ಸಾರಾಂಶ
ಬಿಜೆಪಿ ಕಾರ್ಯಕರ್ತರ ವಿರುದ್ಧ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಖಂಡನೆ ರಾಯಚೂರಿನ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಡಿಸಿಸಿ ನೇತೃತ್ವದಲ್ಲಿ ಪದಾಧಿಕಾರಿಗಳು, ಸದಸ್ಯರು, ಮುಖಂಡರು ಧರಣಿ ಪ್ರತಿಭಟನೆಯನ್ನು ನಡೆಸಿದರು.
ಕನ್ನಡಪ್ರಭ ವಾರ್ತೆ ರಾಯಚೂರು
ಅಸ್ಸಾಂ ರಾಜ್ಯ ಪ್ರವೇಶಿಸಿದ ಭಾರತ್ ಜೋಡೋ ನ್ಯಾಯ ಯಾತ್ರೆ ತಡೆದ ಬಿಜೆಪಿ ಕಾರ್ಯಕರ್ತರು ಎಐಸಿಸಿ ಪ್ರಮುಖ ನಾಯಕ ರಾಹುಲ್ ಗಾಂಧಿಯವರ ಮೇಲೆ ದಾಳಿಗೆ ಮುಂದಾಗಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಮಂಗಳವಾರ ಧರಣಿ-ಪ್ರತಿಭಟನೆಯನ್ನು ನಡೆಸಲಾಯಿತು.ಸ್ಥಳೀಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಡಿಸಿಸಿ ಪದಾಧಿಕಾರಿಗಳು, ಸದಸ್ಯರು, ಮುಖಂಡರು ಬಿಜೆಪಿಗರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಜಿಲ್ಲೆ ಕಾಂಗ್ರೆಸ್ ನಾಯಕರು, ಅಸ್ಸಾಂನಲ್ಲಿ ಭಾರತ್ ಜೋಡೋ ನ್ಯಾಯಾ ಯಾತ್ರೆ ಸಾಗುವಾಗ ರಾಹುಲ್ ಗಾಂಧಿಯವರ ಬಸ್ ಅಡ್ಡಗಟ್ಟಿ ಘೋಷಣೆ ಕೂಗಿ ಅವರ ಮೇಲೆ ಬಿಜೆಪಿ ಕಾರ್ಯಕರ್ತರು ದರ್ಪ ತೋರಿಸಿದ್ದು ಖಂಡನೀಯ. ಇದೇ ವೇಳೆ ಸಮಾಜ ಸುಧಾರಕ ಶ್ರೀಮಾಂತ್ ಶಂಕರದೇವ್ ಅವರ ಜನ್ಮ ಸ್ಥಳಕ್ಕೆ ಭೇಟಿ ನೀಡಲು ಅಸ್ಸಾಂ ಸರ್ಕಾರದ ಅನುಮತಿ ಪಡೆದರೂ ಕಾನೂನು ಸುವ್ಯವಸ್ಥೆಯ ನೆಪ ಒಡ್ಡಿ ಕೊನೆ ಗಳಿಗೆಯಲ್ಲಿ ಪ್ರವೇಶ ನಿರಾಕರಿಸಿರುವುದು ವ್ಯಕ್ತಿ ಸ್ವಾತಂತ್ರ್ಯ ಹಾಗೂ ಸಂವಿಧಾನಕ್ಕೆ ದ್ರೋಹ ಮಾಡಿದ್ದಾರೆ. ಅಲ್ಲದೇ ಧಾರ್ಮಿಕ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದ್ದು ದುರಾದೃಷ್ಟಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.ಅಸ್ಸಾಂ ರಾಜ್ಯದ ಶಂಕರ ದೇಗುಲ ಪ್ರವೇಶಕ್ಕೆ ರಾಹುಲ್ ಗಾಂಧಿಯನ್ನು ನಿರಾಕರಿಸಿದ ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವ ಹಕ್ಕುಗಳನ್ನು ಕಸಿದು ಸರ್ವಾಧಿಕಾರಿ ನಡೆಸುತ್ತಿದೆ ಎಂದು ಆರೋಪಿಸಿದರು.
ಮಣಿಪುರದಿಂದ ಜ.14 ರಂದು ಆರಂಭವಾಗಿದ್ದ 67 ದಿನದ ಈ ನ್ಯಾಯ ಯಾತ್ರೆಯು ಎರಡು ದಿನದ ಅರುಣಾಚಲ ಪ್ರದೇಶದ ಭೇಟಿ ಬಳಿಕ ಭಾನುವಾರವಷ್ಟೇ ಅಸ್ಸಾಂ ರಾಜ್ಯವನ್ನು ಪ್ರವೇಶಿಸಿತ್ತು. ಈ ವೇಳೆ ಬಿಜೆಪಿಯವರು ರಾಹುಲ್ ಗಾಂಧಿಯನ್ನು ದೇಗುಲ ಪ್ರವೇಶ ಮಾಡದಂತೆ ತಡೆಹಿಡಿಯಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಜಯಣ್ಣ, ಕೆ.ಶಾಂತಪ್ಪ, ಅಮರೇಗೌಡ ಹಂಚಿನಾಳ, ಅರುಣ ದೋತರಬಂಡಿ, ಸುಧಾಮ, ರಾಣಿ ರಿಚರ್ಡ್, ನಾಗವೇಳಿ, ನಿರ್ಮಲ, ಬಸವರಾಜ, ಶ್ರೀನಿವಾಸ ಸೇರಿದಂತೆ ಬ್ಲಾಕ್ ಸಮಿತಿಗಳ ಪ್ರಮುಖರು, ಕಾರ್ಯಕರ್ತರು ಇದ್ದರು.