ಸಂವಿಧಾನ ಬದಲಾವಣೆ ಕುರಿತು ಕಾಂಗ್ರೆಸ್‌ ಅಪಪ್ರಚಾರ: ಸಂಸದ ಉಮೇಶ ಜಾಧವ್‌

| Published : Apr 16 2024, 01:13 AM IST / Updated: Apr 16 2024, 10:50 AM IST

ಸಂವಿಧಾನ ಬದಲಾವಣೆ ಕುರಿತು ಕಾಂಗ್ರೆಸ್‌ ಅಪಪ್ರಚಾರ: ಸಂಸದ ಉಮೇಶ ಜಾಧವ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಮಸ್ತ ಭಾರತೀಯರಿಗೆ ಅಂಬೇಡ್ಕರ್ ಅವರು ದೇವರ ಸ್ವರೂಪದಲ್ಲಿದ್ದಾರೆ. ನಮ್ಮನ್ನು ಸಂರಕ್ಷಿಸಲು ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠವಾದ ಸಂವಿಧಾನವನ್ನು ಅಂಬೇಡ್ಕರ್ ನೀಡಿ ಕಾಪಾಡುವಂತಾಗಿದೆ.

 ಕಲಬುರಗಿ :   ಸಮಸ್ತ ಭಾರತೀಯರಿಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇವರು ಹಾಗೂ ಅವರು ರಚನೆ ಮಾಡಿದ ಸಂವಿಧಾನ ನಮ್ಮೆಲ್ಲರ ಪವಿತ್ರ ಗ್ರಂಥ ಎಂದು ಸಂಸದ ಡಾ. ಉಮೇಶ್ ಜಾಧವ್ ಹೇಳಿದರು.

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133ನೇ ಜಯಂತಿ ಅಂಗವಾಗಿ ಕಲ್ಬುರ್ಗಿ ನಗರದ ಜಗತ್ತು ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದರು. ಸಮಸ್ತ ಭಾರತೀಯರಿಗೆ ಅಂಬೇಡ್ಕರ್ ಅವರು ದೇವರ ಸ್ವರೂಪದಲ್ಲಿದ್ದಾರೆ. ನಮ್ಮನ್ನು ಸಂರಕ್ಷಿಸಲು ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠವಾದ ಸಂವಿಧಾನವನ್ನು ಅಂಬೇಡ್ಕರ್ ನೀಡಿ ಕಾಪಾಡುವಂತಾಗಿದೆ. ನಮ್ಮ ಸಂವಿಧಾನವು ಅತ್ಯಂತ ಉದಾತ್ತವಾಗಿದ್ದು ಅದರ ಆಧಾರದಲ್ಲಿ ಆಡಳಿತ ನಡೆಸುವುದರಿಂದ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾದಿ ರಾಷ್ಟ್ರವೆಂದು ವಿಶ್ವದಲ್ಲೇ ಭಾರತವನ್ನು ಕೊಂಡಾಡಲಾಗುತ್ತಿದೆ.

ಇದಕ್ಕೆ ಕಾರಣೀಭೂತರಾದವರು ಡಾ. ಬಿ. ಆರ್ ಅಂಬೇಡ್ಕರ್ ಅವರು. ಇಂತಹ ಶ್ರೇಷ್ಠವಾದ ಮತ್ತು ಜೀವ ಪರವಾದ ಸಂವಿಧಾನವನ್ನು ಬದಲಾಯಿಸಲಾಗುತ್ತದೆ ಎಂದು ಕಾಂಗ್ರೆಸ್ ನವರು ಅಪಪ್ರಚಾರ ಮಾಡುತ್ತಿದ್ದಾರೆ. ಇದು ಶುದ್ಧ ಸುಳ್ಳು ಮತ್ತು ರಾಜಕೀಯ ಪ್ರೇರಿತವಾದದ್ದು. ಸಂವಿಧಾನವೇ ಭಾರತದ ಆಡಳಿತಕ್ಕೆ ಮತ್ತು ಬದುಕಿಗೆ ಮೂಲ ಮಂತ್ರವಾಗಿದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಾಂಗ್ರೆಸ್ಸಿನವರ ಆರೋಪಕ್ಕೆ ಈಗಾಗಲೇ ಉತ್ತರ ನೀಡಿದ್ದು ಈಗಿನ ಪರಿಸ್ಥಿತಿಯಲ್ಲಿ ಸ್ವತಃ ಅಂಬೇಡ್ಕರ್ ಅವರೇ ಬಂದರೂ ಸಂವಿಧಾನವನ್ನು ಬದಲಾಯಿಸಲು ಸಾಧ್ಯವಿಲ್ಲ. ಭಾರತದ ಸಂವಿಧಾನವು ಕೇವಲ ಒಂದು ಜಾತಿಗೆ ಒಂದು ಪಂಗಡಕ್ಕೆ ಸೇರಿದ ಸಂವಿಧಾನವಲ್ಲ.

ಅದು ಸಮಸ್ತ ಭಾರತೀಯರ ಹುದ್ದೆಗಳನ್ನು ಉಸಿರು ಮತ್ತು ಕಲ್ಯಾಣದ ಆಶಯ ಹೊತ್ತ ಪವಿತ್ರವಾದರತಕ್ಕಂತಹ ಗ್ರಂಥವಾಗಿದೆ. ಭಗವದ್ಗೀತೆ ಬೈಬಲ್, ಕುರಾನ್ ಗೆ ಇದ್ದಂತಹ ಗೌರವಾದರಗಳು ನಮ್ಮ ಸಂವಿಧಾನಕ್ಕೆ ಕೂಡಾ ಇದೆ. ಬಿಜೆಪಿಯು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಸರ್ವ ಜನರ ಕಲ್ಯಾಣವನ್ನು ಮಾಡುತ್ತಿದೆ.

ಆ ಕಾರಣಕ್ಕಾಗಿ ಭಾರತೀಯ ಜನತಾ ಪಕ್ಷದ ಲೋಕಸಭಾ ಚುನಾವಣೆಯ ಪ್ರಣಾಳಿಕೆಯನ್ನು ಅಂಬೇಡ್ಕರ್ ಅವರು ಹುಟ್ಟಿದ ಪವಿತ್ರ ದಿನವಾದ ಏ.14ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಿಡುಗಡೆಗೊಳಿಸಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಜನರಿಗೆ ಮುಟ್ಟಿಸುವ ದೊಡ್ಡ ಪ್ರಯತ್ನವನ್ನು ಮಾಡುತ್ತಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಆಚರಣೆಯ ಮೂಲಕ ಅಂಬೇಡ್ಕರ್ ಅವರು ತತ್ವ ಸಿದ್ಧಾಂತಗಳು ಭಾರತೀಯರ ಮನೆಮನೆಗೂ ಮನ ಮನಕ್ಕೂ ಮುಟ್ಟಲಿ. ಆ ಮೂಲಕ ಅಂಬೇಡ್ಕರ್ ಕಂಡ ಭಾರತ ಸಾಕಾರಗೊಳ್ಳಲಿ ಎಂದು ಜಾಧವ್ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಬಿ.ಜಿ ಪಾಟೀಲ್, ಶಶಿ ನಮೋಶಿ, ಶಾಸಕ ಬಸವರಾಜ್ ಮತ್ತಿ ಮೂಡು ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರು, ಮೇಯರ್ ವಿಶಾಲ ದರ್ಗಿ, ಅವ್ವಣ್ಣ ಮ್ಯಾಕೇರಿ ಇದ್ದರು.