ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಂಬೇರಿ ಸಿದ್ದ ಎಂದು ಸಂಸದ ಪ್ರತಾಪ್ ಸಿಂಹ ಅವಹೇಳನ ಮಾಡಿದ್ದಾರೆಂದು ಆರೋಪಿಸಿ ಮೈಸೂರು ನಗರ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿಯವರು ಮಂಗಳವಾರ ರಾತ್ರಿ ಪ್ರತಿಭಟಿಸಿದರು.
- ಸಂಸದರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಫೋಟೋ- 26ಎಂವೈಎಸ್5
----ಕನ್ನಡಪ್ರಭ ವಾರ್ತೆ ಮೈಸೂರುಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಂಬೇರಿ ಸಿದ್ದ ಎಂದು ಸಂಸದ ಪ್ರತಾಪ್ ಸಿಂಹ ಅವಹೇಳನ ಮಾಡಿದ್ದಾರೆಂದು ಆರೋಪಿಸಿ ಮೈಸೂರು ನಗರ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿಯವರು ಮಂಗಳವಾರ ರಾತ್ರಿ ಪ್ರತಿಭಟಿಸಿದರು.
ಮೈಸೂರು- ಹುಣಸೂರು ರಸ್ತೆಯಲ್ಲಿರುವ ಜಲದರ್ಶಿನಿ ಆವರಣದಲ್ಲಿರುವ ಸಂಸದರ ಕಚೇರಿಗೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಶನಿವಾರ ರಾತ್ರಿ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ, ಪೊಲೀಸರು ಜಲದರ್ಶಿನಿ ಪ್ರವೇಶ ದ್ವಾರದಲ್ಲೇ ಪ್ರತಿಭಟನಾಕಾರರನ್ನು ತಡೆದರು. ಈ ವೇಳೆ ಕೆಲಕಾಲ ರಸ್ತೆಯಲ್ಲೇ ಪ್ರತಿಭಟಿಸಿ, ಟೈರ್ ಸುಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯಕ್ಕೆ ಬಂದಾಗ ಸಂಸದ ಪ್ರತಾಪ್ ಸಿಂಹ ಎಲ್ಲಿದ್ದರು ಎಂಬುದರ ಬಗ್ಗೆ ಯೋಚಿಸಬೇಕು. ಸಿದ್ದರಾಮಯ್ಯ ಅವರು ಯಾವುದೇ ಕಪ್ಪುಚುಕ್ಕೆಯಿಲ್ಲದ ರಾಜಕಾರಣಿ. ಅವರ ವ್ಯಕ್ತಿತ್ವನ್ನು ಎಲ್ಲಾ ಪಕ್ಷದವರು ಕೊಂಡಾಡಿದ್ದಾರೆ. ಟಾರ್ಗೆಟ್ ಫಲಿಸಲ್ಲ ಎಂದು ತಿಳಿಸಿದರು.
ಪ್ರತಾಪ್ ಸಿಂಹ ಅವರು ನಿರಂತರವಾಗಿ ಗಲಭೆ ಎಬ್ಬಿಸುವ ಪ್ರಯತ್ನ ಮಾಡಿದ್ದಾರೆ. ಅವರು ಯಾವ ವಿದ್ಯಾರ್ಥಿ ಚಳವಳಿಯಿಂದಲೂ ಬಂದಿಲ್ಲ. ಮೋದಿ ಬಗ್ಗೆ ಪುಸ್ತಕ ಬರೆದು ರಾಜಕೀಯಕ್ಕೆ ಬಂದಿದ್ದಾರೆ. ಏಕವಚನದಲ್ಲಿ ಮುಖ್ಯಮಂತ್ರಿಗೆ ಅವಮಾನ ಮಾಡಿರುವ ಪ್ರತಾಪ್ ಸಿಂಹ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಅವರು ಆಗ್ರಹಿಸಿದರು.ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ, ಮುಖಂಡರಾದ ಡಾ. ಸುಶ್ರತ್ ಗೌಡ, ತಿಮ್ಮಯ್ಯ, ಸುರೇಶ್ ಪಾಲ್ಯ, ಮಹೇಶ್, ನಟರಾಜ್, ಬಸವಣ್ಣ ಮೊದಲಾದವರು ಇದ್ದರು.