ಥಿಕ ಕೊಡುಗೆ ನೀಡುತ್ತಿದ್ದ ಹೋಟೆಲ್ ಉದ್ಯಮ ಮುಚ್ಚುವ ಸ್ಥಿತಿಗೆ ಬಂದಿದೆ. ಅಲಿಪ್ತನೀತಿಯನ್ನು ಮೂಲೆಗೊತ್ತಿ ವಿದೇಶಿ ನೀತಿಗೆ ಮೋದಿ ಸರ್ಕಾರ ಸಮಾಧಿ ಕಟ್ಟಿದೆ. ರಸ್ತೆಯಲ್ಲಿ ಗ್ಯಾಸ್ ಸಿಲೆಂಡರ್ ಮಾರಾಟ ಎಂದು ಹೇಳಿಕೊಳ್ಳುತ್ತಿದ್ದ ಬಿಜೆಪಿ ಕಾಲದಲ್ಲಿ ಈಗ ರಸ್ತೆಗೆ ಖಾಲಿ ಸಿಲೆಂಡರ್ ಬಂದಿದೆ ಎಂದು ಲೇವಡಿ ಮಾಡಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಐ.ಎನ್.ಸುರೇಶಬಾಬು, ಗಣಪತಿ ಮಂಡಗಳಲೆ ಮಾತನಾಡಿದರು. ಸದ್ದಾಂ ದೊಡ್ಮನೆ, ಎಲ್.ಚಂದ್ರಪ್ಪ, ಮಧುಮಾಲತಿ, ಗಿರೀಶ್ ಕೋವಿ, ಡಿ.ದಿನೇಶ್, ಆನಂದ ಭೀಮನೇರಿ, ವಿಲ್ಸನ್ ಗೋನ್ಸಾಲ್ವಿಸ್, ಮೈಕಲ್ ಡಿಸೋಜ, ಸರಸ್ವತಿ ನಾಗರಾಜ್, ಸೈಯದ್ ಜಾಕೀರ್, ಉಷಾ, ಪ್ರಭಾವತಿ, ಮಂಜುಳಾ ಚಂದ್ರಪ್ಪ, ಗಜೇಂದ್ರ ಆನಂದಪುರ, ಲಲಿತಮ್ಮ ಎನ್., ಪರಶುರಾಮಪ್ಪ, ಕಬೀರ್ ಚಿಪ್ಳಿ, ಅಣ್ಣಪ್ಪ ಭೀಮನೇರಿ, ರವಿಕುಮಾರ್ ಇತರರು ಹಾಜರಿದ್ದರು.