ಮಂಗಳೂರು: ಕಾಂಗ್ರೆಸ್ ಪಕ್ಷದ ‘ಸಂಘಟನ್ ಸೃಜನ್ ಅಭಿಯಾನ್’ನಲ್ಲಿ ಕೇವಲ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮತ್ತು ಪದಾಧಿಕಾರಿ ಸ್ಥಾನಕ್ಕೆ ಮಾತ್ರವಲ್ಲ ಸ್ಥಳೀಯಾಡಳಿತ, ಅಸೆಂಬ್ಲಿ ಹಾಗೂ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಗೂ ಸಮಗ್ರ ಮಾಹಿತಿ, ಅಂಕಿ ಅಂಶ ಸಂಗ್ರಹಿಸಲಾಗುವುದು ಎಂದು ಅಭಿಯಾನ್ ಉಸ್ತುವಾರಿ ಆಗಿರುವ ಎಐಸಿಸಿ ವಕ್ತಾರ, ಕೇರಳ ಕೋಯಿಕ್ಕೋಡ್ ಶಾಸಕ ಜಯಂತ್ ಹೇಳಿದ್ದಾರೆ. ಸಂಘಟನ್ ಸೃಜನ್ ಅಭಿಯಾನ್ ಸಭೆ ನಡೆಸಲು ವೀಕ್ಷಕರಾಗಿ ಮಂಗಳೂರಿಗೆ ಮಂಗಳವಾರ ಆಗಮಿಸಿದ ವೇಳೆ ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಅಧ್ಯಕ್ಷರ ಆಯ್ಕೆಗೆ ಮಾತ್ರ ಸೀಮಿತವಾಗಿಲ್ಲ. ಇದನ್ನು ಹೊರತುಪಡಿಸಿ ಸ್ಥಳೀಯ ಸಂಸ್ಥೆಗಳ ಚುನಾವಣೆ, ಅಸೆಂಬ್ಲಿ ಹಾಗೂ ಲೋಕಸಭಾ ಚುನಾವಣೆಗೂ ಅಭ್ಯರ್ಥಿಗಳ ಆಯ್ಕೆ ಇದೇ ಮಾದರಿಯಲ್ಲಿ ನಡೆಯಲಿದೆ. ಅದಕ್ಕಾಗಿ ಈ ಅಭಿಯಾನದಲ್ಲೇ ಮುಂದಿನ ಚುನಾವಣೆಗೆ ಪೂರಕವಾಗುವ ನಿಟ್ಟಿನಲ್ಲಿ ಅಭ್ಯರ್ಥಿಗಳ ತಲಾಶ್ ಕೂಡ ನಡೆಯಲಿದೆ ಎಂದರು.ಸಂಘಟನ್ ಸೃಜನ್ ಅಭಿಯಾನ್ ಜು. 29ರಿಂದ ಆ. 12ರ ವರೆಗೆ ಎರಡು ವಾರ ನಡೆಯಲಿದೆ. ತಳಮಟ್ಟದಿಂದ ಪಕ್ಷವನ್ನು ಬಲಪಡಿಸಲು, ಮುಂದಿನ ದಿನಗಳಲ್ಲಿ ಸಾರ್ವಜನಿಕರ ಆಶೋತ್ತರ ಈಡೇರಿಸಲು ಎಐಸಿಸಿ ಹಮ್ಮಿಕೊಂಡಿರುವ ರಾಷ್ಟ್ರವ್ಯಾಪಿ ಸಂಘಟನಾತ್ಮಕ ಅಭಿಯಾನ ಇದಾಗಿದೆ ಎಂದರು.
ಎರಡು ವಾರಗಳ ಅವಧಿಯಲ್ಲಿ ಜಿಲ್ಲೆಯ ಪಕ್ಷದ ಹಿರಿಯ ನಾಯಕರು, ಬ್ಲಾಕ್, ಮಂಡಲ ಅಧ್ಯಕ್ಷರು, ಪದಾಧಿಕಾರಿಗಳು, ತಳಮಟ್ಟದ ಕಾರ್ಯಕರ್ತರು, ನಾಗರಿಕ ಸಮಾಜದ ಹಿರಿಯರ ಜೊತೆ ವಿಸ್ತೃತ ಚರ್ಚೆ ನಡೆಸುತ್ತೇವೆ. ಪ್ರತಿಯೊಬ್ಬರ ಸಲಹೆ, ಅಭಿಪ್ರಾಯಗಳನ್ನು ಪಡೆದು ಅವುಗಳನ್ನು ಮೌಲ್ಯಮಾಪನ ನಡೆಸಿ ಎಐಸಿಸಿಗೆ ಸಲ್ಲಿಸಲಾಗುವುದು ಎಂದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಅಂತಿಮ ನೇಮಕಾತಿ ನಿರ್ಧಾರ ಎಐಸಿಸಿ ಹೈಕಮಾಂಡ್ ವ್ಯಾಪ್ತಿಗೆ ಒಳಪಡುತ್ತದೆ. ಎಲ್ಲ ವರ್ಗದವರಿಗೂ ಸೂಕ್ತ ಸ್ಥಾನಮಾನ ನೀಡುವುದು ಕಾಂಗ್ರೆಸ್‌ನ ಕಳಕಳಿಯಾಗಿದೆ ಎಂದರು.
ಎಲ್ಲ ಸ್ಥಾನ ಗೆಲವು ಗುರಿ: ಅವಿಭಜಿತ ದ.ಕ. ಜಿಲ್ಲೆಯಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ಈ ಹಿಂದೆ 15ಕ್ಕೆ 15 ಸ್ಥಾನ ಗೆದ್ದಿದ್ದೆವು. ದ.ಕ. ಜಿಲ್ಲೆಯಲ್ಲಿ 8ರಲ್ಲಿ 7 ಸ್ಥಾನ ಗೆದ್ದಿದ್ದೆವು. ರಾಜ್ಯದಲ್ಲಿ 136 ಸ್ಥಾನದಲ್ಲಿ ಕಾಂಗ್ರೆಸ್ ಗೆದ್ದರೂ ಕರಾವಳಿಯಲ್ಲಿ 2 ಸ್ಥಾನ ಗೆಲ್ಲಲು ಸಾಧ್ಯವಾಗಿತ್ತು. ಮುಂದಿನ ಚುನಾವಣೆಯಲ್ಲಿ 8ಕ್ಕೆ 8 ಅಸೆಂಬ್ಲಿ ಸ್ಥಾನ ಹಾಗೂ ಲೋಕಸಭಾ ಸ್ಥಾನವನ್ನು ಕಾಂಗ್ರೆಸ್ ಗೆಲ್ಲುವ ಗುರಿ ಇರಿಸಿಕೊಳ್ಳಬೇಕು. ‘ಮೊದಲ ಪಕ್ಷ ಆ ಮೇಲೆ ಎಲ್ಲವೂ’ ಎಂಬ ತತ್ವದಡಿ ಕಾರ್ಯನಿರ್ವಹಿಸಬೇಕಾಗಿದೆ ಎಂದರು.
ವೀಕ್ಷಕ ತಂಡದ ಸದಸ್ಯರಾದ ಸತೀಶ್, ಸದಾಶಿವ, ವೆರೋನಿಕಾ ಕರ್ನೆಲಿಯೋ, ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಶಶಿಧರ ಹೆಗ್ಡೆ, ಪದ್ಮರಾಜ್ ಆರ್., ಸದಾಶಿವ ಉಳ್ಳಾಲ್, ನಝೀರ್ ಬಜಾಲ್ ಮತ್ತಿತರರಿದ್ದರು.