ಹಗರಿಬೊಮ್ಮನಹಳ್ಳಿ: ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಜನರ ಆಶೋತ್ತರಗಳನ್ನು ಪೂರೈಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ದೇಶದಲ್ಲಿ ಕೂಡ ಕಾಂಗ್ರೆಸ್ ದಿನೇದಿನೇ ಸದೃಢವಾಗುತ್ತಿದೆ. ರಾಹುಲ್ ಗಾಂಧಿ ಪ್ರಧಾನಿಯಾಗುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರ ಶಕ್ತಿ ಪೂರಕವಾಗಲಿದೆ ಎಂದು ಎಐಸಿಸಿ ವೀಕ್ಷಕ ವೇಣುಗೋಪಾಲ ರಾವ್ ಅಭಿಪ್ರಾಯಪಟ್ಟರು.ಪಟ್ಟಣದ ಕನ್ಯಕಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಗುರುವಾರ ಸಂಜೆ ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ದ ಸಂಘಟನ ಸೃಜನ್ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾಜಿ ಶಾಸಕ ಎಸ್.ಭೀಮನಾಯ್ಕ ಮಾತನಾಡಿ, ರಾಜ್ಯದಲ್ಲಿ ೨೦೨೮ರಲ್ಲಿಯೂ ಕಾಂಗ್ರೆಸ್ ಅಧಿಕಾರ ಹೊಂದುವುದು ನಿಚ್ಚಳವಾಗಿದೆ. ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿಯೂ ೧೫೦ಕ್ಕೂ ಹೆಚ್ಚು ಸೀಟು ಗಳಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಎರಡು ಬಾರಿ ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿಗೆ ಅಹರ್ನಿಶಿ ದುಡಿದ ತಮ್ಮನ್ನು ೨೦೨೩ರಲ್ಲಿ ಸೋಲಿಸಲಾಯಿತು. ತಮ್ಮ ಸೋಲಿಗೆ ಪಕ್ಷದೊಳಗಿರುವ ಹಿತಶತ್ರುಗಳೇ ಕಾರಣ. ಈ ಭೀಮಾನಾಯ್ಕ ಅವರನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮವರೇ ನಮ್ಮ ಬೆನ್ನಿಗಿರಿದರು ಎಂದು ಕಾರ್ಯಕರ್ತರೇ ಕಿಕ್ಕಿರಿದು ತುಂಬಿದ್ದ ಸಭೆಯಲ್ಲಿ ಗುಡುಗಿದರು.

ಪಕ್ಷದಲ್ಲಿದ್ದುಕೊಂಡು ಪಕ್ಷ ದ್ರೋಹ ಮಾಡುವವರಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ. ಈ ಕುರಿತು ಎಐಸಿಸಿ ವೀಕ್ಷಕರೊಂದಿಗೆ ಪಕ್ಷದ ಕಾರ್ಯಕರ್ತರು ಮುಕ್ತವಾಗಿ ಚರ್ಚಿಸಬೇಕು. ಪಕ್ಷ ದ್ರೋಹಿಗಳು ಡಿಸಿಸಿಯಂತಹ ಆಯಕಟ್ಟಿನ ಸ್ಥಳಗಳಲ್ಲಿರಬಾರದು. ಪಕ್ಷ ನಿಷ್ಠರಿಗೆ ಅವಕಾಶ ನೀಡಬೇಕು ಎಂದು ಕೋರಿದಾಗ ವೀಕ್ಷಕ ವೇಣುಗೋಪಾಲ ರಾವ್ ಸಮ್ಮತಿಸಿದರು.

ಪಕ್ಷದ ಮುಖಂಡರಾದ ಕೆಪಿಸಿಸಿ ಉಪಾಧ್ಯಕ್ಷ ಸುಭಾಷ್ ರಾಥೋಡ್, ಆರತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋರಿ ಗೋಣಿಬಸಪ್ಪ ಕೆ.ಎಂ.ದ್ವಾರಕೇಶ ಹಾಗೂ ನಂದಿಬಂಡಿ ಸೋಮಣ್ಣ ಇದ್ದರು.


ಜಿಲ್ಲಾ ಕಾಂಗ್ರೆಸ್ ಸ್ಥಾನದ ಬಹುತೇಕ ಆಕಾಂಕ್ಷಿಗಳು ಅರ್ಜಿಯೊಂದಿಗೆ ಸಭೆಯಲ್ಲಿ ಇದ್ದರು. ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಬಿ.ವಿ.ಶಿವಯೋಗಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಡಾ.ಸಾಹಿರಾಬಾನು, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಯಶೋದಮ್ಮ, ಕೆಪಿಸಿಸಿ ವಕ್ತಾರ ಪತ್ರೇಶ್ ಹಿರೇಮಠ, ಪುರಸಭೆ ಅಧ್ಯಕ್ಷೆ ರೇಷ್ಮಾ ಸಿಖಂದರ್, ಮಾಜಿ ಅಧ್ಯಕ್ಷ ಎಂ.ಮರಿರಾಮಪ್ಪ, ಜಿಪಂ ಮಾಜಿ ಸದಸ್ಯರಾದ ಹೆಗ್ಡಾಳ್ ರಾಮಣ್ಣ, ಅಕ್ಕಿ ತೋಟೇಶ್, ತಾಪಂ ಮಾಜಿ ಸದಸ್ಯ ಚಿಂತ್ರಪಳ್ಳಿ ದೇವೇಂದ್ರಪ್ಪ, ಮುಖಂಡರಾದ ಕುರಿ ಶಿವಮೂರ್ತಿ, ಗುರುಬಸವರಾಜ ಸೊನ್ನದ್, ಎಚ್.ಜಂದಿಸಾಹೇಬ್, ಹೆಗ್ಡಾಳು ಪರಶುರಾಮ ಇತರರಿದ್ದರು.