ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂದಗಿ
ಕುತೂಹಲ ಮೂಡಿಸಿದ್ದ ಸಿಂದಗಿ ಪಟ್ಟಣದ ಪುರಸಭೆ ಆಡಳಿತ ಕೊನೆಗೂ ಕಾಂಗ್ರೆಸ್ ಪಾಲಾಗಿದೆ. ಒಟ್ಟು 23 ಸದಸ್ಯರಿರುವ ಸಿಂದಗಿ ಪುರಸಭೆಗೆ 2ನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಸೋಮವಾರ ನಡೆಯಿತು.ಸಾಮಾನ್ಯ ಮೀಸಲಾತಿಯಡಿ ಅಧ್ಯಕ್ಷ ಸ್ಥಾನಕ್ಕೆ 14ನೇ ವಾರ್ಡ್ ಸದಸ್ಯ ಶಾಂತವೀರ ಸಿದ್ದಪ್ಪ ಬಿರಾದಾರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಸಾಮಾನ್ಯ ಮೀಸಲಾತಿಯಡಿ ಉಪಾಧ್ಯಕ್ಷ ಸ್ಥಾನಕ್ಕೆ 18ನೇ ವಾರ್ಡ್ ಸದಸ್ಯ ರಾಜಣ್ಣ ಧರ್ಮಣ್ಣ ನಾರಾಯಣಕರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ, ಅವರಿಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಪ್ರಕ್ರಿಯೆಯಲ್ಲಿ 18 ಸದಸ್ಯರು ಮಾತ್ರ ಭಾಗವಹಿಸಿದ್ದು, 5 ಜನ ಸದಸ್ಯರು ಗೈರಾಗಿದ್ದರು. ಕೋರಂ ಭರ್ತಿಗೆ 9 ಜನ ಸದಸ್ಯರು ಬೇಕು, ಚುನಾವಣಾ ಪ್ರಕ್ರಿಯೆಯಲ್ಲಿ 18 ಜನರಿರುವ ಕಾರಣ ಚುನಾವಣೆ ಪೂರ್ಣಗೊಂಡಿದೆ ಎಂದು ಚುನಾವಣಾಧಿಕಾರಿಯಾಗಿದ್ದ ತಹಸೀಲ್ದಾರ್ ಪ್ರದೀಪಕುಮಾರ ಹಿರೇಮಠ ಮಾಹಿತಿ ನೀಡಿದರು.ಸಿಂದಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ, ಸದಸ್ಯರಾದ ಪ್ರತಿಭಾ ಕಲ್ಲೂರ, ಉಮಾದೇವಿ ಸುಲ್ಪಿ, ಕಲಾವತಿ ಕಡಕೋಳ, ಬಸವರಾಜ ಯರನಾಳ, ಹಣಮಂತ ಸುಣಗಾರ, ಬಾಷಾಸಾಬ್ ತಾಂಬೋಳಿ, ಖೈರುನಬಿ ನಾಟಿಕಾರ, ಹಾಸೀಂ ಆಳಂದ, ಪಾರ್ವತಿ ದುರ್ಗಿ, ಮಹಾಂತೇಶ ಬಿರಾದಾರ, ಡಾ.ಶಾಂತವೀರ ಮನಗೂಳಿ, ಭೀಮಣ್ಣ ಕಲಾಲ, ತಹಶೀನ್ ಮುಲ್ಲಾ, ಗೊಲ್ಲಾಳ ಬಂಕಲಗಿ, ಶರಣಗೌಡ ಪಾಟೀಲ, ಮಹಾದೇವಿ ನಾಯ್ಕೋಡಿ , ಮುಖ್ಯಾಧಿಕಾರಿ ಸುರೇಶ ನಾಯಕ ಸೇರಿದಂತೆ ಇತರರು ಇದ್ದರು.
ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಅಭಿವೃದ್ಧಿ ಕಡೆಗೆ ಹೆಚ್ಚು ಗಮನ ಹರಿಸಬೇಕು. ಸಿಂದಗಿ ಪಟ್ಟಣ ಸ್ವಚ್ಛತೆಯಿಂದ ಕೂಡಿರಲು ಶ್ರಮಿಸಬೇಕು. ನಾನು ಹೋರಾಟ ಮಾಡಿ ಸರ್ಕಾರಿ ಮಟ್ಟದಲ್ಲಿ ಹೆಚ್ಚಿನ ಅನುದಾನ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಗರದ ಅಭಿವೃದ್ಧಿ ವಿಚಾರದಲ್ಲಿ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಬರಬಾರದು. ಎಲ್ಲರು ಪಕ್ಷಾತೀತವಾಗಿ ಕೆಲಸ ಮಾಡಬೇಕು.- ಅಶೋಕ ಮನಗೂಳಿ,
ಶಾಸಕರು ಸಿಂದಗಿ.ನಾನು ಸತತ 3ನೇ ಬಾರಿ ಸದಸ್ಯನಾಗಿದ್ದು, ಅಧ್ಯಕ್ಷನಾಗುವ ಯೋಗ ಈಗ ಬಂದಿದೆ. ಸಿಂದಗಿ ಶಾಸಕ ಅಶೋಕ ಮನಗೂಳಿ ನೇತೃತ್ವದಲ್ಲಿಯೇ ಅಧ್ಯಕ್ಷನಾಗಿದ್ದು, ನನಗೆ ಬೆಂಬಲಿಸಿದ ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸುವೆ. ಶಾಸಕರ ಮಾರ್ಗದರ್ಶನದಲ್ಲಿ ಪಕ್ಷ ಭೇದ ಮರೆತು ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವೆ.-ಶಾಂತವೀರ ಬಿರಾದಾರ,
ನೂತನ ಅಧ್ಯಕ್ಷ.ದಿ.ಎಂ.ಸಿ.ಮನಗೂಳಿ ಅವರ ಸಹಕಾರದಿಂದ 2ನೇ ಬಾರಿ ಜೆಡಿಎಸ್‌ನಿಂದ ಸದಸ್ಯನಾಗಿ ಆಯ್ಕೆಯಾಗಿದ್ದು, ಪ್ರಸ್ತುತ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದೇನೆ. ಶಾಸಕರು, ನೂತನ ಅಧ್ಯಕ್ಷರು ಸೇರಿ ಎಲ್ಲ ಸದಸ್ಯರ ಮಾರ್ಗದರ್ಶನದಲ್ಲಿ ಪಟ್ಟಣದ ಅಭಿವೃದ್ಧಿಗೆ ಕೆಲಸ ಮಾಡುವೆ.-ರಾಜಣ್ಣ ನಾರಾಯಣಕರ,
ನೂತನ ಉಪಾಧ್ಯಕ್ಷ.