ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಸರ್ವಧರ್ಮವನ್ನು ಸಮಾನಾಗಿ ಕಂಡು ಸಮುದಾಯದ ಅಭಿವೃದ್ಧಿಗೆ ಶ್ರಮಿಸುವಲ್ಲಿ ಕಾಂಗ್ರೆಸ್ ಪಕ್ಷ ಬದ್ದವಾಗಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.ಪಟ್ಟಣದ ಪೇಟೆ ಮುಸ್ಲಿಂ ಬ್ಲಾಕ್, 7ನೇ ವಾರ್ಡ್‌ನ ಈದ್ಗಾ ಮೊಹಲ್ಲಾ, ತಾಲೂಕಿನ ಬೆಳಕವಾಡಿ, ಕಲ್ಕುಣಿ ಹಾಗೂ ಕಿರುಗಾವಲು ಗ್ರಾಮಗಳ ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಚಾಲನೆ ನೀಡಿ ಮಾತನಾಡಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಬೆಳಕವಾಡಿ, ಕಲ್ಕುಣಿ, ಕಿರುಗಾವಲು, ಪಟ್ಟಣದ ಹಲವು ವಾರ್ಡ್ ಗಳ ಅಲ್ಪಸಂಖ್ಯಾತರ ಕಾಲೋನಿಯಲ್ಲಿ ರಸ್ತೆ, ಚರಂಡಿ ಕಾಮಗಾರಿ ಮಾಡಲಾಗುತ್ತಿದೆ. ಇದೇ ಪ್ರಥಮ ಬಾರಿಗೆ ಸರ್ಕಾರ ಇಂತಹ ಕಾರ್ಯಕ್ರಮ ರೂಪಿಸಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡು ಅವುಗಳನ್ನು ಪೂರ್ಣಗೊಳಿಸಲು ಮುಂದಾಗುತ್ತೇವೆ ಎಂದರು.ಕಳೆದ ಹಲವು ವರ್ಷಗಳಿಂದ ನಡೆಯುತ್ತಿದ್ದ ಕುಡಿಯುವ ನೀರಿನ ಕಾಮಗಾರಿಗಿದ್ದ ಅಡೆತಡೆ ನಿವಾರಿಸಲಾಗಿದೆ. ಸದ್ಯದಲ್ಲಿಯೇ ಈ ಭಾಗದ ಹಲವು ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲಾಗುವುದು. ಬಹುನಿರೀಕ್ಷಿತ ಪೂರಿಗಾಲಿ ಹನಿ ನೀರಾವರಿ ಯೋಜನೆಯೊಂದಿಗೆ ಇದು ಸಹ ಉದ್ಘಾಟನೆಯಾಗಲಿದೆ. ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕೆಲಸಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದರು.
ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ 5 ಕೋಟಿ ರು. ಅನುದಾನ ಬಿಡುಗಡೆಗೊಂಡಿದೆ. ತಾಲೂಕಿನಲ್ಲಿರುವ ಅಲ್ಪಸಂಖ್ಯಾತರ ಕಾಲೋನಿಗಳ ಚರಂಡಿ ಹಾಗೂ ರಸ್ತೆಗಳನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಸರ್ಕಾರದಿಂದ ವಿಶೇಷ ಅನುದಾನವನ್ನು ತಂದು ಎಲ್ಲ ಸಮುದಾಯದ ಬೀದಿಗಳ ರಸ್ತೆ ಮತ್ತು ಚರಂಡಿಗಳನ್ನು ಅಭಿವೃದ್ಧಿಗೊಳಿಸಲಾಗುವುದು ಎಂದರು.ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ಕಾಣುತ್ತಿದೆ. ತಾಲೂಕು ಆಸ್ಪತ್ರೆಗೆ ಹೊಸ ತಂತ್ರಜ್ಞಾನ ಒಳಗೊಂಡ ಶಸ್ತ್ರಚಿಕಿತ್ಸೆಕೊಠಡಿಗಳು, ಎಲ್ಲಾ ಮಾದರಿ ರಕ್ತ ಪರೀಕ್ಷೆ ಡಯಾಲೀಸ್ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಸಾರ್ವಜನಿಕರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
ಪಟ್ಟಣದ ಪೇಟೆ ಮುಸ್ಲಿಂ ಬ್ಲಾಕ್‌ನಲ್ಲಿ 1 ಕೋಟಿ ರು. 7ನೇ ವಾರ್ಡ್‌ನ ಈದ್ಗಾ ಮೊಹಲ್ಲಾ ಬಳಿ 50 ಲಕ್ಷ ರು. ಹಾಗೂ ತಾಲೂಕಿನ ಕಲ್ಕುಣಿ ಗ್ರಾಮದ ಅಂಗನವಾಡಿ ಬಳಿ 25 ಲಕ್ಷ ರು. ವೆಚ್ಚದ ಸಿಸಿ ರಸ್ತೆ ಚರಂಡಿ, ಬೆಳಕವಾಡಿಯ ಹೊಸ ಬಡಾವಣೆಯಲ್ಲಿ 25 ಲಕ್ಷ ರು ಮತ್ತು ಕಿರುಗಾವಲು ಗ್ರಾಮದಲ್ಲಿ 1.25 ಕೋಟಿ ರು ವೆಚ್ಚದ ಚರಂಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು,ಈ ವೇಳೆ ಕಲ್ಕುಣಿ, ಬೆಳಕವಾಡಿ, ಕಿರುಗಾವಲು ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಇದ್ದರು.